Advertisement

ವಿಶೇಷ ವರದಿ: ಉಡುಪಿ: ಅಂಚೆ ಬ್ಯಾಂಕಿಂಗ್‌ನಲ್ಲಿ 46,374 ಖಾತೆ

10:19 PM Sep 28, 2020 | mahesh |

ಉಡುಪಿ: ಗ್ರಾಮೀಣ ಭಾಗದ ಜನರಿಗಾಗಿ ಭಾರತೀಯ ಅಂಚೆ ಇಲಾಖೆ ಇಂಡಿಯನ್‌ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ (ಐಪಿಪಿಬಿ) ಯೋಜನೆಯಡಿ ಉಡುಪಿ ಅಂಚೆ ವಿಭಾಗೀಯ ಕಚೇರಿಯಲ್ಲಿ 46,374 ಖಾತೆಗಳನ್ನು ತೆರೆಯಲಾಗಿದೆ. ಈ ಬಾರಿ ಖಾತೆಗಳ ಸಂಖ್ಯೆ ಇನ್ನಷ್ಟು ಹೆಚ್ಚಿಸುವ ಗುರಿ ಹೊಂದಿದೆ.

Advertisement

ಏನಿದು ಐಪಿಪಿಬಿ?
ಬ್ಯಾಂಕಿಂಗ್‌ ಸೇವೆಗಳಿಂದ ವಂಚಿತರಾಗಿರುವ ಜನತೆಗೆ ಪೂರ್ಣ ಪ್ರಮಾಣದ ಬ್ಯಾಂಕಿಂಗ್‌ ಸೇವೆಯ ಸೌಲಭ್ಯವನ್ನು ಒದಗಿಸಲು ಇರುವ ಅಡೆತಡೆಗಳನ್ನು ನಿವಾರಿಸುವಲ್ಲಿ ಐಪಿಪಿಬಿ (ಬ್ಯಾಂಕಿಂಗ್‌ ಸೇವೆ ಮನೆ ಬಾಗಿಲಿಗೆ) ಮುಖ್ಯಪಾತ್ರವಹಿಸಿದೆ. ಎನ್‌ಪಿಸಿಐ (ನ್ಯಾಶನಲ್‌ ಪೇಮೆಂಟ್‌ ಕಾರ್ಪೋರೇಶನ್‌ ಇಂಡಿಯಾ) ಅಡಿಯಲ್ಲಿ 2018ರ ಸೆಪ್ಟಂಬರ್‌ನಲ್ಲಿ ಬ್ಯಾಂಕಿಂಗ್‌ ಮನೆ ಬಾಗಿಲಿಗೆ ಎನ್ನುವ ಯೋಜನೆ ಜಾರಿಗೊಳಿಸಲಾಗಿತ್ತು.

ಅನುಕೂಲವೇನು?
ನೇರ ನಗದು ಸೌಲಭ್ಯಗಳಾದ ಗ್ಯಾಸ್‌ ಸಬ್ಸಿಡಿ, ಸಾಮಾಜಿಕ ಭದ್ರತಾ ಪಿಂಚಣಿ, ವಿದ್ಯಾರ್ಥಿ ವೇತನ ಮತ್ತು ಇತರೆ ಸಬ್ಸಿಡಿಗಳನ್ನು ಈ ಖಾತೆಯ ಮೂಲಕ ಪಡೆಯಬಹುದು. ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ಗೃಹಿಣಿಯರು, ನಗರಕ್ಕೆ ವಲಸೆ ಬಂದಿರುವವರು, ರೈತರು, ಕಾರ್ಮಿಕರು, ರಾಜ್ಯ ಸರಕಾರದ ನೇರ ಫ‌ಲಾನುಭವಿಗಳು, ವ್ಯಾಪಾರಿಗಳು, ಸಣ್ಣ ಉದ್ಯಮಿಗಳಿಗೆ ಐಪಿಪಿಬಿ ಖಾತೆಯ ಮೂಲಕ ಎಲ್ಲಿ ಬೇಕಾದರೂ ಹಣ ಪಡೆಯಬಹುದಾಗಿದೆ.

ಖಾತೆ ತೆರೆಯುವುದು ಹೇಗೆ?
ಒಂದೇ ನಿಮಿಷದಲ್ಲಿ ಶೂನ್ಯ ಮೊತ್ತದಲ್ಲಿ ಮನೆ ಬಾಗಿಲಲ್ಲೇ ಡಿಜಿಟಲ್‌ ಅಂಚೆ ಖಾತೆಯನ್ನು ತೆರೆಯ ಬಹುದಾಗಿದೆ. ಆಧಾರ ಕಾರ್ಡ್‌ ಹೊಂದಿದ ಪೋಸ್ಟ್‌ ಮಾಸ್ಟರ್‌ ಅಥವಾ ಅಂಚೆ ಕಚೇರಿಗೆ ಭೇಟಿಯಾಗಿ ಉಳಿತಾಯ ಖಾತೆ ತೆರೆಯಬಹುದು. ಇದು ಸಂಪೂರ್ಣ ಕಾಗದ ರಹಿತವಾಗಿದ್ದು, ಯಾವುದೇ ಸಹಿ ಅಥವಾ ದಾಖಲೆಗಳ ಪ್ರತಿ ನೀಡಬೇಕಾಗಿಲ್ಲ. ಆಧಾರ್‌ ಸಂಖ್ಯೆ, ಮೊಬೈಲ್‌ ಫೋನ್‌ ನಂಬರ್‌ ನೀಡಿದರೆ ಒಂದೇ ನಿಮಿಷದಲ್ಲಿ ಖಾತೆ ತೆರೆಯಲಿದೆ. ಐಪಿಪಿಬಿ ಮೊಬೈಲ್‌ ಆ್ಯಪ್‌ ಅನ್ನು ಗೂಗಲ್‌ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಕೊಂಡು ವ್ಯವಹಾರ ಮಾಡಬಹುದು.

ಆನ್‌ಲೈನ್‌ ಸೇವೆ
ಅಂಚೆ ಇಲಾಖೆಯ ಉಳಿತಾಯ ಖಾತೆಯೊಂದಿಗೆ ಜೋಡಿಸಿಕೊಂಡು, ಅಂಚೆ ಇಲಾಖೆ ಆರ್‌ಡಿ, ಪಿಪಿಎಫ್‌, ಸುಕನ್ಯಾ ಸಮೃದ್ಧಿ ಖಾತೆಗಳಿಗೆ ಮನೆಯಿಂದಲೇ ಹಣ ಜಮೆ ಮಾಡಬಹುದು. ಮನೆಯಿಂದಲೇ ವಿದ್ಯುತ್‌ ಬಿಲ್‌ ಪಾವತಿ, ಡಿಟಿಎಚ್‌ ಮತ್ತು ಮೊಬೈಲ್‌ ರೀಚಾರ್ಜ್‌ ಮಾಡಲು ಅವಕಾಶವಿದೆ. ಬಸ್‌, ರೈಲ್ವೇ, ವಿಮಾನ ಟಿಕೆಟ್‌ ಬುಕಿಂಗ್‌ ಸೇವೆಗಳು ಜತೆಗೆ ಇತರೆ ಆರ್ಥಿಕ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಸಾಲ, ಹೂಡಿಕೆ, ವಿಮಾ ಸೌಲಭ್ಯಗಳನ್ನು ಸಹ ಒದಗಿಸಲಾಗುತ್ತದೆ.

Advertisement

ಇಂದಿನಿಂದ ಅಭಿಯಾನ
ಸಾರ್ವಜನಿಕರು ತಮ್ಮ ಸಮೀಪದ ಅಂಚೆ ಕಚೇರಿಗಳಿಗೆ ಭೇಟಿ ನೀಡಿ ಅಥವಾ ಅಂಚೆಯಣ್ಣನ ಮೂಲಕ ಈ ಖಾತೆಗಳನ್ನು ತೆರೆದು ಡಿಜಿಟಲ್‌ ಬ್ಯಾಂಕ್‌ನ ಸೌಲಭ್ಯಗಳನ್ನು ಅತ್ಯಂತ ಸರಳವಾಗಿ ಮನೆಯಂಗಳದಲ್ಲೇ ಪಡೆದುಕೊಳ್ಳುವ ಸಲುವಾಗಿ ಉಡುಪಿ ವಿಭಾಗೀಯ ವ್ಯಾಪ್ತಿಯಲ್ಲಿ ಪ್ರತಿ ವರ್ಷದಂತೆ ಸೆ. 29ರಿಂದ ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ನಲ್ಲಿ ಖಾತೆಗಳನ್ನು ತೆರೆಯುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಬೆರಳಚ್ಚು ನೀಡಿ!
ನಗರ ಪ್ರದೇಶದವರು ಅಂಚೆ ಎಟಿಎಂ, ಡಿಜಿಟಲ್‌ ಆ್ಯಪ್‌ ಮೂಲಕ ಹಣ ಪಡೆಯ ಬಹುದು. ಆದರೆ ಗ್ರಾಮೀಣ ಪ್ರದೇಶದ ಕೆಲವು ಕಡೆಗಳಲ್ಲಿ ಇಂತಹ ಸೌಲಭ್ಯಗಳಿಲ್ಲ. ಹೀಗಾಗಿ ಮನೆಗೆ ಪೋಸ್ಟ್‌ ಮಾಸ್ಟರ್‌ ಬಂದಾಗ ಬೆರಳಚ್ಚು ನೀಡಿ, ಹಣ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ದಿನನಿತ್ಯ ಇದಕ್ಕಾಗಿ ಪೋಸ್ಟ್‌ ಮಾಸ್ಟರ್‌ಗೆ ದಿನಕ್ಕೆ 15,000 ರೂ. ಇಟ್ಟುಕೊಳ್ಳುವ ಅವಕಾಶ ನೀಡಲಾಗಿದೆ.

ಸೆ. 29ರಂದು ಪ್ರಾರಂಭ
ಉಡುಪಿ ವಿಭಾಗೀಯ ಕಚೇರಿಯಲ್ಲಿ ಬ್ಯಾಂಕಿಂಗ್‌ ಮನೆ ಬಾಗಿಲಿಗೆ ಎನ್ನುವ ಅಭಿಯಾನ ಸೆ. 29ರಂದು ಪ್ರಾರಂಭವಾಗಲಿದೆ. ಈ ದಿನ ಪೋಸ್ಟ್‌
ಮ್ಯಾನ್‌ ಮನೆ ಬಾಗಿಲಿಗೆ ಬಂದು ಡಿಜಿಟಲ್‌ ಖಾತೆ ತೆರೆಯಲು ಸಹಕರಿಸುವರು. ಬಳಿಕ ಅಂಚೆ ಕಚೇರಿಗೆ ಬಂದು ಖಾತೆ ತೆರೆಯಲು ಅವಕಾಶವಿದೆ. -ನವೀನ್‌ ಚಂದರ್‌, ಅಂಚೆ ಅಧೀಕ್ಷಕ, ವಿಭಾಗೀಯ ಕಚೇರಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next