ವಿಧಾನಸಭೆ: ಕೃಷ್ಣಾ ಮೇಲ್ದಂಡೆ ಯೋಜನೆಯ ಅನುಷ್ಟಾನದಲ್ಲಿ ಎಲ್ಲ ಸರ್ಕಾರಗಳಿಂದಲೂ ಅನ್ಯಾಯ ವಾಗಿದ್ದು, ಈ ಯೋಜನೆ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದರು.
ವಿಧಾನಸಭೆಯಲ್ಲಿ ಶುಕ್ರವಾರ ಇಲಾಖೆಗಳ ಬೇಡಿಕೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮತಾನಾಡಿದ ಅವರು, ಕೃಷ್ಣಾ ಕೊಳ್ಳದ ಯೋಜನೆ 1964 ರಿಂದ ಆರಂಭವಾಗಿದೆ. ಆಹಾರ ಭದ್ರತೆಗೆ ಪೂರಕವಾಗಲಿ ಅಂತ ವಿಯಪುರ ಜನರು ಜಮಿನು ಕಳಿದುಕೊಂಡರು. ಈ ಯೋಜನೆ ಸಚಿವರು, ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಬಂಗಾರದ ಬುಟ್ಟಿಯಾಗಿದೆ.
ಎಚ್.ಕೆ ಪಾಟೀಲರು ಕೃಷ್ಣೆಗೆ ಅನ್ಯಾಯವಾಗುತ್ತಿರುವ ಬಗ್ಗೆ ಪುಸ್ತಕ ಬರೆದರು. ಆದರೆ, ಅವರೇ ಮಂತ್ರಿಯಾದರೂ ನಮ್ಮ ಭಾಗಕ್ಕೆ ನ್ಯಾಯ ಒದಗಿಸಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್‌ನವರು ಪಾದಯಾತ್ರೆ ಮಾಡಿ, ಪ್ರತಿ ವರ್ಷ ಕೃಷ್ಣಾ ಕೊಳ್ಳದ ಯೋಜನೆಗಳಿಗೆ 10 ಸಾವಿರ ಕೋಟಿ ಕೊಡುವುದಾಗಿ ಹೇಳಿದ್ದರು. ಆದರೆ, ಐದು ವರ್ಷದಲ್ಲಿ 7200 ಕೋಟಿ ರೂ. ಮಾತ್ರ ನೀಡಿದ್ದಾರೆ.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 25000 ಕೋಟಿ ನೀಡುವುದಾಗಿ ಯಡಿಯೂರಪ್ಪ ಹೇಳಿದ್ದರು. ಆದರೂ ಜಾರಿಗೆ ಬಂದಿಲ್ಲ. ಕೃಷ್ನಾ ಕೊಳ್ಳದ ಯೋಜನೆಗಳು ಜಾರಿಗೆ ಬಂದರೆ, ರಾಜ್ಯದ ಶೇ 60 ರಷ್ಟು ಭಾಗ ನೀರಾವರಿ ಯಾಗಲಿದೆ. ಕೃಷ್ಣಾ ಯೋಜನೆಗಳನ್ನು ಪೂರ್ಣಗೊಳಿಸಲು ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು.
ಈಗ ಆಲಮಟ್ಟಿ ಆಣೆಕಟ್ಟೆಯ ಎತ್ತರ ಹೆಚ್ಚಿಸಲು ಜನರು ಮತ್ತೆ ಜಮೀನು ಕಳೆದುಕೊಳ್ಳುತ್ತಾರೆ. ಆದರೆ, ಪರಿಹಾರ ನೀಡುವ ವಿಚಾರದಲ್ಲಿ ತಾರತಮ್ಯವಾಗುತ್ತಿದೆ. ಒಂದೇ ನದಿಯ ಅಕ್ಕಪಕ್ಕದ ಜಮೀನುಗಳಿಗೆ ಬೇರೆ ಬೇರೆ ರೀತಿಯ ಪರಿಹಾರ ನೀಡಲಾಗುತ್ತಿದೆ. ಕೃಷ್ಣಾ ಯೋಜನೆಗಳನ್ನು ಪೂರ್ಣಗೊಳಿಸಲು ಎಷ್ಟು ಶತಮಾನಗಳು ಬೇಕು. ಈ ಯೋಜನೆಯಲ್ಲಿ ಸಾವಿರಾರು ಕೋಟಿ ರೂ. ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಸರ್ಕಾರ 5000 ಕೋಟಿ ರೂ. ಮೀಸಲಿಟ್ಟಿದ್ದಾ ರೆ. ಬಾಕಿ ಬಿಲ್ 10000 ಕೋಟಿ ಇದೆ. ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ನಮ್ಮ ಭಾಗದವರೇ ಗೋವಿಂದ ಕಾರಜೋಳ ಜಲ ಸಂಪನ್ಮೂಲ ಸಚಿವರಾಗಿದ್ದಾರೆ, ಸಿಎಂ ಬೊಮ್ಮಾಯಿ ಕೂಡ ನೀರಾವರಿ ಯೋಜನೆ ಅನುಷ್ಠಾನಕ್ಕೆ ಆಸಕ್ತಿ ವಹಿಸಿದ್ದಾರೆ. ಈ ವರ್ಷ ಕನಿಷ್ಠ 15000 ಕೋಟಿ ರೂ. ಮೀಸಲಿಡಬೇಕು. ಅಧಿವೇಶನ ಮುಗಿದ ತಕ್ಷಣ ಸಿಎಂ ಕೃಷ್ಣೆಗೆ ಸಂಬಂದಿಸಿ ತುರ್ತು ಸಭೆ ನಡೆಸಿ ಯೋಜನೆ ಅನುಷ್ಠಾನಗೊಳಿಸಲು ವಿಶೇಷ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.