Advertisement

ಸೈಕಲ್‌ ಯಾನದ ದಾಖಲೆ ಮುರಿದ ಹುಡುಗನಿಗೆ ಎವರೆಸ್ಟ್‌ ಏರುವ ಕನಸು

05:25 AM May 25, 2018 | Karthik A |

ಮಹಾನಗರ: ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಎರಡು ಬಾರಿ ಸೈಕಲ್‌ ಯಾನ.. ಯಾನದ ತುಂಬೆಲ್ಲ ತುಳುನಾಡಿನ ಬಾವುಟ ಅನಾವರಣ..ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ತುಳು ಸೇರ್ಪಡೆಗೆ ಆಗ್ರಹ..ದಾಖಲೆ ಮುರಿದು ದಾಖಲೆ ಸಾಧಿಸಿದ ಈ ಹುಡುಗನಿಗೆ ಸೈಕಲ್‌ ಯಾನದೊಂದಿಗೆ ಪರ್ವತಾರೋಹಣದ ಕನಸು..

Advertisement

ಮೂಡಬಿದಿರೆ ನೆಲ್ಲಿಕಾರು ನಿವಾಸಿ ಪ್ರಸಾದ್‌ ವಿಜಯ ಶೆಟ್ಟಿ ಸದ್ಯಕ್ಕೆ ಮೌಂಟ್‌ ಎವರೆಸ್ಟ್‌ ಏರುವ ಕನಸು ಹೊಂದಿದ್ದಾರೆ. ತನ್ನ ಸಾಧನೆ ಮತ್ತು ಕನಸಿನ ಕುರಿತು ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದ ಪ್ರಸಾದ್‌ ವಿಜಯ ಶೆಟ್ಟಿ, ಈಗಾಗಲೇ ರಾಜಸ್ಥಾನದ ಮೌಂಟ್‌ ಅಬುವಿನಲ್ಲಿ ಕಡಿದಾದ ಕಲ್ಲುಗಳನ್ನು ಹತ್ತುವ ರಾಕ್‌ ಕ್ಲೈಂಬಿಂಗ್‌ ತರಬೇತಿ ಪಡೆದಿದ್ದೇನೆ. ಬಳಿಕ ಜಮ್ಮು ಮತ್ತು ಕಾಶ್ಮೀರ, ಸಿಕ್ಕಿಂ ಹಾಗೂ ಪಶ್ಚಿಮ ಬಂಗಾಲದ ಡಾರ್ಜಿಲಿಂಗ್‌ನಲ್ಲಿಯೂ ಪರ್ವತಾರೋಹಣದ ಉನ್ನತ ತರಬೇತಿ ಪಡೆದಿದ್ದೇನೆ. ಜಗತ್ತಿನ ಅತಿ ಎತ್ತರದ ಮೌಂಟ್‌ ಎವರೆಸ್ಟ್‌ ಶಿಖರ ಏರುವುದು ನನ್ನ ಜೀವನದ ಮಹತ್ತರ ಕನಸು ಎಂದರು.

ಸೈಕ್ಲಿಂಗ್‌ನಲ್ಲಿ ಜಾಗತಿಕ ಮಟ್ಟದ ದಾಖಲೆ ಮುರಿಯಬೇಕೆಂಬ ನಿಟ್ಟಿನಲ್ಲಿ ಎರಡನೇ ಬಾರಿ ಕಳೆದ ಮಾರ್ಚ್‌ 24ರಿಂದ ಎಪ್ರಿಲ್‌ 11ರ ತನಕ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸೈಕಲ್‌ ಯಾತ್ರೆ ನಡೆಸಿದ್ದೇನೆ. ಪೆಡಲ್‌ ಫಾರ್‌ ಡಿಫೆನ್ಸ್‌ ಪೀಪಲ್ಸ್‌ ಮತ್ತು ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಆಗ್ರಹ ಮುಂದಿಟ್ಟು ಈ ಯಾತ್ರೆ ಕೈಗೊಂಡಿದ್ದೆ. ಈ ಹಿಂದೆ ಇದ್ದ ಮಹಾರಾಷ್ಟ್ರದ ಸಂತೋಷ್‌ ಹೊಳಿ ಅವರ 23 ದಿನಗಳ ಯಾನದ ದಾಖಲೆ ಮುರಿಯುವಲ್ಲಿ ಯಶಸ್ವಿಯಾಗಿದ್ದೇನೆ. ಅಲ್ಲದೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಎರಡನೇ ಬಾರಿ ಸೈಕಲ್‌ ಯಾತ್ರೆ ಮಾಡಿದ ಹೆಮ್ಮೆ ನನ್ನದಾಗಿದೆ ಎಂದವರು ವಿವರಿಸಿದರು. ನಮ್ಮ ತುಳುನಾಡ್‌ ಟ್ರಸ್ಟ್‌ ಅಧ್ಯಕ್ಷ ಕಡಬ ದಿನೇಶ್‌ ರೈ, ಸ್ಥಾಪಕಾಧ್ಯಕ್ಷ ಟಿ. ವಿ. ಎಸ್‌. ಉಳ್ಳಾಲ, ಪ್ರಕಾಶ್‌ ಶೆಟ್ಟಿ ಉಪಸ್ಥಿತರಿದ್ದರು.

ಸೈಕಲ್‌ ಯಾನ
ಮೌಂಟ್‌ ಎವರೆಸ್ಟ್‌ ಏರಲು ತರಬೇತಿ ನಿರತನಾಗಿದ್ದೇನೆ. ಆದರೆ ಈ ಪರ್ವತಾರೋಹಣವನ್ನು ಪೂರ್ಣಗೊಳಿಸಲು 40 ಲಕ್ಷ ರೂ.ಗಳಷ್ಟು ಖರ್ಚು ತಗಲುತ್ತದೆ. ಇದಕ್ಕಾಗಿ ಪ್ರಾಯೋಜಕರ ನಿರೀಕ್ಷೆಯಲ್ಲಿದ್ದೇನೆ. ಸೈಕ್ಲಿಂಗ್‌ ಕ್ಷೇತ್ರದಲ್ಲಿಯೂ ಆಸಕ್ತನಾಗಿದ್ದು, ಈಗಾಗಲೇ ‘ಕ್ಲೀನ್‌ ಇಂಡಿಯಾ-ಗ್ರೀನ್‌ ಇಂಡಿಯಾ’ ಉದ್ದೇಶದೊಂದಿಗೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸೋಲೋ ಸೈಕಲ್‌ ಯಾನ ಕೈಗೊಂಡು ಯಶಸ್ವಿಯಾಗಿದ್ದೇನೆ ಎಂದು ಪ್ರಸಾದ್‌ ಶೆಟ್ಟಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next