Advertisement
ರಾಜಕಾಲುವೆ ಒತ್ತುವರಿ ಸಂಬಂಧಿತವಾಗಿ ಜಿಲ್ಲಾಡಳಿತ ನೇಮಿಸಿದ ಸಮಿತಿಯು ನೀಡಿದ ಮಧ್ಯಂತರ ವರದಿಯಲ್ಲೇನಿದೆ?– ನಗರದಲ್ಲಿ ರಾಜಕಾಲುವೆ ಒತ್ತುವರಿ ಪರಿಶೀಲನೆಗೆ ನೇಮಿಸಿರುವ ಸಮಿತಿ ಮಂಗಳವಾರ ಮಧ್ಯಂತರ ವರದಿ ಸಲ್ಲಿಸಿದೆ. ಸಮಗ್ರ ವರದಿಯನ್ನು ನೀಡಲು 15 ದಿನ ಗಳ ಹೆಚ್ಚುವರಿ ಕಾಲಾವಕಾಶವನ್ನು ಸಮಿತಿ ಕೋರಿದೆ. ಹೀಗಾಗಿ ಸಮಗ್ರ ವರದಿ ಬಂದ ಬಳಿಕ ಪರಿಶೀಲಿಸಿ ಒತ್ತುವರಿ ಇದ್ದಲ್ಲಿ ಅದನ್ನು ತೆರವುಗೊಳಿಸಲಾಗುವುದು.
– ರಾಜಕಾಲುವೆ ಒತ್ತುವರಿಯಾಗಿದೆ ಎಂದು ಗಮನಕ್ಕೆ ಬಂದಿರುವ ಪ್ರದೇಶಗಳಲ್ಲಿ ಪಾಲಿಕೆಯ ಅಧಿಕಾರಿಗಳು ಈಗಾಗಲೇ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಸಮಗ್ರ ವರದಿ ಬಂದ ಬಳಿಕ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸಲಾಗುವುದು. ಒತ್ತುವರಿ ಆಗಿದ್ದು ಹೌದು, ಅಂದಾದರೆ ಜಿಲ್ಲಾಡಳಿತ ಮುಂದೆ ಯಾವ ಕ್ರಮಗಳನ್ನು ಕೈಗೊಳ್ಳಲಿದೆ?
– ರಾಜಕಾಲುವೆ ಒತ್ತುವರಿ ಆಗಿದ್ದರೆ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಇದಕ್ಕೆ ಪೂರಕವಾಗಿ ಉಪಗ್ರಹ ಚಿತ್ರಗಳನ್ನು ಬಳಸಿ ರಾಜಕಾಲುವೆಗಳು ಒತ್ತುವರಿ ಆಗಿರುವುದನ್ನು ಪರಿಶೀಲನೆ ನಡೆಸಲಾಗುವುದು. 10 ವರ್ಷಗಳ ಹಿಂದೆ ರಾಜಕಾಲುವೆ ಸ್ಥಿತಿಗತಿ ಮತ್ತು ಪ್ರಸ್ತುತದ ಸ್ಥಿತಿಯ ಉಪಗ್ರಹ ಇಮೇಜ್ ಗಳಿಂದ ಪರಿಶೀಲನೆ ನಡೆಸಲಾಗುವುದು. ಇದರ ಆಧಾರದಲ್ಲೂ ತೆರವು ನಡೆಸಲಾಗುವುದು.
Related Articles
– ಕೆಲವು ಪ್ರದೇಶಗಳಲ್ಲಿ ಮಳೆ ನೀರು ಹರಿದು ಹೋಗುವ ತೋಡುಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವುದರಿಂದ ಸಮಸ್ಯೆ ಆಗಿತ್ತು. ಜತೆಗೆ, ಈ ಬಾರಿ 400 ಮಿ.ಮೀ. ನಷ್ಟು ದಾಖಲೆಯ ಮಳೆಯಾಗಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಮಳೆಗಾಲಕ್ಕೆ ಸಂಬಂಧಪಟ್ಟಂತೆ ನಮ್ಮ ಯೋಜನೆಗಳನ್ನು ಹೊಂದಿಸಿಕೊಳ್ಳಬೇಕಾಗಿದೆ. ನೆರೆ ಪರಿಸ್ಥಿತಿ ಸೃಷ್ಟಿಯಾಗಲು ಕಾರಣಗಳೇನು ಎಂಬುದನ್ನು ಪತ್ತೆ ಮಾಡಲು ಕ್ರಮ ವಹಿಸಲಾಗುವುದು.
Advertisement
ಮುಂದಿನ ಮಳೆಗಾಲಕ್ಕೆ ನಗರದಲ್ಲಿ ಯಾವ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ?– ನಗರದ ಎಲ್ಲಾ ರಾಜಕಾಲುವೆಗಳ ಹೂಳೆತ್ತುವ ಬಗ್ಗೆ ಪಾಲಿಕೆಗೆ ಸೂಚನೆ ನೀಡಲಾಗಿದೆ. ಈಗಾಗಲೇ ಕೆಲವೆಡೆ ಸ್ವಚ್ಛತಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಒತ್ತುವರಿ ತೆರವು ಮಾಡಲಾಗುತ್ತಿದೆ. ಮೆಸ್ಕಾಂ, ಅಗ್ನಿಶಾಮಕದಳ ಸೇರಿದಂತೆ ಎಲ್ಲ ವಿಭಾಗಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗ ಬಾರದಂತೆ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳುವ ಬಗ್ಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.