ಬೆಂಗಳೂರು: ಆಡಳಿತ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ “ಸ್ಥಳೀಯ ಸರ್ಕಾರಗಳು’ ಆಗಿರುವ ಗ್ರಾಮ ಪಂಚಾಯಿತಿಗಳಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ, ಅವರ ಸುರಕ್ಷತೆಗೆ ಹೆಚ್ಚು ಆದ್ಯತೆ ಸಿಗಬೇಕೆಂಬ ಉದ್ದೇಶದಿಂದ ನವೆಂಬರ್ ತಿಂಗಳಲ್ಲಿ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ “ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆ’ಗಳನ್ನು ಕಡ್ಡಾಯವಾಗಿ ನಡೆಸಲು ಒತ್ತು ನೀಡಲಾಗಿದೆ.
ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಗಳು ಕೇವಲ ನಾಮಕಾವಾಸ್ತೆ ಆಗದೆ, ಅವುಗಳು ಮಕ್ಕಳ ಆರೋಗ್ಯ, ಶಿಕ್ಷಣ ಹಾಗೂ ರಕ್ಷಣೆಯ ಸಮಗ್ರ ಕಾರ್ಯಸೂಚಿ ಆಗಬೇಕು ಎಂಬ ಹಿನ್ನೆಲೆಯಲ್ಲಿ ಮಕ್ಕಳ ವಿಶೇಷ ಗ್ರಾಮ ಸಭೆಗಳನ್ನು ವ್ಯವಸ್ಥಿತ ಹಾಗೂ ಅರ್ಥಪೂರ್ಣ ರೀತಿಯಲ್ಲಿ ಏರ್ಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಇಲಾಖೆ ತಾಕೀತು ಮಾಡಿದೆ.
ಗ್ರಾಮ ಪಂಚಾಯಿತಿಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ಹಾಗೂ ಇತರ ವಿಷಯಗಳ ಬಗ್ಗೆ ಚರ್ಚಿಸಲು “ಗ್ರಾಮ ಸಭೆ’ಗಳನ್ನು ನಡೆಸಲಾಗುತ್ತದೆ. ಈ ಗ್ರಾಮ ಸಭೆಗಳಲ್ಲಿ ಕೈಗೊಳ್ಳುವ ತೀರ್ಮಾನಗಳೇ ಅಂತಿಮ. ಹೀಗಿರುವಾಗ ಜನಸಂಖ್ಯೆಯ ಅರ್ಧ ದಷ್ಟಿರುವ ಮಹಿಳೆಯ ಹಕ್ಕುಗಳ ಬಗ್ಗೆ ವಿಶೇಷ ಗ್ರಾಮ ಸಭೆಗಳನ್ನು ನಡೆಸಲಾಗುತ್ತದೆ. ಅದೇ ಮಾದರಿಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯ ದೃಷ್ಟಿಯಿಂದ ಮಕ್ಕಳ ವಿಶೇಷ ಗ್ರಾಮ ಸಭೆಗಳನ್ನು ನಡೆಸುವ ಪದ್ದತಿಯನ್ನು ಗ್ರಾಪಂಗಳಲ್ಲಿ ಅನುಸರಿಸಲಾಗುತ್ತಿದೆ.
ಮಕ್ಕಳ ಉಳಿವು, ರಕ್ಷಣೆ, ಅಭಿವೃದ್ಧಿಯ ದೃಷ್ಟಿಯಿಂದ ಹಕ್ಕುಗಳನ್ನು ಜಾರಿಗೊಳಿಸುವಲ್ಲಿ ಗಾಪಂ ಪಾತ್ರ ಮಹತ್ತರವಾಗಿದೆ. ಗ್ರಾಮ ಪಂಚಾಯಿತಿಗಳು ನಡೆಸುವ ಗ್ರಾಮ ಸಭೆಗಳಲ್ಲಿ ಮಕ್ಕಳ ಸ್ಥಿತಿಗತಿ, ಅವರ ಅಭಿವೃದ್ಧಿ, ಸಂವಿಧಾನಾತ್ಮಕವಾಗಿ ಒದಗಿಸಿರುವ ಹಕ್ಕುಗಳ ಪಂಚಾಯಿತಿಗಳು ವಿಶೇಷವಾಗಿ ಚರ್ಚಿಸಿ,ಗ್ರಾಮಸ್ಥರಿಗೆ ಅವರ ಜವಾಬ್ದಾರಿಯನ್ನು ತಿಳಿಸುವ ಗುರುತರ ಹೊಣೆಗಾರಿಕೆ ಗ್ರಾ.ಪಂ ಗಳ ಮೇಲಿರುತ್ತದೆ. ಆದ್ದರಿಂದ ನವೆಂಬರ್ ತಿಂಗಳಲ್ಲಿ ಆಚರಿಸಲಾಗುವ “ಮಕ್ಕಳ ದಿನಾಚರಣೆ’ಸಂದರ್ಭವನ್ನು ಬಳಸಿಕೊಂಡು ಮಕ್ಕಳ ವಿಶೇಷ ಗ್ರಾಮ ಸಭೆಗಳನ್ನು ಏರ್ಪಡಿಸುವಂತೆ ಇಲಾಖೆ ಸುತ್ತೋಲೆ ಹೊರಡಿಸಿದೆ.
ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಪೌಷ್ಠಿಕ ಆಹಾರ ಒದಗಿಸುವುದು, ಮಕ್ಕಳ ಬೌದಿಟಛಿಕ ಬೆಳವಣಿಗೆಗೆ ಆಟಪಾಠಗಳ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ರೂಪಿಸುವುದು, ಪ್ರತಿ 3ರಿಂದ 6 ವರ್ಷದ ಎಲ್ಲ ಮಕ್ಕಳು ಅಂಗನವಾಡಿ ಹಾಗೂ ಶಾಲೆಗಳಲ್ಲಿ ದಾಖಲಾಗಿ ಶಿಕ್ಷಣ ಆರಂಭಿಸುವುದು,ಜೀತ ಪದ್ದತಿ ಹಾಗೂ ಕೃಷಿ ಕಾರ್ಮಿಕ ವೃತ್ತಿಯಲ್ಲಿ ಮಕ್ಕಳನ್ನು ತೊಡಗಿಸುವವರ ವಿರುದಟಛಿ ಜಾಗೃತಿ ಮೂಡಿಸುವುದು, ಹೆಣ್ಣು ಮಕ್ಕಳ ಪೋಷಣೆ ಮತ್ತು ರಕ್ಷಣೆ, ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು, ಮಕ್ಕಳ ಸಾಗಾಣಿಕೆ ನಿಷೇಧ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಬಗ್ಗೆ ಅರಿವು ಮೂಡಿಸುವುದು, ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಕುರಿತು ಜಾಗೃತಿ ಮೂಡಿಸುವ ವಿಷಯಗಳ ಬಗ್ಗೆ ಈ ಮಕ್ಕಳ ವಿಶೇಷ ಗ್ರಾಮಸಭೆಗಳಲ್ಲಿ ಚರ್ಚೆ ನಡೆಯಬೇಕು.
ಇದಲ್ಲದೆ, ಮಕ್ಕಳಿಗಾಗಿ ಸರ್ಕಾರ ಅನುಷ್ಠಾನಗೊಳಿಸುತ್ತಿರುವ ಯೋಜನೆ, ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿ, ಗ್ರಾಮಸ್ಥರು, ಪೋಷಕರಿಗೆ ಹೆಚ್ಚಿನ ತಿಳುವಳಿಕೆ ನೀಡುವುದು. ಈ ಮಕ್ಕಳ ವಿಶೇಷ ಗ್ರಾಮ ಸಭೆಗಳಿಗೆ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಕ್ಕಳು, ಪೋಷಕರು,ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕಿಯರು, ಆರೋಗ್ಯ, ಶಿಕ್ಷಣ, ಕಾರ್ಮಿಕ, ಮಕ್ಕಳ ಕಲ್ಯಾಣ, ಗ್ರಾಮೀಣಾಭಿವೃದ್ಧಿ,ಪೊಲೀಸ್ ಇಲಾಖೆಯ ಅಧಿಕಾರಿಗಳು ಸೇರಿ ಮಕ್ಕಳು ಹಕ್ಕುಗಳ ಆಯೋಗ, ಬಾಲ ನ್ಯಾಯಮಂಡಳಿ, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಕಡ್ಡಾಯವಾಗಿ ಭಾಗವಹಿಸಬೇಕು. ಎಲ್ಲ ಜಿಪಂ ಸಿಇಒ ತಮ್ಮ ಜಿಲ್ಲೆಗಳ ವ್ಯಾಪ್ತಿಯಲ್ಲಿನ ತಾ.ಪಂ. ಇಒ, ಪಿಡಿಓ ಮತ್ತು ಕಾರ್ಯದರ್ಶಿಗಳಿ ಮಕ್ಕಳ ವಿಶೇಷ ಗ್ರಾಮ ಸಭೆಗಳನ್ನು ಖಾತರಿ ಗೊಳಿಸಬೇಕು ಇಲಾಖೆಯ ಸುತ್ತೋಲೆಯಲ್ಲಿ ನಿರ್ದೇಶನ ನೀಡಲಾಗಿದೆ.
ಮಕ್ಕಳ ವಿಶೇಷ ಗ್ರಾಮ ಸಭೆಗಳನ್ನು ನಡೆಸುವುದು ಕಡ್ಡಾಯ. ಆದರೆ,ಎಲ್ಲರಿಗೂ ಒಂದೇ ದಿನಾಂಕ ಕೊಟ್ಟಿಲ್ಲ. ಮಕ್ಕಳ ದಿನಾಚರಣೆಯಾದ ನವೆಂಬರ್ 14ರ ಆಸುಪಾಸಿನಲ್ಲಿ ಈ ಸಭೆಗಳನ್ನು ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಬಾರಿಯ ಮಕ್ಕಳ ವಿಶೇಷ ಗ್ರಾಮ ಸಭೆಗಳ ಬಗ್ಗೆ ಹೆಚ್ಚಿನ ಒತ್ತು ಕೊಡಲಾಗಿದೆ’.
– ಎಂ.ಕೆ. ಕೆಂಪೇಗೌಡ, ನಿರ್ದೇಶಕರು, ಗ್ರಾಮೀಣಾಭಿವೃದ್ಧಿ ಇಲಾಖೆ.
– ರಫೀಕ್ ಅಹ್ಮದ್