Advertisement

ನವರಾತ್ರಿ ನೈವೇದ್ಯಗಳು

06:00 AM Oct 12, 2018 | |

ನವರಾತ್ರಿ ಹಬ್ಬ ಬಂತೆಂದರೆ ಸಾಕು, ಪ್ರತಿದಿನ ಏನಾದರೊಂದು ಸಿಹಿಮಾಡಿ ನೈವೇದ್ಯ ಮಾಡುವ ಸಡಗರ. ಹಾಲು, ಬೆಲ್ಲ ತೆಂಗಿನಕಾಯಿ, ಒಣಹಣ್ಣುಗಳು ಇತ್ಯಾದಿಗಳನ್ನು ಸೇರಿಸಿ ತಯಾರಿಸುವ ನೈವೇದ್ಯಗಳು ನಾಲಿಗೆಗೆ ಹಿತ ಮಾತ್ರವಲ್ಲ ಆರೋಗ್ಯಕ್ಕೂ ಉತ್ತಮ. ಇಲ್ಲಿವೆ ಕೆಲವು ರಿಸಿಪಿಗಳು.

Advertisement

ಖರ್ಜೂರದ ಬರ್ಫಿ
ಬೇಕಾಗುವ ಸಾಮಗ್ರಿ:
ಬೀಜ ತೆಗೆದು ರುಬ್ಬಿದ ಖರ್ಜೂರ- ಒಂದು ಕಪ್‌, ಸಕ್ಕರೆ- ಅರ್ಧ ಕಪ್‌, ತುಪ್ಪ- ನಾಲ್ಕು ಚಮಚ, ಏಲಕ್ಕಿ ಪುಡಿ ಸುವಾಸನೆಗಾಗಿ, ಹಾಲು- ಒಂದು ಕಪ್‌, ಹುರಿದ ಮೈದಾಹುಡಿ- ನಾಲ್ಕು ಚಮಚ, ತುಪ್ಪದಲ್ಲಿ ಹುರಿದ ಗೋಡಂಬಿ, ಬಾದಾಮಿ ತರಿ- ನಾಲ್ಕು ಚಮಚ.

ತಯಾರಿಸುವ ವಿಧಾನ: ಹಾಲಿನಲ್ಲಿ ನೆನೆಸಿದ ಖರ್ಜೂರವನ್ನು ರುಬ್ಬಿ ಪೇಸ್ಟ್‌ಮಾಡಿ ದಪ್ಪ ತಳದ ಬಾಣಲೆಯಲ್ಲಿ ಹಾಕಿ ಕಾಯಲು ಇಡಿ. ಸೌಟಿನಿಂದ ಮಗುಚುತ್ತಾ ಇದ್ದು ಸಕ್ಕರೆ, ತುಪ್ಪ ಸೇರಿಸಿ ಗಟ್ಟಿಯಾಗುತ್ತಾ ಬರುವಾಗ ಮೈದಾ ಸೇರಿಸಿ ಮಗುಚಿ. ಸಂಪೂರ್ಣ ತಳಬಿಡುತ್ತಾ ಬರುವಾಗ ಏಲಕ್ಕಿಪುಡಿ, ಗೋಡಂಬಿ ಮತ್ತು ಬಾದಾಮಿ ತರಿ ಸೇರಿಸಿ ಮಗುಚಿ ಒಲೆಯಿಂದ ಇಳಿಸಿ ತುಪ್ಪಸವರಿದ ತಟ್ಟೆಗೆ ಹಾಕಿ ಬೇಕಾದ ಆಕಾರಕ್ಕೆ ಗೆರೆ ಹಾಕಿ.

ಹಾಲಿಟ್ಟು ಪಾಯಸ 
ಬೇಕಾಗುವ ಸಾಮಗ್ರಿ:
ಬೆಳ್ತಿಗೆ ಅಕ್ಕಿ – ಒಂದು ಕಪ್‌, ತೆಂಗಿನತುರಿ- ಮೂರು ಕಪ್‌, ಬೆಲ್ಲದ ಪುಡಿ- ಒಂದೂವರೆ ಕಪ್‌, ಏಲಕ್ಕಿ ಪುಡಿ ಸುವಾಸನೆಗೆ, ಉಪ್ಪು ರುಚಿಗೆ ಬೇಕಷ್ಟು.

ತಯಾರಿಸುವ ವಿಧಾನ: ನೆನೆಸಿದ ಬೆಳ್ತಿಗೆ ಅಕ್ಕಿಯನ್ನು ಸ್ವಲ್ಪ ಉಪ್ಪು ಸೇರಿಸಿ, ನುಣ್ಣಗೆ ರುಬ್ಬಿ ಬಾಣಲೆಗೆ ಹಾಕಿ. ಇದಕ್ಕೆ ಬೇಕಷ್ಟು ನೀರು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಮಾಡಿಕೊಂಡು ಸೌಟಿನಿಂದ ಮಗುಚುತ್ತಾ ಕಾಯಿಸಿ. ಹಿಟ್ಟು ಗಟ್ಟಿಯಾಗಿ ಕೈಗೆ ಅಂಟದಷ್ಟು ಹದವಾದಾಗ ಒಲೆಯಿಂದ ಇಳಿಸಿ. ಹಿಟ್ಟು ಬಿಸಿಯಿರುವಾಗಲೇ ಹದ ಮಾಡಿಕೊಂಡು ಚಕ್ಕುಲಿ ಒರಳಿನಲ್ಲಿ ಖಾರದಕಡ್ಡಿ ಅಚ್ಚಿಗೆ ಹಿಟ್ಟು ಹಾಕಿ, ಶ್ಯಾವಿಗೆ ಒತ್ತಿಕೊಳ್ಳಿ. ಇದನ್ನು ಆರಲು ಬಿಡಿ. ತೆಂಗಿನತುರಿಗೆ ಬೇಕಷ್ಟು ನೀರು ಸೇರಿಸಿ ನುಣ್ಣಗೆ ರುಬ್ಬಿ ಹಾಲು ತಯಾರಿಸಿಕೊಳ್ಳಿ. ನಂತರ, ಹಾಲಿಗೆ ಬೆಲ್ಲ ಮತ್ತು ಸ್ವಲ್ಪ$ ಉಪ್ಪು$ ಸೇರಿಸಿ ಕುದಿಯಲು ಇಡಿ. ಇದು ಸರಿಯಾಗಿ ಕುದಿಯುತ್ತಿರುವಾಗ ಒತ್ತಿ ಇಟ್ಟ ಶ್ಯಾವಿಗೆ ಹಾಕಿ ಕುದಿಯಲು ಇಡಿ. ಕುದಿ ಬರುವವರೆಗೂ ಸೌಟು ಹಾಕಬಾರದು. ಹತ್ತು ನಿಮಿಷ ಸಣ್ಣ ಉರಿಯಲ್ಲಿ ಕುದಿದ ಮೇಲೆ ದಪ್ಪ ಕಾಯಿಹಾಲು ಹಾಕಿ, ಪುನಃ ಕುದಿಸಿ ಒಲೆಯಿಂದ ಇಳಿಸಿ, ಏಲಕ್ಕಿ ಸೇರಿಸಿ ನೈವೇದ್ಯ ಮಾಡಬಹುದು.

Advertisement

ಕಡ್ಲೆಕಾಳಿನ ಪಂಚಕಜ್ಜಾಯ
ಬೇಕಾಗುವ ಸಾಮಗ್ರಿ:
ಕಪ್ಪು ಕಡ್ಲೆಕಾಳು- ಎರಡು ಕಪ್‌, ಬೆಲ್ಲದ ಪುಡಿ- ಒಂದೂವರೆ ಕಪ್‌, ತೆಂಗಿನ ತುರಿ- ಒಂದು ಕಪ್‌, ಗೋಡಂಬಿ ತರಿ- ಎಂಟು ಚಮಚ, ತುಪ್ಪ- ಒಂದು ಚಮಚ.

ತಯಾರಿಸುವ ವಿಧಾನ:  ಕಪ್ಪು ಕಡ್ಲೆಯನ್ನು ಸಣ್ಣ ಉರಿಯಲ್ಲಿ ಹುರಿದು ತರಿತರಿಯಾಗಿ ಪುಡಿಮಾಡಿಕೊಳ್ಳಿ. ತೆಂಗಿನ ತುರಿಗೆ ಬೆಲ್ಲದ ಪುಡಿ ಸೇರಿಸಿ ಮಿಕ್ಸಿಯಲ್ಲಿ ಒಮ್ಮೆ ತಿರುಗಿಸಿ ಮಿಶ್ರಮಾಡಿಕೊಂಡು  ಮಿಕ್ಸಿಂಗ್‌ಬೌಲ್‌ಗೆ ಹಾಕಿ. ಇದಕ್ಕೆ  ಹುರಿದ ಗೋಡಂಬಿ ಮತ್ತು ತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ನಂತರ ಕಡ್ಲೆಕಾಳಿನ ಪುಡಿಯನ್ನು ಇದಕ್ಕೆ ಹಿಡಿಸುವಷ್ಟು ಸೇರಿಸಿಕೊಳ್ಳುತ್ತಾ ಪುನಃ ಮಿಶ್ರಮಾಡಿ. ಈಗ ರುಚಿಯಾದ ಪಂಚಕಜ್ಜಾಯ ನೈವೇದ್ಯಕ್ಕೆ ರೆಡಿ.

ಹಾಲುಬಾಯಿ 
ಬೇಕಾಗುವ ಸಾಮಗ್ರಿ:
ಬೆಳ್ತಿಗೆ ಅಕ್ಕಿ- ಒಂದು ಕಪ್‌, ತೆಂಗಿನತುರಿ- ಒಂದು ಕಪ್‌, ಬೆಲ್ಲದ ಪುಡಿ- ಒಂದೂವರೆ ಕಪ್‌, ತುಪ್ಪ- ನಾಲ್ಕು ಚಮಚ,  ಏಲಕ್ಕಿ ಪುಡಿ ಸುವಾಸನೆಗಾಗಿ, ತುಪ್ಪದಲ್ಲಿ ಹುರಿದ ಗೋಡಂಬಿತರಿ – ನಾಲ್ಕು ಚಮಚ.

ತಯಾರಿಸುವ ವಿಧಾನ: ನೆನೆಸಿದ ಬೆಳ್ತಿಗೆ ಅಕ್ಕಿಗೆ ತೆಂಗಿನ ತುರಿ, ಏಲಕ್ಕಿ ಮತ್ತು ಉಪ್ಪು ಸೇರಿಸಿ ಮಿಕ್ಸಿಯಲ್ಲಿ ನಯವಾಗಿ  ರುಬ್ಬಿ ದಪ್ಪ ತಳದ ಬಾಣಲೆಯಲ್ಲಿ ಹಾಕಿ ಬೇಕಷ್ಟು ನೀರು ಸೇರಿಸಿ ದೋಸೆ ಹಿಟ್ಟಿನಿಂದಲೂ ಸ್ವಲ್ಪ ನೀರು ಇರುವಷ್ಟು ಹದಕ್ಕೆ ಮಾಡಿಕೊಳ್ಳಿ.  ನಂತರ ಇದಕ್ಕೆ ಬೆಲ್ಲ ಸೇರಿಸಿ ಒಲೆಯಲ್ಲಿಟ್ಟು ಸೌಟಿನಿಂದ ಮಗುಚುತ್ತಾ ಕಾಯಿಸಿ.  ಸಂಪೂರ್ಣ ತಳ ಬಿಟ್ಟ ಮೇಲೆ ಗೋಡಂಬಿ ತರಿ ಸೇರಿಸಿ ಮಿಶ್ರಮಾಡಿ  ತುಪ್ಪ ಸವರಿದ ತಟ್ಟೆಗೆ ಹಾಕಿ ಬೇಕಾದ ಆಕಾರಕ್ಕೆ ಗೆರೆ ಹಾಕಬಹುದು.

ಗೀತಸದಾ

Advertisement

Udayavani is now on Telegram. Click here to join our channel and stay updated with the latest news.

Next