Advertisement

ವಿಜಯ ಮಲ್ಯ ಒಟ್ಟು ಆಸ್ತಿ ಮುಟ್ಟುಗೋಲು ಸಾಧ್ಯತೆ

06:00 AM Jul 01, 2018 | Team Udayavani |

ಮುಂಬೈ: 9 ಸಾವಿರ ಕೋಟಿ ರೂ. ಸಾಲ ಮರುಪಾವತಿ ಮಾಡದೇ ವಿದೇಶಕ್ಕೆ ಪಲಾಯನಗೈದಿರುವ ಉದ್ಯಮಿ ವಿಜಯ್‌ ಮಲ್ಯ ಅವರಿಗೆ ಈಗ ಎಲ್ಲ ಆಸ್ತಿ ಜಪ್ತಿಯಾಗುವ ಆತಂಕ ಶುರುವಾಗಿದೆ. ವಿಶೇಷ ಹಣ ದುರ್ಬಳಕೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಮಲ್ಯಗೆ ನೋಟಿಸ್‌ ನೀಡಲಾ ಗಿದ್ದು, ಆಗಸ್ಟ್‌ 27ರಂದು ಕೋರ್ಟ್‌ಗೆ ಹಾಜರಾಗುವಂತೆ ಸೂಚಿಸಲಾಗಿದೆ. ಒಂದು ವೇಳೆ ಅಂದು ಕೋರ್ಟ್‌ಗೆ ಹಾಜರಾ ಗದಿದ್ದರೆ, ಅವರನ್ನು “ಪಲಾಯನಗೈದ ಅಪರಾಧಿ’ ಎಂದು ಪರಿಗಣಿಸಲಾಗುತ್ತದೆ. ಅಷ್ಟೇ ಅಲ್ಲ, ಮಲ್ಯಗೆ ಸಂಬಂಧಿಸಿದ 12,500 ಕೋಟಿ ರೂ. ಮೊತ್ತದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.

Advertisement

ಪಲಾಯನಗೈದ ಅಪರಾಧಿ ಎಂದು ಘೋಷಿಸುವಂತೆ ಜೂನ್‌ 22 ರಂದು ಜಾರಿ ನಿರ್ದೇಶನಾಲಯವು ನ್ಯಾಯಾಲಯದ ಮೊರೆ ಹೋಗಿತ್ತು. ಈ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಮುಂಬೈ ವಿಶೇಷ ಕೋರ್ಟ್‌ನ ನ್ಯಾಯಾಧೀಶ ಎಂ.ಎಸ್‌.ಆಜ್ಮಿ ಶನಿವಾರ ನೋಟಿಸ್‌ ಜಾರಿ ಮಾಡಿದ್ದಾರೆ. ಬ್ಯಾಂಕ್‌ ಸಾಲ ಮರುಪಾವತಿ ಮಾಡದೇ ದೇಶ ತೊರೆದವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಇತ್ತೀಚೆಗೆ ಸುಗ್ರೀವಾಜ್ಞೆಯನ್ನು ಜಾರಿಗೊಳಿ ಸಿತ್ತು. ಅದರಂತೆ, ಸಾಲ ಮರುಪಾವತಿ ಮಾಡದೇ ದೇಶ ತೊರೆದಿರುವವರ ಎಲ್ಲ ಸ್ವತ್ತನ್ನೂ ಜಪ್ತಿ ಮಾಡಿಕೊಳ್ಳುವ ಅವಕಾಶವೂ ಈ ಕಾಯ್ದೆ ಅಡಿಯಲ್ಲಿದೆ. ಹೀಗಾಗಿ ಮಲ್ಯಗೆ ಸಂಬಂಧಿಸಿದ 12,500 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲು ಅನುಮತಿ ನೀಡುವಂತೆಯೂ ಜಾರಿ ನಿರ್ದೇಶನಾಲಯ ತನ್ನ ಅರ್ಜಿಯಲ್ಲಿ ಉಲ್ಲೇಖೀಸಿದೆ.

ಚೌಕಾಸಿ ಇಲ್ಲ: ಜಪ್ತಿ ಮಾಡಿಕೊಂಡ ಎಲ್ಲ ಸ್ವತ್ತನ್ನೂ ವಾಪಸ್‌ ನೀಡಿದರೆ, ಎಲ್ಲ ಬಾಕಿಯನ್ನೂ ಪಾವತಿ ಮಾಡುತ್ತೇನೆ ಎಂದು ಮಲ್ಯ ಇತ್ತೀಚೆಗೆ ವಿಧಿಸಿದ ಷರತ್ತನ್ನು ಜಾರಿ ನಿರ್ದೇಶನಾಲಯವು ತಿರಸ್ಕರಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಮಲ್ಯ, ನಾನು ಜಾರಿ ನಿರ್ದೇಶನಾಲಯದೊಂದಿಗೆ ಯಾವುದೇ ಚೌಕಾಸಿ ನಡೆಸಿರಲಿಲ್ಲ ಎಂದಿದ್ದಾರೆ. ನಾನು ಚೌಕಾಸಿ ನಡೆಸುತ್ತಿದ್ದೇನೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ ಮೊದಲು ಜಾರಿ ನಿರ್ದೇಶನಾಲಯ ಸಲ್ಲಿಸಿದ ಚಾರ್ಜ್‌ಶೀಟ್‌ ಅನ್ನು ಆ ಅಧಿಕಾರಿ ನೋಡಬೇಕು ಎಂದು ಮಲ್ಯ ಶನಿವಾರ ಟ್ವೀಟ್‌ ಮಾಡಿದ್ದಾರೆ.

ಕೊನೆಗೂ ಐಷಾರಾಮಿ ವಿಮಾನ ಮಾರಾಟ
ಮಲ್ಯ ಬಳಸುತ್ತಿದ್ದ ಐಷಾರಾಮಿ ವಿಮಾನ ಕೊನೆಗೂ ಹರಾಜಿನಲ್ಲಿ ಮಾರಾಟವಾಗಿದೆ. ಈ ಹಿಂದೆ ಮೂರು ಬಾರಿ ಹರಾಜಿಗೆ ಇಡಲಾಗಿದ್ದರೂ, ಯಾರೂ ಖರೀದಿ ಮಾಡಿರಲಿಲ್ಲ. ಈ ಬಾರಿ ಅಮೆರಿಕದ ಏವಿಯೇಶನ್‌ ಮ್ಯಾನೇಜ್‌ಮೆಂಟ್‌ ಸೇಲ್ಸ್‌ ಈ ವಿಮಾನವನ್ನು 34.8 ಕೋಟಿ ರೂ.ಗೆ ಖರೀದಿಸಿದೆ. ಆದಾಯ ತೆರಿಗೆ ಇಲಾಖೆ ಈ ವಿಮಾನವನ್ನು ಹರಾಜಿಗೆ ಹಾಕಿತ್ತು. ಮಲ್ಯ ಭಾರತದಲ್ಲಿದ್ದಾಗ ಈ ಐಷಾರಾಮಿ ವಿಮಾನದಲ್ಲೇ ಅಮೆರಿಕ ಹಾಗೂ ಯುರೋಪ್‌ ದೇಶಗಳಿಗೆ ಪ್ರಯಾಣಿಸುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next