Advertisement

ಜಗದ ಜೇಬು ಖಾಲಿ ಖಾಲಿ

01:48 AM Jul 14, 2022 | Team Udayavani |

ಜಗತ್ತಿಗೆ ಕೊರೊನಾ ಸೋಂಕು ಬಾಧಿತವಾದ ಬಳಿಕ ಅರ್ಥ ವ್ಯವಸ್ಥೆಗೆ ಹಲವು ರೀತಿಯಲ್ಲಿ ಒತ್ತಡ, ಆತಂಕಗಳು ಎದುರಾಗಿವೆ. ಮಾರ್ಚ್‌ನಿಂದ ಈಚೆಗೆ ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿ ಹಣದುಬ್ಬರ, ಬಡ್ಡಿದರ ಏರಿಕೆ ಆಗುತ್ತಲೇ ಇದೆ. ಜಗತ್ತಿನ ಅರ್ಥ ವ್ಯವಸ್ಥೆಗಳ ಬಗ್ಗೆ ನೋಮುರಾ ನಡೆಸಿದ ಅಧ್ಯಯನದ ಪ್ರಕಾರ ಮುಂದಿನ ಒಂದು ವರ್ಷದಲ್ಲಿ ಪ್ರಮುಖ ರಾಷ್ಟ್ರಗಳು ಆರ್ಥಿಕ ಹಿಂಜರಿತಕ್ಕೆ ಒಳಗಾಗಲಿವೆ ಎಂದು ಆತಂಕ ವ್ಯಕ್ತಪಡಿಸಿದೆ. ಹೀಗಾಗಿ, ಜಗತ್ತಿನ ಯಾವ ರಾಷ್ಟ್ರಗಳಲ್ಲಿ ಈಗ ಇರುವ ಅರ್ಥ ವ್ಯವಸ್ಥೆಯ ಬಗ್ಗೆ ಮುನ್ನೋಟ ಇದೆ.

Advertisement

ಚೀನ
ಏಷ್ಯಾ ಖಂಡದ ಅತ್ಯಂತ ಅಭಿವೃದ್ಧಿ ಹೊಂದಿದ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಚೀನದ ಅರ್ಥ ವ್ಯವಸ್ಥೆಯೂ ಕಂಗಾಲಾಗಿದೆ.ಕೊರೊನಾದಿಂದ ಚೇತರಿಕೆ ಕಂಡಿದ್ದರೂ, ಸೋಂಕಿನ ಹಿಂದಿನ ಅವಧಿಯ ಆರ್ಥಿಕ ದೃಢತೆಯನ್ನು ಅದು ಸಾಧಿಸಿಲ್ಲ. ಇತ್ತೀಚೆಗಷ್ಟೇ ಕಟ್ಟಿದ ಮನೆಯನ್ನು ಮಾರಾಟ ಮಾಡುವ ನಿಟ್ಟಿನಲ್ಲಿ ಬಿಲ್ಡರ್‌ಗಳು ಈರುಳ್ಳಿ, ಬೆಳ್ಳುಳ್ಳಿ ವಿನಿಮಯವಾಗಿ ಮನೆಗಳನ್ನು ನೀಡುತ್ತಿದ್ದಾರೆ. ಕಾರ್ಖಾನೆ ಮತ್ತು ಚಿಲ್ಲರೆ ಕ್ಷೇತ್ರದ ವಹಿವಾಟು ಸಂಪೂರ್ಣ ಕುಸಿದಿದೆ. ಚಿಲ್ಲರೆ ಕ್ಷೇತ್ರದ ವಹಿವಾಟು ಶೇ.11ಕ್ಕೆ ಕುಸಿದಿದೆ. ಕೆಟರಿಂಗ್‌ ವಲಯದಲ್ಲಿ ಕೂಡ ಶೇ.22.7ರಷ್ಟು ವಹಿವಾಟು ಕುಸಿದಿದೆ. ಸದ್ಯ ಆ ದೇಶದಲ್ಲಿ ಶೇ.2.08 ಪ್ರಮಾಣದ ಹಣದುಬ್ಬರ ಇದೆ. ಬ್ಲೂಮ್‌ಬರ್ಗ್‌ ಪ್ರಕಟಿಸಿದ ವರದಿಯ ಪ್ರಕಾರ ಪ್ರಸಕ್ತ ವರ್ಷದ 2ನೇ ತ್ತೈಮಾಸಿಕ (ಎಪ್ರಿಲ್‌-ಜೂನ್‌) ದಲ್ಲಿ ಅರ್ಥ ವ್ಯವಸ್ಥೆ ಬೆಳವಣಿಗೆಯಲ್ಲಿ ಕುಸಿತ ದಾಖಲಿಸುವ ಸಾಧ್ಯತೆಯೇ ಅಧಿಕ. 2020ರ ಬಳಿಕ ಮೊದಲ ಬಾರಿಗೆ ಅಲ್ಲಿ ಹೀಗಾಗುತ್ತಿದೆ. ಕೊರೊನಾ ವಿರುದ್ಧ ಶೂನ್ಯ ಸಹನೆ ಎಂಬ ನಿರ್ಣಯವೂ ಕೂಡ ಅಲ್ಲಿನ ಅರ್ಥ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.

ಕೆನಡಾ
ಕೆನಡಾದಲ್ಲಿಯೂ ಕೂಡ ಹಣದುಬ್ಬರ ದರ ಶೇ.7.7ಕ್ಕೆ ಏರಿಕೆಯಾಗಿದೆ. 1983ರ ಜನವರಿಗೆ ಹೋಲಿಕೆ ಮಾಡಿದರೆ ಮತ್ತು ಈ ವರ್ಷದ ಏಪ್ರಿಲ್‌ಗೆ ಹೋಲಿಕೆ ಮಾಡಿದರೆ ಅತ್ಯಧಿಕ. ಆಹಾರ ಮತ್ತು ಇಂಧನದ ಬೆಲೆಯಲ್ಲಿ ನಿರೀಕ್ಷೆ ಮಾಡಲು ಸಾಧ್ಯವಾಗದ ರೀತಿಯಲ್ಲಿ ಬೆಲೆಯಲ್ಲಿ ಏರಿಕೆ ಉಂಟಾಗಿದೆ. ಹೀಗಾಗಿ, 2023ರಲ್ಲಿ ಅಲ್ಲಿ ಆರ್ಥಿಕ ಹಿಂಜರಿತ ಉಂಟಾಗಬಹುದು. ಆದರೆ, ಅದರ ತೀವ್ರತೆ ಹೆಚ್ಚಾಗಿ ಬಾಧಿಸದು. ಕೇವಲ ಅಲ್ಪಾವಧಿಯ ಹಿಂಜರಿಕೆಯನ್ನು ಅಲ್ಲಿನ ಅರ್ಥ ವ್ಯವಸ್ಥೆ ಅನುಭವಿಸುವ ಸಾಧ್ಯತೆ ಇದೆ ಎಂದು ರಾಯಲ್‌ ಬ್ಯಾಂಕ್‌ ಆಫ್ ಕೆನಡಾ ಹೇಳಿದೆ. ಇದರ ಜತೆಗೆ ಮನೆ ನಿರ್ವಹಣ ವೆಚ್ಚವೂ ಕೊರೊನಾ ಅನಂತರ ಹೆಚ್ಚಾಗಿದೆ. ಮನೆಗಳ ಬೆಲೆಯಲ್ಲಿ ಕೂಡ ಶೇ.10ರಷ್ಟು ಇಳಿಕೆಯಾಗಲಿದೆ.

ಅಮೆರಿಕ
ವರ್ಷಾಂತ್ಯಕ್ಕೆ ಅಮೆರಿಕದ ಅರ್ಥ ವ್ಯವಸ್ಥೆ ಅಲ್ಪ ಪ್ರಮಾಣದ ಆರ್ಥಿಕ ಹಿಂಜರಿತಕ್ಕೆ ಒಳಗಾಗುವ ಸಾಧ್ಯತೆಗಳು ಇವೆ. ಇಂಧನ ಮತ್ತು ಆಹಾರ ಪೂರೈಕೆಯ ಸರಪಣಿ ಜಗತ್ತಿನ ಹಲವು ಭಾಗಗಳಲ್ಲಿ ವ್ಯತ್ಯಯ ಉಂಟಾಗಿದೆ. ಹೀಗಾಗಿ ಅದು ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ನೊಮುರಾ ಹೋಲ್ಡಿಂಗ್‌ ವರದಿಯಲ್ಲಿ ಉಲ್ಲೇಖೀಸಲಾಗಿದೆ. ಸದ್ಯ ಅಮೆರಿಕದಲ್ಲಿ ಹಣದುಬ್ಬರ ಪ್ರಮಾಣ ಶೇ.9.1 ಆಗಿದೆ. ಇದು 41 ವರ್ಷಗಳಲ್ಲೇ ಅಧಿಕ. ಅದನ್ನು ತಗ್ಗಿಸುವ ನಿಟ್ಟಿನಲ್ಲಿ ಫೆಡರಲ್‌ ರಿಸರ್ವ್‌ ಜೂ.16ರಂದು 1994ರ ಬಳಿಕ ಶೇ.1.5ರಿಂದ ಶೇ.1.75ರಷ್ಟು ಏರಿಕೆ ಮಾಡಿತ್ತು. ಈ ರೀತಿಯ ಬಡ್ಡಿ ಹೆಚ್ಚಳ 2023ರ ವರೆಗೆ ಮುಂದುವರಿಯುವ ಸಾಧ್ಯತೆ ಇದೆ.

ಟರ್ಕಿ
ಕಾಶ್ಮೀರ ವಿಚಾರದಲ್ಲಿ ಪಾಕಿಸ್ಥಾನಕ್ಕೆ ಬೆಂಬಲ ನೀಡುವ ಟರ್ಕಿಯಲ್ಲಿ ಪರಿಸ್ಥಿತಿ ಏನೇನೂ ಉತ್ತಮವಾಗಿಲ್ಲ. ಅಲ್ಲಿನ ಸರಕಾರ ಇತ್ತೀಚಿನ ಮಾಹಿತಿ ಪ್ರಕಾರವೇ ವಾರ್ಷಿಕ ಹಣದುಬ್ಬರ ಪ್ರಮಾಣ ಶೇ.78.62ಕ್ಕೆ ಜಿಗಿದಿದೆ. ಇದು 1998ರ ಬಳಿಕ ಗರಿಷ್ಠದ್ದಾಗಿದೆ. ಗ್ರಾಹಕ ಹಣದುಬ್ಬರ ಪ್ರಮಾಣ ಕೂಡ ಶೇ.4.95ಕ್ಕೆ ಏರಿಕೆಯಾಗಿದೆ. ಅಲ್ಲಿನ ಆಹಾರ ಬಿಕ್ಕಟ್ಟು ಶಮನಗೊಳಿಸುವ ನಿಟ್ಟಿನಲ್ಲಿ ಭಾರತ ಸರಕಾರ 50 ಸಾವಿರ ಟನ್‌ ಗೋಧಿ ಕಳುಹಿಸಿಕೊಟ್ಟಿದೆ.

Advertisement

ಯುನೈಟೆಡ್‌ ಕಿಂಗ್‌ಡಮ್‌
ಜಗತ್ತಿನ ಪ್ರಮುಖ ಅರ್ಥ ವ್ಯವಸ್ಥೆಗಳಲ್ಲಿ ಒಂದು ಎಂದು ಪರಿಗಣಿತವಾಗಿರುವಲ್ಲಿ ಯು.ಕೆ.ಯಲ್ಲಿ ಹಣದುಬ್ಬರ ಪ್ರಮಾಣ ಮೇನಲ್ಲಿ ಶೇ. 9.1ಕ್ಕೆ ಏರಿಕೆಯಾಗಿತ್ತು. ಅದು 40 ವರ್ಷಗಳಲ್ಲೇ ದೊಡ್ಡ ಮಟ್ಟದ್ದು. ಬ್ಯಾಂಕ್‌ ಆಫ್ ಇಂಗ್ಲೆಂಡ್‌ ಅದನ್ನು ಆದಷ್ಟು ಶೀಘ್ರ ಶೇ.2ಇಳಿಕೆ ಮಾಡುವ ಬಗ್ಗೆ ಪಣತೊಟ್ಟಿದೆ. ಆದರೆ, ಅಲ್ಲಿನ ಹಣಕಾಸು ತಜ್ಞರ ಪ್ರಕಾರ ಅಕ್ಟೋಬರ್‌ ವೇಳೆಗೆ ಅದರ ಪ್ರಮಾಣ ಶೇ.11ಕ್ಕೆ ಹೆಚ್ಚಲಿದೆ. ಐರೋಪ್ಯ ಒಕ್ಕೂಟದಿಂದ ಯು.ಕೆ.ಹೊರ ಬಂದ ನಂತರ ಹಾಗೂ ಪ್ರಧಾನಿ ಬೋರಿಸ್‌ ಜಾನ್ಸನ್‌ ರಾಜೀನಾಮೆ ಕೊಟ್ಟ ಬಳಿಕ ಅಲ್ಲಿನ ಅರ್ಥ ವ್ಯವಸ್ಥೆಯ ಸ್ಥಿತಿ ಡೋಲಾಯಮಾನ ವಾಗಿದೆ. ಪ್ರಧಾನಿ ಆಕಾಂಕ್ಷಿ ರಿಶಿ ಸುನಕ್‌ ಅರ್ಥವ್ಯವಸ್ಥೆ ಮೇಲೆತ್ತುವ ಮಾತುಗಳನ್ನಾಡುತ್ತಿದ್ದಾರೆ.

ದ.ಕೊರಿಯಾ
ವಾಹನೋದ್ಯಮಕ್ಕೆ ಹೆಸರಾಗಿರುವ ದಕ್ಷಿಣ ಕೊರಿಯಾದಲ್ಲಿ ಕಳೆದ ತಿಂಗಳು ಹಣದುಬ್ಬರ ದರ ಶೇ.6ಕ್ಕೆ ಏರಿಕೆಯಾಗಿದೆ. 24 ವರ್ಷಗಳಿಗೆ ಹೋಲಿಕೆ ಮಾಡಿದರೆ ಇದು ಅತ್ಯಧಿಕ. ಪೆಟ್ರೋಲಿಯಂ ಉತ್ಪನ್ನಗಳ ದರ ಶೇ.39.6, ರೆಸ್ಟೊರೆಂಟ್‌ಗಳಲ್ಲಿ ದರ ಶೇ.8ರಷ್ಟು ಹೆಚ್ಚಾಗಿದೆ. ಇದರ ಜತೆಗೆ ಕೃಷಿ ಉತ್ಪನ್ನ ಗಳ ಬೆಲೆಯೂ ಕೂಡ ಏರಿಕೆಯ ಹಾದಿಯಲ್ಲಿದೆ. ಇದಲ್ಲದೆ, ಅಲ್ಲಿನ ಸೆಂಟ್ರಲ್‌ ಬ್ಯಾಂಕ್‌ ಸತತ 15ನೇ ಬಾರಿಗೆ ಶೇ.2 ಬಡ್ಡಿ ದರ ಏರಿಕೆ ಮಾಡಿದೆ. ವಿವಿಧ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವ ವರೂ ಕೂಡ ಹಣದುಬ್ಬರ ಹೊಡೆತದಿಂದ ಪಾರಾಗಲು ಸಂಬಳ ಹೆಚ್ಚಳ ಮಾಡಬೇಕು ಎಂಬ ಬೇಡಿಕೆಯನ್ನೂ ಮುಂದಿಟಿದ್ದಾರೆ. ಹೀಗಾಗಿಯೇ ಅಲ್ಲಿನ ಅಧ್ಯಕ್ಷ ಯೂನ್‌ ಸುಕ್‌ ಯೋಲ್‌ ಅವರ ಜನಪ್ರಿಯತೆಯ ಗ್ರಾಫ್ ಶೇ.43ರಷ್ಟು ಇಳಿಕೆಯಾಗಿದೆ.

ಆಸ್ಟ್ರೇಲಿಯಾ
ಇಪ್ಪತ್ತೈದು ವರ್ಷಗಳಿಂದ ಹಿಂಜರಿತ ಪ್ರತಿ ರೋಧ ಧೋರಣೆಯಲ್ಲಿದ್ದ ಆಸೀಸ್‌ನ ಸ್ಥಿತಿ ಬದ ಲಾಗಿದೆ. ಅಲ್ಲಿನ ನಾಗರಿಕರ ಮನೆಯ ನಿರ್ವಹಣಾ ವೆಚ್ಚವೂ ಏರಿಕೆ ಯಾಗಿದೆ. ಜು.5ರಂದು ಸತತ ಮೂರನೇ ಬಾರಿಗೆ ಅಲ್ಲಿನ ಸೆಂಟ್ರಲ್‌ ಬ್ಯಾಂಕ್‌ ಬಡ್ಡಿದರವನ್ನು ಶೇ.1.35ರಷ್ಟು ಏರಿಕೆ ಮಾಡಿದೆ. ಜತೆಗೆ1994ರ ಬಳಿಕ ಅತ್ಯಂತ ಕ್ಷಿಪ್ರ ಏರಿಕೆಯಾಗಿದೆ. ಬಡ್ಡಿ ದರ ಏರಿಕೆಯಾದ ಬಳಿಕ ವಿವಿಧ ನಗರಗಳಲ್ಲಿ ರಿಯಲ್‌ ಎಸ್ಟೇಟ್‌ ವಹಿವಾಟು ಕುಸಿತ ಉಂಟಾಗಿದೆ. ಅಲ್ಲಿನ ಪ್ರಮುಖ ನಗರಗಳಲ್ಲಿ ಮನೆಗಳಿಗೆ ಬೇಡಿಕೆ ಕುಸಿತ 2023ರಲ್ಲಿ ಶೇ.15ರಿಂದ ಶೇ.20ರ ವರೆಗೆ ಉಂಟಾಗಬಹುದು. ಗ್ರಾಹಕ ಹಣದುಬ್ಬರ ಪ್ರಮಾಣ ಶೇ.6 ಆಗಿದೆ. 2 ಸಾವಿರನೇ ಇಸ್ವಿಯ ಬಳಿಕ ಇದು ಅತ್ಯಧಿಕ.

ಜಪಾನ್‌
ಜಗತ್ತಿನ ಮೂರನೇ ಅತಿದೊಡ್ಡ ಅರ್ಥ ವ್ಯವಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜಪಾನ್‌ಗೂ ಹಣದುಬ್ಬರದ ತಾಪತ್ರಯ ಶುರುವಾಗಿದೆ. 2008-2009ನೇ ಸಾಲಿನಲ್ಲಿ ಉಂಟಾಗಿದ್ದ ಆರ್ಥಿಕ ಹಿಂಜರಿತ ಮರ್ಮಾಘಾತವನ್ನೇ ನೀಡಿತ್ತು. 2021ರ ಜೂನ್‌ನಲ್ಲಿ ಮೈನಸ್‌ 0.5 ಇದ್ದ ಹಣದುಬ್ಬರ ಪ್ರಮಾಣ ಮೇನಲ್ಲಿ ಶೇ.2.5ಕ್ಕೆ ಏರಿಕೆಯಾಗಿದೆ. ಆ ದೇಶಕ್ಕೆ ಕೂಡ ಕೊರೊನಾ ಬಳಿಕ ರಷ್ಯಾ- ಉಕ್ರೇನ್‌ ಯುದ್ಧದಿಂದಾಗಿ ಕಚ್ಚಾ ತೈಲದ ಬೆಲೆಯಲ್ಲಿ ಏರಿಕೆ, ಆಹಾರ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯಿಂದಾಗಿ ಪ್ರತಿಕೂಲ ಪರಿಣಾಮ ಎದುರಿಸುವಂತಾಗಿದೆ. ಇಕನಾಮಿಕ್‌ ಇಂಟೆಲಿಜೆನ್ಸ್‌ ಯುನಿಟ್‌ನ ಪ್ರಕಾರ ಅಮೆರಿಕದ ಡಾಲರ್‌ ಎದುರು ಯೆನ್‌ ಕುಸಿದಿದೆ. ಫೆ.24ರ ಬಳಿಕ ಯೆನ್‌ ಡಾಲರ್‌ ಎದುರು ಶೇ.6ರ ವರೆಗೆ ಕುಸಿದಿದೆ. ಕಳೆದ ವರ್ಷ ಜಿಡಿಪಿ ಪ್ರಮಾಣ 7 ವರ್ಷ ಕನಿಷ್ಠವೆಂದರೆ ಶೇ.2.9 ಆಗಿತ್ತು.

ಉಂಟಾಗಬಹುದಾದ ಆರ್ಥಿಕ ಹಿಂಜರಿತಕ್ಕೆ ಕಾರಣಗಳು
1. ಬೇಡಿಕೆ ತಕ್ಕಂತೆ ವಸ್ತುಗಳನ್ನು ಪೂರೈಸಲು ಸಾಧ್ಯವಾಗದೇ ಇದ್ದಾಗ ಅರ್ಥ ವ್ಯವಸ್ಥೆಯಲ್ಲಿ ಅಸಮತೋಲನ ಉಂಟಾಗುತ್ತದೆ. ಉದಾಹರಣೆಗೆ ಫೆ.24ರಿಂದ ರಷ್ಯಾ ಉಕ್ರೇನ್‌ ಮೇಲೆ ದಾಳಿ ಶುರು ಮಾಡಿದ ಬಳಿಕ ಜಗತ್ತಿನ ಕೆಲವು ಭಾಗಗಳಲ್ಲಿ ಬೇಡಿಕೆಗೆ ತಕ್ಕಂತೆ ಆಹಾರದ ಪೂರೈಕೆ ಸಾಧ್ಯವಾಗುತ್ತಿಲ್ಲ. ಹೆಚ್ಚಿನ ದೇಶಗಳು ಇತರ ದೇಶಗಳಿಗೆ ಆಹಾರ ಹಾಗೂ ಇತರ ವಸ್ತುಗಳನ್ನು ರಫ್ತು ಮಾಡುವುದನ್ನು ನಿಷೇಧಿಸಿವೆ. ಈ ಸಮಸ್ಯೆ ಈಗ ಬೃಹದಾಕಾರ ತಾಳುತ್ತಿದೆ.

2. ನಿಗದಿತ ವಸ್ತುಗಳಿಗೆ ಹೆಚ್ಚಿನ ಬೇಡಿಕೆ ಹೆಚ್ಚಿದೆ ಹಾಗೂ ಜನಪ್ರಿಯತೆ ಉಂಟಾಗಿದೆ ಎಂದು ಸುಳ್ಳು ಪ್ರಚಾರ ನೀಡುವುದು. ಕೊರೊನಾ ಅವಧಿಯಲ್ಲಿ ಜಗತ್ತಿನ ಕೆಲವು ಕಂಪೆನಿಗಳ ಷೇರುಗಳಿಗೆ ಹೆಚ್ಚಿನ ಬೇಡಿಕೆ ಉಂಟಾಗಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಅವುಗಳ ನಿಜ ಸ್ಥಾನ ಏನು ಎಂಬುದು ನಿಧಾನವಾಗಿ ಗೊತ್ತಾಗುತ್ತಿದೆ. ಮೇ ಅಂತ್ಯದ ವರೆಗೆ ಜಗತ್ತಿನಲ್ಲಿ 11 ಟ್ರಿಲಿಯನ್‌ ಡಾಲರ್‌ ಮೊತ್ತದಷ್ಟು ವಿವಿಧ ರೀತಿಯಲ್ಲಿ ನಷ್ಟ ಉಂಟಾಗಿದೆ.

3. 2020ರಲ್ಲಿ ಜಗತ್ತಿಗೆ ಹಬ್ಬಿದ ಕೊರೊನಾ ವೈರಸ್‌ ಮತ್ತು ಸದ್ಯ ನಡೆಯುತ್ತಿರುವ ರಷ್ಯಾ-ಉಕ್ರೇನ್‌ ಕಾಳಗದಂಥ ನಿರೀಕ್ಷೆ ಮಾಡಿರದ ಘಟನೆಗಳು ಹಲವು ರೀತಿಯಲ್ಲಿ ಜಗತ್ತಿಗೆ ಪೆಟ್ಟು ಕೊಡುತ್ತವೆ. ಕೊರೊನಾ ಆತಂಕದಿಂದ ಒಂದು ಹಂತದಲ್ಲಿ ಸೊರಗಿದ್ದ ಜಗತ್ತಿನ ಎಲ್ಲಾ ವ್ಯವಸ್ಥೆಗಳೂ ಚೇತರಿಸಿಕೊಳ್ಳಲಾರಂಭಿಸಿತು ಎನ್ನುವಾಗಲೇ ಉಕ್ರೇನ್‌ ಕಾಳಗದ ಕರಾಳ ಸ್ವರೂಪ ಹಲವು ರೀತಿಯಲ್ಲಿ ಕಾಡಲಾರಂಭಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next