Advertisement

Uppinangady ಗ್ರಾಮೀಣ ಬಡ ಪ್ರತಿಭೆಯ ವಿಶೇಷ ಸಾಧನೆ ಬೆದ್ರೋಡಿಯ ಸ್ಮಿತಾಗೆ 6 ಚಿನ್ನದ ಪದಕ

01:19 AM Mar 20, 2024 | Team Udayavani |

ಉಪ್ಪಿನಂಗಡಿ: ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಬೆದ್ರೋಡಿ ನಿವಾಸಿ ಸ್ಮಿತಾ ಎಂಬಾಕೆ ಮೈಸೂರು ವಿಶ್ವವಿದ್ಯಾನಿಲಯದ ಎಂಎಸ್‌ಡಬ್ಲ್ಯು ಸ್ನಾತಕೋತ್ತರ ಪದವಿಯಲ್ಲಿ 6 ಚಿನ್ನದ ಪದಕ ಹಾಗೂ ಎರಡು ನಗದು ಪುರಸ್ಕಾರದೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣ ರಾಗುವ ಮೂಲಕ ಗ್ರಾಮೀಣ ಪ್ರದೇಶದ ಪ್ರತಿಭೆಯಾಗಿ ವಿಶೇಷ ಸಾಧನೆ ಮಾಡಿದ್ದಾರೆ.

Advertisement

ಬೆದ್ರೋಡಿಯ ಭರತ್‌ ಮತ್ತು ವಿಮಲಾ ದಂಪತಿಯ ಪುತ್ರಿ ಸ್ಮಿತಾ ಕಡು ಬಡತನದ ಸ್ಥಿತಿಯಲ್ಲಿಯೂ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿ ಶಾಲಾ ಜೀವನದಿಂದಲೇ ಗುರುತಿಸಿ ಕೊಂಡಿದ್ದು, ಉಪ್ಪಿನಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎಸ್‌ಡಬ್ಲ್ಯು ಪದವಿ ಪರೀಕ್ಷೆಯಲ್ಲಿ ರ್‍ಯಾಂಕ್‌ ಗಳಿಸಿ ಗಮನ ಸೆಳೆದಿದ್ದರು. ಈಕೆಯ ಕಲಿಕಾ ಸಾಮರ್ಥ್ಯ ವನ್ನು ಮನಗಂಡು ಉಪ್ಪಿನಂಗಡಿ ಕಾಲೇಜಿನ ಪ್ರಾಂಶು ಪಾಲ ಸುಬ್ಬಪ್ಪ ಕೈಕಂಬ ಹಾಗೂ ಪ್ರಾಧ್ಯಾಪಕ ನಂದೀಶ್‌ ಅವರು ಅಗತ್ಯ ಮಾರ್ಗದರ್ಶನ ಹಾಗೂ ಸಹ ಕಾರ ಒದಗಿಸಿ ಉನ್ನತ ಶಿಕ್ಷಣಕ್ಕೆ ನೆರವಾಗಿದ್ದರು. ದೊರಕಿದ ಸಹಕಾರ ವನ್ನು ಸದ್ಭಳಕೆ ಮಾಡಿಕೊಂಡಿರುವ ಸ್ಮಿತಾ ಸ್ನಾತ ಕೋತ್ತರ ಪದವಿ ಪರೀಕ್ಷೆಯಲ್ಲೂ ಗಮನಾರ್ಹ ಸಾಧನೆ ತೋರಿ ಬಡತನ ಕಲಿಕೆಗೆ ಅಡ್ಡಿಯಲ್ಲ ಎನ್ನುವುದನ್ನೂ ನಿರೂಪಿಸಿದ್ದಾರೆ.

ಕೋವಿಡ್‌ ಸಂದರ್ಭದಲ್ಲಿ ಆನ್‌ಲೈನ್‌ ತರಗತಿಗಳಿಗೆ ಹಾಜರಾಗಲು ಮೊಬೈಲ್‌ ಫೋನ್‌ ಕೂಡ ಖರೀದಿಸಲು ಸಾಧ್ಯವಾಗದ ಸ್ಥಿತಿ ಇತ್ತು. ತಾಯಿ ವಿಮಲಾ ಬೀಡಿ ಕಟ್ಟುತ್ತಿದ್ದಾರೆ ಮತ್ತು ತಂದೆ ಭರತ್‌ ದಿನಗೂಲಿ ಕೆಲಸ ಮಾಡುತ್ತಿದ್ದಾರೆ. ಆಕೆಯ ಸಹೋದರ ಕಾರ್ತಿಕ್‌ ಈಗ ದ್ವಿತೀಯ ಪಿಯು ಓದುತ್ತಿದ್ದಾನೆ.

ತನ್ನ ಸಾಧನೆಯ ಕುರಿತಂತೆ ಮೈಸೂರು ವಿ.ವಿ.ಯ ಸಮಾಜಕಾರ್ಯ ವಿಭಾಗದ ಉಪನ್ಯಾಸಕ ನಂದೀಶ್‌ ವೈ.ಡಿ. ಹಾಗೂ ಉಪ್ಪಿನಂಗಡಿಯ ಸ.ಪ್ರ.ದ. ಕಾಲೇಜಿನ ಉಪನ್ಯಾಸಕ ನಂದೀಶ್‌ಗೆ ವಿಶೇಷವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ. ಸ್ಕಾಲರ್‌ಶಿಪ್‌ ಪಡೆಯಲು ಅವರು ಸಹಾಯ ಮಾಡದಿದ್ದರೆ ಪ.ಪೂ. ಹಂತದಲ್ಲಿಯೇ ಶಿಕ್ಷಣ ನಿಲ್ಲಿಸಬೇಕಾಗುತ್ತಿತ್ತು ಎಂದರು.

ಕೂಲಿ ಕೆಲಸಕ್ಕೆ ಹೋಗುವವರಿದ್ದರು!
ಸ್ಮಿತಾ ಅವರ ಪೋಷಕರು ಆಕೆಯನ್ನು ದೈನಂದಿನ ಕೂಲಿ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕೆಂದು ಬಯಸಿದ್ದರು. ಪಿಯುಸಿ ಯಲ್ಲಿ ವಿದ್ಯಾರ್ಥಿನಿಯ ಪ್ರತಿಭೆಯನ್ನು ಗಮನಿಸಿದ ನಂದೀಶ್‌ ಅವರು ಉನ್ನತ ಶಿಕ್ಷಣ ಪಡೆಯಲು ಸಹಕಾರ ನೀಡಿದರು. ನಂದೀಶ್‌ ಅವರು ಸಾಗರೋತ್ತರ ಫೆಲೋಶಿಪ್‌ ಕಾರ್ಯಕ್ರಮದ ಮೂಲಕ ಸ್ಮಿತಾಗೆ ಸಹಾಯ ಮಾಡಿದ್ದರು. ರಜೆಯಲ್ಲಿ ತೋಟದ ಕೆಲಸಕ್ಕೆ ಹೋಗುತ್ತಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next