Advertisement

ಜಿಲ್ಲಾಸ್ಪತ್ರೆ ಅವ್ಯವಸ್ಥೆಗೆ ತಾಪಂ ಅಧ್ಯಕ್ಷರು ಕಿಡಿ

05:24 PM Jun 29, 2018 | Team Udayavani |

ಚಿತ್ರದುರ್ಗ: ಆರೋಗ್ಯ ಇಲಾಖೆ ಮತ್ತು ಜಿಲ್ಲಾಸ್ಪತ್ರೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅಲ್ಲದೆ ಅವ್ಯವಹಾರ, ಹಗರಣಗಳು ನಡೆಯುತ್ತಿದೆ ಎಂದು ತಾಲೂಕು ಪಂಚಾಯತ್‌ ಅಧ್ಯಕ್ಷ ಆರ್‌.ಎನ್‌. ವೇಣುಗೋಪಾಲ್‌ ಅಸಮಾಧಾನ
ವ್ಯಕ್ತಪಡಿಸಿದರು. ಇಲ್ಲಿನ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಗುರುವಾರ ನಡೆದ 2018-19ನೇ ಸಾಲಿನ ಮೊದಲನೇ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ಆಸ್ಪತ್ರೆಯಲ್ಲಿ ಪೀಠೊಪಕರಣಗಳ ಖರೀದಿಯಲ್ಲಿ ಬಹು ದೊಡ್ಡ ಹಗರಣ ನಡೆದಿದೆ. ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದೆ ಎಂದು ಸದಸ್ಯ ಸುರೇಶ್‌ ಆಕ್ಷೇಪಿಸಿದರು. ತಾಪಂ ಸಮಿತಿ ರಚಿಸಿಕೊಂಡು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ
ಅಲ್ಲಿನ ಅವ್ಯವಸ್ಥೆ ಪರಿಶೀಲಿಸೋಣ ಎಂದು ಅಧ್ಯಕ್ಷರು, ಸದಸ್ಯರನ್ನು ಸಮಾಧಾನಪಡಿಸಿದರು.

ಬಸ್‌ಚಾರ್ಜ್‌ ಇಲ್ಲದೆ ಆಸ್ಪತ್ರೆಗೆ ಬರುವ ಪರಿಸ್ಥಿತಿಯಲ್ಲಿ ನೂರಾರು ರೋಗಿಗಳಿದ್ದಾರೆ. ಎಷ್ಟೇ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದರೂ ಅದು ಬಡವರಿಗೆ ತಲುಪಿದಾಗ ಮಾತ್ರ ಸಾರ್ಥಕವಾಗುತ್ತದೆ. ಅಧಿಕಾರಿಗಳು ನಿಷ್ಠೆಯಿಂದ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.

ಸರ್ಕಾರಿ ಆಸ್ಪತ್ರೆಯಲ್ಲಿ ಒಂದು ಶಸ್ತ್ರಚಿಕಿತ್ಸೆಗೆ ಬಡ ರೋಗಿಗಳಿಂದ 8-10 ಸಾವಿರ ರೂ.ಗಳನ್ನು ಸುಲಿಗೆ ಮಾಡುತ್ತಿದ್ದಾರೆ. ಈ ಸಂಬಂಧ ಹಲವಾರು ಬಾರಿ ಜಿಲ್ಲಾ ಶಸ್ತ್ರಚಿಕಿತ್ಸಕರು ಹಾಗೂ ಆರ್‌ ಎಂಒ ಅವರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರಿ ಆಸ್ಪತ್ರೆಗಳ ಪಾಡು ಹೀಗಾದರೆ ಇನ್ನು ಬಡಪಾಯಿಗಳು ಎಲ್ಲಿಗೆ ಹೋಗಿ ಚಿಕಿತ್ಸೆ ಪಡೆಯಬೇಕು ಎಂದು ಸದಸ್ಯರೊಬ್ಬರು ಏರುಧ್ವನಿಯಲ್ಲಿ ಪ್ರಶ್ನಿಸಿದರು. ಇದಕ್ಕೆ ಇತರ ಸದಸ್ಯರು ಧ್ವನಿಗೂಡಿಸಿದರು. 

ರಾಜ್ಯ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಆರೋಗ್ಯ ಕರ್ನಾಟಕ ಯೋಜನೆಯಡಿ ಏಳು ವಿವಿಧ ಸ್ಕೀಂಗಳಲ್ಲಿ
ಉಚಿತವಾಗಿ ಚಿಕಿತ್ಸೆ ಪಡೆಯಲು ಬಿಪಿಎಲ್‌ ಕಾರ್ಡ್‌ ಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ಪಾಲಾಕ್ಷ
ತಿಳಿಸಿದರು. ಬಹಳಷ್ಟು ಬಡವರ ಬಳಿ ಇನ್ನೂ ಪಡಿತರ ಚೀಟಿಯೇ ಇಲ್ಲ, ಅವರ ಗತಿ ಏನು ಎಂದು ಸದಸ್ಯೆ ಚಂದ್ರಕಲಾ
ದೂರಿದರು. ಸರ್ಕಾರ ಜಾರಿಗೆ ತರುವುದೆಲ್ಲ ಇಂತಹ ಅವೈಜ್ಞಾನಿಕ ಯೋಜನೆಗಳೇ ಆಗಿವೆ ಎಂದು ಆರೋಪಿಸಿದರು. 

Advertisement

ಬೆಳಗಟ್ಟ, ಕೂನಬೇವು ಗ್ರಾಮ ಪಂಚಾಯತ್‌ಗಳಲ್ಲಿ ಕುಡಿವ ನೀರಿಗೆ ತೀವ್ರ ಅಭಾವವಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ
ನೀಡಿ ತುರ್ತಾಗಿ ಪರಿಹರಿಸಿ ಎಂದು ಅಧ್ಯಕ್ಷ ವೇಣುಗೋಪಾಲ್‌ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಅಂಗನವಾಡಿ ಮಕ್ಕಳಿಗೆ ಸರಿಯಾದ ಸೌಕರ್ಯವಿಲ್ಲ. ನೆಲದ ಮೇಲೆ ಕೂರಿಸುತ್ತಾರೆ. ಸೂಪರ್‌ವೈಸರ್‌ಗಳು ಯಾವಾಗ ಭೇಟಿ ನೀಡುತ್ತಾರೋ ಗೊತ್ತಿಲ್ಲ ಎಂದು ಕೆಲವು ಸದಸ್ಯರು ದೂರಿದರು. ಸೋಮಾರಿ ಸೂಪರ್‌ವೈಸರ್‌ಗಳಿಗೆ ನೋಟಿಸ್‌ ನೀಡಿದ್ದೇನೆ ಎಂದು ಭರಮಸಾಗರ ಸಿಡಿಪಿಒ ಸಮಜಾಯಿಷಿ ನೀಡಿದರು. ಈ ಉತ್ತರದಿಂದ ಸಮಾಧಾನಗೊಳ್ಳದ ಅಧ್ಯಕ್ಷರು, ನೋಟಿಸ್‌ ನೀಡಿದರೆ ಪ್ರಯೋಜನವಿಲ್ಲ. ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಸಹಾಯಕ ಕೃಷಿ ನಿರ್ದೇಶಕ ವೆಂಕಟೇಶ್‌ ಮಾತನಾಡಿ, ವಾಡಿಕೆಗಿಂತ ಹೆಚ್ಚು ಮಳೆ ಬಂದರೂ ಕಳೆದ ಹದಿನೈದು
ದಿನಗಳಿಂದ ಮಳೆ ಇಲ್ಲದೆ ಬಿತ್ತಿರುವ ಬೀಜಗಳು ಮೊಳಕೆಯೊಡೆದಿಲ್ಲ. ಇದರಿಂದ ಹುಟ್ಟುವಳಿಯಾಗಿರುವ ಬೆಳೆ ಬಾಡುವ ಸಾಧ್ಯತೆ ಇದೆ. ಜೂನ್‌ನಲ್ಲಿ ಶೇ. 68 ರಷ್ಟು ಮಳೆ ಪ್ರಮಾಣ ಕಡಿಮೆಯಾಗಿದೆ. ಬಿತ್ತನೆ ಆಗುತ್ತಿಲ್ಲ. 2015-16 ನೇ ಸಾಲಿನ ಬೆಳೆ ವಿಮೆ ಮಾಹಿತಿ ಇನ್ನೂ ಸಿಕ್ಕಿಲ್ಲ ಎಂದರು. ಬಂಗಾರ ಅಡವಿಟ್ಟು ರೈತರು ಹೊಲದಲ್ಲಿ ಬಿತ್ತುವ ಪರಿಸ್ಥಿತಿ ಇದೆ ಎಂದು ರೈತರು ಅನುಭವಿಸುತ್ತಿರುವ ತೊಂದತೆಯನ್ನು ಅಧ್ಯಕ್ಷ ವೇಣುಗೋಪಾಲ್‌ ಸಭೆಯ ಮುಂದಿಟ್ಟರು.

ಬೀಜ, ಗೊಬ್ಬರ ಸಂಗ್ರಹ ಇದೆ. ರೈತರಿಗೆ ಯಾವುದೇ ತೊಂದರೆಯಿಲ್ಲ. ಕೃಷಿ ವಿಶ್ವವಿದ್ಯಾಲಯದಲ್ಲಿ ಸಂಶೋ 
ಧಿಸಿದ 260 ಶೇಂಗಾ ಬೀಜಗಳ ಮಿನಿ ಕಿಟ್‌ ಬಂದಿದೆ. ಹೆಚ್ಚು ಬೆಳೆ ಬೆಳೆಯುವ ರೈತರನ್ನು ಗುರುತಿಸಿದರೆ ಉಚಿತವಾಗಿ ನೀಡಲಾಗುವುದು ಎಂದು ವೆಂಕಟೇಶ್‌ ತಿಳಿಸಿದರು.
 
ತಾಪಂ ಉಪಾಧ್ಯಕ್ಷೆ ಶೋಭಾ ನಾಗರಾಜ್‌, ಸ್ಥಾಯಿ ಸಮಿತಿ ಅಧ್ಯಕ್ಷ ಬೋರಣ್ಣ, ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಪತಿ, ಹನುಮಂತಪ್ಪ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. 

ಜುಲೈ 5ರಂದು ವಿಶೇಷ ಸಭೆ ಆಯೋಜನೆ  ಆಯಿತೋಳು ಗ್ರಾಮದಲ್ಲಿ ಕುಡಿಯಲು ನೀರಿಲ್ಲ. ಆರ್‌ಒ ಪ್ಲಾಂಟ್‌ಗಳು
ಕೆಟ್ಟು ಹೋಗಿವೆ. ಸರಿಯಾದ ನಿರ್ವಹಣೆ ಇಲ್ಲ ಎಂಬಿತ್ಯಾದಿ ಸಮಸ್ಯೆಗಳ ಸರಮಾಲೆಯನ್ನು ಅನೇಕ ಸದಸ್ಯರು ಸಭೆಯ ಮುಂದಿಟ್ಟರು. ಪಿಡಿಒಗಳು ಯಾರ ಮಾತನ್ನೂ ಕೇಳುತ್ತಿಲ್ಲ. ನಮ್ಮ ಕ್ಷೇತ್ರಗಳಲ್ಲಿ ನೀರು, ವಿದ್ಯುತ್‌ ಇಲ್ಲ. ಜನರಿಗೆ ಏನು ಹೇಳಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಹೀಗಾದರೆ ನಮಗೆ ಮತ ಹಾಕಿ ಗೆಲ್ಲಿಸಿದವರಿಗೆ ನ್ಯಾಯ ಒದಗಿಸುವುದಾದರೂ ಹೇಗೆ ಎಂದು ಹಲವಾರು ಸದಸ್ಯರು ಪ್ರಶ್ನಿಸಿದರು. ಎಲ್ಲಾ ಕ್ಷೇತ್ರಗಳಲ್ಲಿರುವ ಸಮಸ್ಯೆಗಳ ಬಗ್ಗೆ ಚರ್ಚಿಸುವುದಕ್ಕಾಗಿಯೇ ಜುಲೈ 5ರಂದು ವಿಶೇಷ ಸಭೆ ಕರೆಯೋಣ ಎಂದು ಅಧ್ಯಕ್ಷ ವೇಣುಗೋಪಾಲ್‌ ತಿಳಿಸಿದರು. ನರೇಗಾ ಯೋಜನೆಯಡಿ ಬಡವರಿಗೆ ಕೂಲಿ ಕೆಲಸ ಸಿಗುತ್ತಿಲ್ಲ. ಗುತ್ತಿಗೆದಾರರು ನೇರವಾಗಿ ಕೆಲಸ ಮಾಡಿ ಶೇ. 40 ರಷ್ಟು ಕಮಿಷನ್‌ ಪಡೆಯುತ್ತಿದ್ದಾರೆ. ತಾಲೂಕು ಪಂಚಾಯತ್‌ದ ಹಳೆ ಜೀಪು ಕಾಣೆಯಾಗಿದೆ, ಟೆಂಡರ್‌ ಕರೆದು ಮಾರಾಟ ಮಾಡಲಾಗಿದೆಯೇ ಎಂಬುದನ್ನು ನಮಗೆ ತಿಳಿಯಬೇಕು ಎಂದು ಕೆಲವು ಸದಸ್ಯರು ಪಟ್ಟು ಹಿಡಿದರು. ಪರಿಶೀಲಿಸಿ ಹೇಳುವುದಾಗಿ ಅಧಿಕಾರಿಗಳು ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next