Advertisement

ಅನರ್ಹರ ವಿರುದ್ಧ ಸ್ಪೀಕರ್‌ ತೀರ್ಪು ಅಂದು- ಇಂದು

10:34 PM Nov 13, 2019 | Lakshmi GovindaRaju |

ಬೆಂಗಳೂರು: ಶಾಸಕರ “ಅನರ್ಹತೆ’ ವಿಚಾರ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದು ಇದೇ ಮೊದಲಲ್ಲ. ಈ ಹಿಂದೆ 2011ರಲ್ಲಿಯೂ 16 ಮಂದಿ ಶಾಸಕರನ್ನು ಅನರ್ಹಗೊಳಿಸಿ ಆಗಿನ ಸ್ಪೀಕರ್‌ ನೀಡಿದ್ದ ತೀರ್ಪು ಸಹ ನ್ಯಾಯಾಲಯದ ಪರಾಮರ್ಶೆಗೆ ಒಳಗಾಗಿತ್ತು. ಎರಡೂ ಪ್ರಕರಣಗಳು “ಅನರ್ಹತೆ’ಗೆ ಸಂಬಂಧಿಸಿದ್ದು, ಆದರೆ, 2011ರಲ್ಲಿ ಸ್ಪೀಕರ್‌ ತೀರ್ಪನ್ನು ಸುಪ್ರೀಂಕೋರ್ಟ್‌ನ ದ್ವಿಸದಸ್ಯ ನ್ಯಾಯಪೀಠ ವಜಾಗೊಳಿಸಿತ್ತು.

Advertisement

ಈಗಿನ ಪ್ರಕರಣದಲ್ಲಿ ತ್ರಿಸದಸ್ಯ ನ್ಯಾಯಪೀಠ ಸ್ಪೀಕರ್‌ ಆದೇಶವನ್ನು ಭಾಗಶಃ ಎತ್ತಿ ಹಿಡಿದಿದೆ. ಕೆ.ಜಿ. ಬೋಪಯ್ಯ ಅವರ ಆದೇಶವನ್ನು ಕಾನೂನು ಪರಾಮರ್ಶೆಗೊಳಪಡಿಸಿ “ಸ್ಪೀಕರ್‌ ಅವರು ಶಾಸಕರಿಗೆ ವಿವರಣೆ ನೀಡಲು ಕಾಲಾವಕಾಶ ನೀಡದೆ, ಸಹಜ ನ್ಯಾಯದ ತತ್ವಗಳು ಹಾಗೂ ಸಂವಿಧಾನದ ನಿಯಮಗಳನ್ನು ಗಾಳಿಗೆ ತೊರಲಾಗಿದೆ. ಶಾಸಕರ ಅನರ್ಹತೆ ಬಗ್ಗೆ ನಿರ್ಣಯ ಕೈಗೊಳ್ಳುವಾಗ ಸ್ಪೀಕರ್‌ ಅಸಂಬದ್ಧ ಹಾಗೂ ಪಕ್ಷಪಾತಿ ಧೋರಣೆಯಿಂದ ವರ್ತಿಸಿದ್ದಾರೆ’ ಎಂದು ನೇರವಾಗಿ ಚಾಟಿ ಬೀಸಿತ್ತು.

ಇದೇ ವೇಳೆ ರಮೇಶ್‌ ಕುಮಾರ್‌ ಅವರ ಆದೇಶದ ವಿಚಾರವಾಗಿ “ಅನರ್ಹತೆಗೊಳಿಸಿದ ಸ್ಪೀಕರ್‌ ಕ್ರಮ ಸರಿಯಿದೆ. ಆದರೆ, ಅನರ್ಹತೆಯ ಅವಧಿ ನಿಗದಿಪಡಿಸುವ ಅಧಿಕಾರ ಸ್ಪೀಕರ್‌ಗೆ ಇಲ್ಲ. ಶಾಸಕರು ರಾಜೀನಾಮೆ ಪತ್ರ ಕೊಟ್ಟರೆ ಅದು ಸ್ವ ಇಚ್ಛೆಯಿಂದ ಕೂಡಿದೆ ಮತ್ತು ನೈಜತೆ ಹೊಂದಿದೆ ಅನ್ನುವುದನ್ನು ಖಾತರಿಪಡಿಸಿಕೊಳ್ಳಬೇಕಷ್ಟೇ ಎಂದು ಹೇಳುವ ಮೂಲಕ ಸ್ಪೀಕರ್‌ ಅಧಿಕಾರದ ಬಗ್ಗೆ ಸೂಕ್ಷ್ಮವಾಗಿ ತಿಳಿಸಿದೆ.

ಆದರೆ, ಕಾಂಗ್ರೆಸ್‌-ಜೆಡಿಎಸ್‌ನ 17 ಮಂದಿ ಶಾಸಕರನ್ನು ಅನರ್ಹಗೊಳಿಸಿ ಹಿಂದಿನ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಅವಧಿಯಲ್ಲಿ ಸ್ಪೀಕರ್‌ ಆಗಿದ್ದ ರಮೇಶ್‌ ಕುಮಾರ್‌ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್‌ ಭಾಗಶ: ಎತ್ತಿಹಿಡಿದ್ದಿದ್ದರೆ, ಬಿಜೆಪಿಯ 11 ಹಾಗೂ ಐವರು ಪಕ್ಷೇತರರು ಸೇರಿ 17 ಮಂದಿ ಶಾಸಕರನ್ನು ಅನರ್ಹಗೊಳಿಸಿ 2010ರಲ್ಲಿ ಆಗಿನ ಸ್ಪೀಕರ್‌ ಕೆ.ಜಿ. ಬೋಪಯ್ಯ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್‌ ಸಂಪೂರ್ಣವಾಗಿ ವಜಾಗೊಳಿಸಿತ್ತು.

2010ರ ಅನರ್ಹತೆ ಪ್ರಕರಣದಲ್ಲಿ ಸ್ಪೀಕರ್‌ ಹೈಕೋರ್ಟ್‌ನಲ್ಲಿ ಗೆದ್ದು, ಸುಪ್ರೀಂಕೋರ್ಟ್‌ನಲ್ಲಿ ಸೋತಿದ್ದರೆ, ಅನರ್ಹತೆಗೊಂಡಿದ್ದ 16 ಮಂದಿ ಶಾಸಕರು ಸುಪ್ರೀಂ ಕೋರ್ಟಿನಲ್ಲಿ ಮೇಲುಗೈ ಸಾಧಿಸಿದ್ದರು. ಇದೇ ವೇಳೆ ಕಾಂಗ್ರೆಸ್‌-ಜೆಡಿಎಸ್‌ನ 17 ಮಂದಿ ಅನರ್ಹ ಶಾಸಕರ ವಿಚಾರದಲ್ಲಿ 50:50 ತೀರ್ಪು ಬಂದಿದೆ. ಅನರ್ಹತೆ ಸರಿ, ಆದರೆ, ಅನರ್ಹತೆಯ ಅವಧಿ ಸರಿಯಲ್ಲ ಎಂದು ಹೇಳಿದೆ. ಹಾಗಾಗಿ ಸ್ಪೀಕರ್‌ ಅವರು “ಗೆದ್ದು ಸೋತಿದ್ದರೆ’, ಅನರ್ಹ ಶಾಸಕರು “ಸೋತು ಗೆದ್ದಂತಾಗಿದೆ’.

Advertisement

ಹೈಕೋರ್ಟಲ್ಲಿ ಸೋತು, ಸುಪ್ರೀಂನಲ್ಲಿ ಗೆದ್ದರು: 2008ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿ ಆದರು, ಈ ಮಧ್ಯೆ 2010ರಲ್ಲಿ ಅರಭಾವಿಯ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ 11 ಮಂದಿ ಬಿಜೆಪಿ ಹಾಗೂ ಐವರು ಪಕ್ಷೇತರ ಶಾಸಕರು ಬಿಎಸ್‌ವೈ ವಿರುದ್ಧ ಬಂಡಾಯ ಸಾರಿದರು. ವಿಧಾನಸಭೆಯಲ್ಲಿ ಬಹುಮತ ಸಾಬೀತಿಗೆ ಹಾದಿ ಸುಗಮವಾಗಲೆಂದು ಆಗ ಸ್ಪೀಕರ್‌ ಆಗಿದ್ದ ಕೆ.ಜಿ. ಬೋಪಯ್ಯ ಎಲ್ಲಾ 16 ಶಾಸಕರನ್ನು ರಾತ್ರೋರಾತ್ರಿ ಅನರ್ಹಗೊಳಿಸಿದ್ದರು.

ಇದನ್ನು ಪ್ರಶ್ನಿಸಿ ಅನರ್ಹರು ಹೈಕೋರ್ಟ್‌ ಮೆಟ್ಟಿಲೇರಿದರು. ಹೈಕೋರ್ಟ್‌ ಸ್ಪೀಕರ್‌ ಆದೇಶವನ್ನು ಎತ್ತಿ ಹಿಡಿದಿತ್ತು. ಆಗ, ಅನರ್ಹರು ಸುಪ್ರೀಂ ಮೆಟ್ಟಿಲೇರಿದರು. ಸ್ಪೀಕರ್‌ ಆದೇಶ ವಜಾಗೊಳಿಸಿ ಸುಪ್ರೀಂ ಸ್ಪೀಕರ್‌ ಆದೇಶ ವಜಾಗೊಳಿಸಿತ್ತು. ಸ್ಪೀಕರ್‌ ತೀರ್ಪು ಭಾಗಶಃ ಸಫ‌ಲ: 2018ರ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಫ‌ಲಿತಾಂಶ ಬಂದ ಹಿನ್ನೆಲೆಯಲ್ಲಿ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂತು.

ಈ ಮಧ್ಯೆ, ಒಬ್ಬರು ಪಕ್ಷೇತರರು ಸೇರಿ ಕಾಂಗ್ರೆಸ್‌-ಜೆಡಿಎಸ್‌ನ 17 ಮಂದಿ ಶಾಸಕರು ಸರ್ಕಾರ ಹಾಗೂ ಪಕ್ಷದಿಂದ ಅಂತರ ಕಾಯ್ದುಕೊಂಡರು. ಪಕ್ಷ ವಿರೋಧಿ ಚಟುವಟಕೆ ಹಿನ್ನೆಲೆಯಲ್ಲಿ ಪಕ್ಷಗಳು ನೀಡಿದ ದೂರು ಆಧರಿಸಿ ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಎಲ್ಲಾ 17 ಶಾಸಕರನ್ನು ಅನರ್ಹಗೊಳಿಸಿ 2019ರ ಜು. 28ರಂದು ಆದೇಶ ಹೊರಡಿಸಿದ್ದರು. ಅದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಸ್ಪೀಕರ್‌ ಆದೇಶ ಭಾಗಶಃ ಎತ್ತಿ ಹಿಡಿದು ಸುಪ್ರೀಂಕೋರ್ಟ್‌ ಆದೇಶ ನೀಡಿದೆ.

ಮೊದಲು ಹೈಕೋರ್ಟ್‌ಗೆ ಹೋಗಬೇಕಿತ್ತು: 2010ರಲ್ಲಿ 16 ಮಂದಿ ಅನರ್ಹತೆಗೊಂಡಿದ್ದ ಶಾಸಕರು ಮೊದಲು ಹೈಕೋರ್ಟ್‌ ಮೆಟ್ಟಿಲೇರಿದ್ದರೆ, ಈಗಿನ 17 ಮಂದಿ ಶಾಸಕರು ನೇರವಾಗಿ ಸುಪ್ರೀಂಕೋರ್ಟ್‌ ಕದ ತಟ್ಟಿದ್ದರು. ಇದಕ್ಕಾಗಿ, ಕಾಂಗ್ರೆಸ್‌-ಜೆಡಿಎಸ್‌ನ ಅನರ್ಹ ಶಾಸಕರನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂಕೋರ್ಟ್‌ “ನಿಮ್ಮ ಈ ನಡೆ ಒಪ್ಪುವಂತಹದ್ದಲ್ಲ. ನೀವು ಮೊದಲು ಹೈಕೋರ್ಟ್‌ಗೆ ಹೋಗಬೇಕಿತ್ತು. ಎರಡೆರಡು ವಿಚಾರಣೆ ಬೇಡ ಎಂಬ ಕಾರಣಕ್ಕೆ ನಾವೇ ಪ್ರಕರಣವನ್ನು ಕೈಗೆತ್ತಿಕೊಂಡಿದ್ದೇವೆ ಎಂದು ಹೇಳಿದೆ.

* ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next