Advertisement
ತಾಲೂಕಿನಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಯೋಜನೆ ಕಾಮಗಾರಿ ನಡೆಯುತ್ತಿರುವ ಹೆಬ್ಬನಹಳ್ಳಿ, ಹೆಬ್ಬಸಾಲೆ, ಮತ್ತಿತರ ಕಡೆಗಳಿಗೆ ಶುಕ್ರವಾರ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
Related Articles
Advertisement
ಶ್ರೀನಿವಾಸಪುರದಿಂದ ಆಗಮಿಸಿದ್ದ ತಾಪಂ ಸದಸ್ಯ ಕೆ.ಕೆ.ಮಂಜು, ಕೋಲಾರ ಭಾಗದ ಜನ ಹನಿ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಜಾನುವಾರುಗಳಿಗೆ, ಪ್ರಾಣಿ ಪಕ್ಷಿಗಳಿಗೆ ನೀರಿಲ್ಲ. 10000 ಅಡಿಗಳಷ್ಟು ಆಳದಲ್ಲಿ ಕೊಳವೆ ಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಜನ ಪ್ರೇಕ್ಷಣಿಯ ಸ್ಥಳಗಳಿಗೆ ಸಂತೋಷಕ್ಕಾಗಿ ಹೋದರೆ ನಾವು ನೀರಿಗಾಗಿ ಇಲ್ಲಿಗೆ ಬಂದಿದ್ದೇವೆ.
ಇಲ್ಲಿನ ಕಾಮಗಾರಿ ನೋಡಿ ನಮಗೆ ಸಂತೋಷವಾಗಿದೆ. ರಮೇಶ್ ಕುಮಾರ್‌ರವರು ನಮ್ಮ ಭಾಗಕ್ಕೆ ನೀರು ಹರಿಸಲು ವ್ಯಾಪಕ ಶ್ರಮ ಪಡುತ್ತಿದ್ದಾರೆ. ಇಲ್ಲಿಂದ ನೀರು ನಮಗೆ ದೊರಕುವುದರಲ್ಲಿ ಯಾವುದೆ ಅನುಮಾನವಿಲ್ಲ ಎಂದರು.
ಎತ್ತಿನಹೊಳೆ ಯೋಜನೆ ಭೂಸ್ವಾಧೀನ ಅಧಿಕಾರಿ ಗಿರೀಶ್ ನಂದನ್, ಎತ್ತಿನಹೊಳೆ ಯೋಜನೆ ಅಧೀಕ್ಷಕ ಗುರುದತ್, ಕಾರ್ಯಪಾಲಕ ಅಭಿಯಂತರ ಜಯಣ್ಣ, ಸಹಾಯಕ ಕಾರ್ಯಪಾಲಕ ಅಭಿಯಂತರ ಶಶಿಧರ್, ಸತೀಶ್ ಮತ್ತಿತರರಿದ್ದರು.
ಪತ್ರಕರ್ತರು ಸೇರಿದಂತೆ ತಾಲೂಕು ಆಡಳಿತಕ್ಕೆ ಮಾಹಿತಿ ಇಲ್ಲ: ರಮೇಶ್ ಕುಮಾರ್ ಅವರು ಕ್ಷೇತ್ರದ ಜನರೊಡನೆ ಖಾಸಗಿಯಾಗಿ ಬಂದಿದ್ದರಿಂದ ಸ್ಥಳೀಯ ಆಡಳಿತಕ್ಕೆ ರಮೇಶ್ ಕುಮಾರ್ ಅವರು ಇಲ್ಲಿಗೆ ಬರುವ ಯಾವುದೇ ಮಾಹಿತಿ ಇರಲಿಲ್ಲ. ಕ್ಷೇತ್ರದ ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರು ಚಾಮರಾಜನಗರ ಗುಂಡ್ಲುಪೇಟೆಯಲ್ಲಿ ದೌರ್ಜನ್ಯಕ್ಕೆ ಒಳಗಾದ ಯುವಕನನ್ನು ಭೇಟಿ ಮಾಡಲು ಹೋಗಿದ್ದು ಖುದ್ದು ಶಾಸಕರಿಗೂ ಈ ಬಗ್ಗೆ ಮಾಹಿತಿಯಿರಲಿಲ್ಲ.
ಸ್ಥಳೀಯ ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್ ಈ ಹಿನ್ನೆಲೆಯಲ್ಲಿ ಗೈರು ಹಾಜರಾಗಿದ್ದರು. ಎತ್ತಿನಹೊಳೆ ಯೋಜನೆ ಅಧಿಕಾರಿಗಳಿಗೂ ಸರಿಯಾದ ಮಾಹಿತಿ ಇಲ್ಲದೆ ಅಂತಿಮವಾಗಿ ತರಾತುರಿಯಲ್ಲಿ ಸಿದ್ಧತೆ ನಡೆಸಿದರು. ಎತ್ತಿನಹೊಳೆ ಕಾಮಗಾರಿ ವ್ಯಾಪ್ತಿಯ ಬೆಳಗೋಡು ಹೋಬಳಿಯ ಹೆಬ್ಬನಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಟನಲ್ ವೀಕ್ಷಿಸಲು ಶ್ರೀನಿವಾಸಪುರದ ಜನತೆ ಶಿಸ್ತಿನ ಸಿಪಾಯಿಗಳಂತೆ ನಡೆದು ಸಾಗಿದರು.
ಬೈರಗೊಂಡ್ಲುವಿನಿಂದ ಅವಳಿ ಜಿಲ್ಲೆಗೆ ನೀರು: ಸುಮಾರು 140 ಕೋಟಿ ರೂ. ವೆಚ್ಚದಲ್ಲಿ 2 ಕಿ.ಮೀ. ಟನಲ್ ನಿರ್ಮಾಣ ಮಾಡಲಾಗುತ್ತಿದ್ದು, ಸುಮಾರು 260 ಮೀಟರ್‌ನಷ್ಟು ನೀರನ್ನು ಒಂದು ಸಮಯದಲ್ಲಿ ಪಂಪ್ ಮಾಡಿ ಟನಲ್ ಮೂಲಕ ಗುರುತ್ವಾಕರ್ಷಣ ಶಕ್ತಿಯಲ್ಲಿ ಬೈರಗುಂಡ್ಲು ಸಮೀಪ ಹರಿಸಿ ಅಲ್ಲಿಂದ ಕೋಲಾರ ಹಾಗೂ ಚಿಕ್ಕಬಳ್ಳಾಪುರಕ್ಕೆ ನೀರನ್ನು ನೀಡಲಾಗುವುದು.
ಎತ್ತಿನಹೊಳೆ ಕಾಮಗಾರಿಯನ್ನು 2 ಹಂತದಲ್ಲಿ ಕೈಗೊಳ್ಳಲಾಗಿದ್ದು ಮೊದಲ ಹಂತದ ಪೈಪ್ ಲೈನ್ ಕಾಮಗಾರಿ ಶೇ.80 ಪೂರ್ಣಗೊಂಡಿದೆ. 2ನೇ ಹಂತದಲ್ಲಿ ಗುರುತ್ವಾಕರ್ಷಣ ಮೂಲಕ ನೀರು ಕೊಡುವ ಕಾಮಗಾರಿ ಶೇ.46 ಮುಗಿದಿದ್ದು ಅತಿ ವೇಗವಾಗಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಶ್ರೀನಿವಾಸಪುರ ಕ್ಷೇತ್ರದಿಂದ ಆಗಮಿಸಿದ್ದ ಎತ್ತಿನಹೊಳೆ ಯೋಜನೆ ಅಧೀಕ್ಷಕ ಗುರುದತ್ ಮಾಹಿತಿ ನೀಡಿದರು.
ಪತ್ರಕರ್ತರ ಪ್ರಶ್ನೆಗೆ ಸ್ಪೀಕರ್ ಉತ್ತರ1. ರಾಜಕೀಯ ಗಿಮಿಕ್‌ಗಾಗಿ ತಾವು ಕ್ಷೇತ್ರದ ಜನರನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದೀರಾ?
ಯಾವುದೇ ರಾಜಕೀಯ ಗಿಮಿಕ್ ಇಲ್ಲ. ಮಲೆನಾಡಿನ ಜನ ಉದಾರಿಗಳು ಇಲ್ಲಿನ ಜನ ಯಾವುದೇ ರೀತಿಯಲ್ಲಿ ಅಡ್ಡಿಪಡಿಸದೆ ಕಾಮಗಾರಿ ನಡೆಯಲು ಸಹಕರಿಸಿದ್ದಾರೆ. ಹೀಗಾಗಿ ಕ್ಷೇತ್ರದ ಅಭಿವೃದ್ಧಿಗೆ ಎಲ್ಲಾ ರೀತಿಯಲ್ಲೂ ಸಹಕರಿಸುತ್ತೇವೆ ಹಾಗೂ ಸದಾ ಈ ಭಾಗದ ಜನತೆಗೆ ಚಿರಋಣಿಯಾಗಿರುತ್ತೇವೆ ಎಂದರು. 2. ಎತ್ತಿನಹೊಳೆ ಯೋಜನೆಯಿಂದ ಮಲೆನಾಡಿಗೆ ರಸ್ತೆ ಬಿಟ್ಟರೆ ಬೇರೆ ಏನು ಉಪಯೋಗವಾಗಿಲ್ಲ. ಕಾಡಾನೆ ಸಮಸ್ಯೆ, ಗ್ರಂಥಾಲಯ, ಕ್ರೀಡಾಂಗಣ, ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ, ಉದ್ಯಾನವನ ಕೊರತೆ ಮುಂತಾದ ಸಮಸ್ಯೆ ಇದ್ದೇ ಇದೆ?
ಈ ಬಗ್ಗೆ ಇಲ್ಲಿನ ಶಾಸಕರು ಗಮನಹರಿಸಬೇಕು. 3. ಸ್ವಾಮಿ, ನಾನು ಎತ್ತಿನಹೊಳೆ ಯೋಜನೆ ಭೂ ಸಂತ್ರಸ್ಥ. ಜಾಗ ಕಳೆದುಕೊಂಡಿದ್ದೇನೆ, ಮಕ್ಕಳಿಗೆ ಉದ್ಯೋಗ ಅವಕಾಶ ಕಲ್ಪಿಸಿ.
ಯಾರೂ ಬಡವರಲ್ಲ. ಪ್ರತಿ ಯೋಜನೆ ಜಾರಿಗೆ ತರುವಾಗ ಆ ಪ್ರದೇಶದ ಸಂತ್ರಸ್ಥರ ಕುಟುಂಬಕ್ಕೆ ಉದ್ಯೋಗ ನೀಡಲು ಮೀಸಲಾತಿ ನೀಡಬಹುದಾಗಿದೆ. ಇದನ್ನು ಅನುಷ್ಠಾನಗೊಳಿಸಲು ವಿಶ್ವೇಶ್ವರಯ್ಯ ನೀರಾವರಿ ನಿಗಮಕ್ಕೆ ಆದೇಶಿಸುತ್ತೇನೆ ಎಂದು ತಿಳಿಸಿದರು.