ಶಿರಸಿ: ಅರಣ್ಯ, ತೋಟಗಾರಿಕಾ ಮಹಾ ವಿದ್ಯಾಲಯ ಕೂಡ ಇದೆ. ಅವುಗಳಿಗೆ ಹೆಚ್ಚು ಬಲ ಕೊಡಲು, ಶೈಕ್ಷಣಿಕ ಏಳಿಗೆಗೆ ಶಿರಸಿಗೆ ನೂತನ ವಿಶ್ವ ವಿದ್ಯಾಲಯ ಆರಂಭಿಸಲು ಸರಕಾರದ ಮಟ್ಟದಲ್ಲಿ ವಿಶೇಷ ಪ್ರಯತ್ನ ನಡೆಸಲಾಗಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಬುಧವಾರ ನಗರದ ನಿಲೇಕಣಿ ವೆಂಕಟರಾವ್ ಪಿಯುಸಿ ಕಾಲೇಜಿನಲ್ಲಿ ಪ್ರಯೋಗಾಲಯ, ಸಭಾ ಭವನ, ಖಗೋಳ ದೂರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲೆಗೆ ವಿಶ್ವವಿದ್ಯಾಲಯ ಆಗಬೇಕು. ಅದು ಶಿರಸೀಲಿ ಆಗಬೇಕು ಎಂದ ಕಾಗೇರಿ, ವಿಜ್ಞಾನ ಕೇಂದ್ರಕ್ಕೆ ಇನ್ನೂ ಮೂರು ಕೋಟಿ ಪ್ರಸ್ತಾವನೆ ಇದೆ. ಈಗಾಗಲೇ 7 ಕೋ.ರೂ. ಬಿಡುಗಡೆ ಆಗಿದೆ. ಮಾದರಿ ಕೇಂದ್ರ ಮಾಡುವ ಚಿಂತನೆ ಎಂದರು.
ನಿಲೇಕಣಿ ಕುಟುಂಬದವರು ಎರಡು ಎಕರೆ ಜಾಗ ಕೊಟ್ಟಿದ್ದ ಕಾರಣದಿಂದ ಈ ಕಾಲೇಜು ಹಾಗೂ ಕಟ್ಟಡ ಆಗಿದೆ. 496 ಮಕ್ಕಳು ಇಲ್ಲಿ ಓದುತ್ತಿದ್ದಾರೆ. ವಾಣಿಜ್ಯ, ಕಲಾ ವಿಭಾಗ ಅಡ್ಡಿಲ್ಲ. ಆದರೆ ಶೇ.೫೦ ವಿಜ್ಞಾನ ವಿಭಾಗದಲ್ಲಿ ಫಲಿತಾಂಶ ಆಗಿದೆ. ಇದಕ್ಕೆ ಸಮಾಧಾನ ಇಲ್ಲ. ಇನ್ನಷ್ಟು ಸಾಧನೆ ಆಗಬೇಕು. ಯಾವ ಸಂದರ್ಭದಲ್ಲೂ ಶೇ.80 ಕ್ಕಿಂತ ಕಡಿಮೆ ಆಗಬಾರದು. ಓದದೇ ಹೋದರೆ ನಾವು ಶ್ರಮಿಸಿದ್ದು ವ್ಯರ್ಥ ಆಗುತ್ತದೆ ಎಂದರು.
ಕಾಲೇಜಿನ ರಸ್ತೆಗೆ 21 ಲ.ರೂ ಹಣ ಬಿಡುಗಡೆ ಆಗಿದೆ. ಮಣ್ಣು ಭರಾವು ಮಾಡಿ ಆಟದ ಮೈದಾನ ಮಾಡಬೇಕು ಎಂಬ ಬೇಡಿಕೆ ಇದೆ. ಈವರೆಗೆ 2.70 ಕೋಟಿ ಹಣ ಬಂದಿದೆ. ಸುಸಜ್ಜಿತ ಕಟ್ಟಡ ಆಗಿದೆ ಎಂದರು.
ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಅಧ್ಯಕ್ಷತೆ ವಹಿಸಿದರು.
ವೇದಿಕೆಯಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ನಂದನ್ ಸಾಗರ, ನಗರಸಭೆ ಉಪಾಧ್ಯಕ್ಷೆ ವೀಣಾ ಶೆಟ್ಟಿ, ಪ್ರಮುಖರಾದ ಸತೀಶ ಧಾರೇಶ್ವರ, ಉದಯ ನಿಲೇಕಣಿ, ಜಯದೇವ ನಿಲೇಕಣಿ ಇತರರು ಇದ್ದರು.
ಪ್ರಾಚಾರ್ಯ ನರೇಂದ್ರ ನಾಯಕ. ಸ್ವಾಗತಿಸಿದರು. ದಿವಾಕರ ನಾಯ್ಕ ವಂದಿಸಿದರು.