ಹೊಸದಿಲ್ಲಿ : ಪಂಜಾಬ್ ನ್ಯಾಶನಲ್ ಬ್ಯಾಂಕ್ ಬಹುಕೋಟಿ ಹಗರಣ ಮತ್ತು ರಾಫೇಲ್ ಡೀಲ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ವಹಿಸಿರುವ “ಜಾಣ ಮೌನ’ವನ್ನು ಪ್ರಶ್ನಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಂದು ಪ್ರದಾನಿ ಮೋದಿ ವಿರುದ್ಧ ವಾಕ್ ದಾಳಿ ನಡೆಸಿದ್ದಾರೆ.
ಪ್ರಧಾನಿ ಮೋದಿ ಅವರು ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ನೀರವ್ ಮೋದಿ ಕುರಿತಾಗಿ ಮಾತನಾಡುವುದನ್ನು ತಾನು ಎದುರುನೋಡುತ್ತಿದ್ದೇನೆ ಎಂದು ರಾಹುಲ್ ಕಟಕಿಯಾಡಿದ್ದಾರೆ.
ಪ್ರಧಾನಿ ಮೋದಿ ಅವರು ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪಿಎನ್‌ಬಿ ಬಹುಕೋಟಿ ಹಗರಣ ಕಳಂಕಿತ ಬಿಲಿಯಾಧಿಪತಿ, ವಜ್ರಾಭರಣ ಉದ್ಯಮಿ ನೀರವ್ ಮೋದಿ ಬಗ್ಗೆ ಮತ್ತು ರಾಫೇಲ್ ಹಗರಣದ ಬಗ್ಗೆ ಮಾತನಾಡಬೇಕು ಎಂದು ಇಡಿಯ ದೇಶವೇ ಅಪೇಕ್ಷಿಸುತ್ತಿದೆ ಎಂದು ರಾಹುಲ್ ಹೇಳಿದರು.
ಅಧಿಕಾರದಲ್ಲಿರುವವರಿಂದ ರಕ್ಷಣೆ ಪಡೆದು ಬಹುಕೋಟಿ ಪಿಎನ್‌ಬಿ ಹಗರಣದ ಆರೋಪಿ ನೀರವ್ ಮೋದಿ ದೇಶದಿಂದ ಪಲಾಯನ ಮಾಡಿದ್ದಾರೆ; ಈ ಬಗ್ಗೆ ಪ್ರದಾನಿ ಮೋದಿ ಅವರು ಏಕೆ ಮೌನವಹಿಸಿದ್ದಾರೆ ಎಂದು ರಾಹುಲ್ ಪ್ರಶ್ನಿಸಿದ್ದಾರೆ.
2018 ಜನವರಿ 28ರ ತಮ್ಮ ಮನ್ ಕೀ ಬಾತ್ ಕಾರ್ಯಕ್ರಮಕ್ಕೆ ಜನರು ತಮಗೆ ಹೊಸ ಆಲೋಚನೆಗಳು ಮತ್ತು ಸಲಹೆಗಳನ್ನು ನೀಡುವಂತೆ ಕೋರಿದ್ದ ಪ್ರಧಾನಿ ಮೋದಿಗೆ ರಾಹುಲ್ “ನೀವು ದೇಶದಲ್ಲಿ ರೇಪ್ ಗಳನ್ನು ನಿಲ್ಲಿಸುವ ಬಗೆಗಿನ ಸರಕಾರದ ಯೋಜನೆಗಳ ಬಗ್ಗೆ, ಡೋಕ್ಲಾಂ ನಿಂದ ಚೀನೀ ಸೇನೆಯನ್ನು ಅಟ್ಟುವ ಬಗ್ಗೆ, ಯುವಕರಿಗೆ ಉದ್ಯೋಗಾವಕಾಶವನ್ನು ಕಲ್ಪಿಸುವ ಬಗ್ಗೆ ಮಾತನಾಡಬೇಕು’ ಎಂಬ ಸಲಹೆ ನೀಡಿದ್ದರು.