ಸುಳ್ಯ: ಬೆಳಗಾವಿಯಲ್ಲಿ ಮೂರು ವರ್ಷ ದಕ್ಷ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಡಾ| ಬಿ.ಆರ್. ರವಿಕಾಂತೇ ಗೌಡ ಅವರು ಎಸ್‌ಪಿ ಆಗಿ ಜಿಲ್ಲೆಗೆ ಬರುತ್ತಾರೆ. ಜಿಲ್ಲೆಯ ಆಡಳಿತ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಸರಕಾರ ಈ ಬದಲಾವಣೆ ಮಾಡಿರಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು.
ಪತ್ರಕರ್ತರ ಜತೆ ಮಾತನಾಡಿದ ಅವರು, ಎಸ್‌ಪಿ ಸುಧೀರ್ ಕುಮಾರ್ ರೆಡ್ಡಿ ವರ್ಗಾವಣೆ ಹಿಂದೆ ಪಿತೂರಿ ಇಲ್ಲ. ಜಿಲ್ಲೆಯಲ್ಲಿ ಸಾಮರಸ್ಯಕ್ಕೆ ಪೂರಕವಾದ ಕ್ರಮ ಕೈಗೊಳ್ಳುವುದು ನಮ್ಮ ಜವಾಬ್ದಾರಿ. ಇಲ್ಲಿ ನಡೆದ ಮತೀಯ ಸಂಘರ್ಷಗಳಲ್ಲಿ ಅಮಾಯಕರ ಹತ್ಯೆ ಆಗಿದೆ. ಹತ್ಯೆ ಆರೋಪಿಗಳಲ್ಲಿ ಕಾಂಗ್ರೆಸ್ಸಿಗರು ಇಲ್ಲ; ಬಿಜೆಪಿ ಮತ್ತು ಎಸ್‌ಡಿಪಿಐಯವರು ಮಾತ್ರ ಇದ್ದಾರೆ ಎಂದು ಹೇಳಿದರು.
ಸೋಲಿನ ಭಯ ಇದ್ದೇ ಪಾದಯಾತ್ರೆ: ಬಂಟ್ವಾಳದಲ್ಲಿ ರೈ ಸೋಲುತ್ತಾರೆ ಎಂದು ಬಿಜೆಪಿ ಹೇಳುತ್ತದೆ. ನನ್ನ ಸೋಲಿನ ಖಾತರಿ ಇದ್ದರೆ ಅವರ್ಯಾಕೆ ನನ್ನ ಕ್ಷೇತ್ರದಲ್ಲಿ ಪಾದಯಾತ್ರೆ ಮಾಡಬೇಕು? ಬಿಜೆಪಿಗೆ ಗೆಲುವು ನಿಶ್ಚಿತ ಎಂದಿದ್ದರೆ ಮನೆಯಲ್ಲಿಯೇ ಕೂರಬೇಕಿತ್ತು. ಆದರೆ ಬಿಜೆಪಿಗೆ ಎಂಟು ಕ್ಷೇತ್ರಗಳಲ್ಲಿಯೂ ಸೋಲು ಖಚಿತವಾಗಿರುವ ಹಿನ್ನೆಲೆಯಲ್ಲಿ ಪಾದಯಾತ್ರೆಗೆ ಹೊರಟಿದ್ದಾರೆ. ಇವರ ನಾಟಕವನ್ನು ಜನರು ಒಪ್ಪುವುದಿಲ್ಲ ಎಂದು ಸಚಿವರು ಹೇಳಿದರು.
ಹೈಕಮಾಂಡ್ ತೀರ್ಮಾನ: ಜಿಲ್ಲೆಯ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರನ್ನು ಸಿದ್ದರಾಮಯ್ಯ ಘೋಷಿಸಿದ್ದಾರಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ರೈ, ಮುಖ್ಯಮಂತ್ರಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಅಂತಿಮ ತೀರ್ಮಾನವನ್ನು ಮುಖ್ಯಮಂತ್ರಿ ಜತೆಗೂಡಿ ಹೈಕಮಾಂಡ್ ತೆಗೆದುಕೊಳ್ಳತ್ತದೆ ಎಂದರು.
ಸಮೀಕ್ಷೆ ನಡೆದಿಲ್ಲ: ಜಿಲ್ಲೆಯ 4 ಸ್ಥಾನಗಳಲ್ಲಿ ಮಾತ್ರ ಕಾಂಗ್ರೆಸ್ ಗೆಲ್ಲುತ್ತದೆ ಎಂಬ ಆಂತರಿಕ ಸಮೀಕ್ಷೆ ಫಲಿತಾಂಶದ ಬಗ್ಗೆ ಉತ್ತರಿಸಿದ ರೈ, ಆಂತರಿಕ ಸಮೀಕ್ಷೆ ನಡೆದೇ ಇಲ್ಲ, ರಾಜ್ಯಾಧ್ಯಕ್ಷರೇ ಇದನ್ನು ಸ್ಪಷ್ಟಪಡಿಸಿದ್ದಾರೆ ಎಂದರು.