Advertisement

Soya Chunks Kurma-ಪೂರಿ, ಚಪಾತಿ, ದೋಸೆಗೆ ಹೇಳಿ ಮಾಡಿಸಿದ ರೆಸಿಪಿ

06:31 PM Jul 21, 2023 | Team Udayavani |

ಬೆಳಿಗ್ಗೆ ಆದ್ರೆ ಸಾಕು ಕೆಲವರಿಗೆ ಇವತ್ತು ಯಾವ ತಿಂಡಿ ಮಾಡೋದು ಅನ್ನೋದೇ ಸಮಸ್ಯೆಯಾಗಿಬಿಟ್ಟಿದೆ. ನಿತ್ಯ ಇಡ್ಲಿ,ರೈಸ್‌ ಐಟಂ ತಿಂದು ಬೇಜಾರ್‌ ಆಗಿರುತ್ತೆ.ಇನ್ನೂ ಕೆಲವರಿಗೆ ಚಪಾತಿ, ಪೂರಿ, ದೋಸೆ ಮಾಡಿದರೆ ಅದಕ್ಕೆ ಏನು ಪಲ್ಯ ಮಾಡೋದು ಅನ್ನೋ ಚಿಂತೆ ಮಹಿಳೆಯರಿಗೆ ಸಾಮಾನ್ಯವಾಗಿದೆ. ಅದಕ್ಕೆ ಇಲ್ಲೊಂದು ರೆಸಿಪಿ ಇದೆ. ಈ ರೆಸಿಪಿಯು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಅದುವೇ ಸೋಯಾ ಚಂಕ್ಸ್‌ ನಿಂದ ಮಾಡುವ ಕುರ್ಮಾ.

Advertisement

ಸಹಜವಾಗಿ ಸೋಯಾ ಚಂಕ್ಸ್‌(ಸೋಯಾ ಬಿನ್‌) ಎಲ್ಲರಿಗೂ ಇಷ್ಟವಾಗುತ್ತೆ. ನಾಲಿಗೆಗೂ ಹೆಚ್ಚು ರುಚಿ ಕೊಡುವ ಸೋಯಾ ಚಂಕ್ಸ್‌ ನಲ್ಲಿ ಆರೋಗ್ಯಕ್ಕೆ ಅಗತ್ಯವಿರುವ ವಿಟಮಿನ್ ಅಂಶಗಳು ಹೊಂದಿವೆ. ತುಂಬಾ ಸ್ವಾದಿಷ್ಟಕರವಾದ ಮತ್ತು ಅಷ್ಟೇ ಪೌಷ್ಟಿಕಾಂಶಗಳನ್ನು ಒಳಗೊಂಡ ಸಸ್ಯಧಾರಿತ ಪ್ರೋಟಿನ್‌ ಅಂಶವನ್ನು ಒಳಗೊಂಡ ಸೋಯಾ ಚಂಕ್ಸ್‌ ಅನ್ನು ಆಹಾರ ಪದಾರ್ಥಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ.

ಹಾಗಾದ್ರೆ “ಸೋಯಾ ಚಂಕ್ಸ್‌ ಕುರ್ಮಾ” ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ…..

ಬೇಕಾಗುವ ಸಾಮಗ್ರಿಗಳು
ಸೋಯಾ ಚಂಕ್ಸ್‌ -1ಕಪ್‌, ಹಸಿಬಟಾಣಿ-ಅರ್ಧ ಕಪ್‌, ಈರುಳ್ಳಿ-2(ಸಣ್ಣಗೆ ಹೆಚ್ಚಿದ್ದು), ಶುಂಠಿ-ಬೆಳ್ಳುಳ್ಳಿ ಪೇಸ್ಟ್‌- 2 ಚಮಚ, ಖಾರದ ಪುಡಿ-2ಚಮಚ, ಅರಿಶಿನ ಪುಡಿ-ಕಾಲು ಚಮಚ, ಗರಂ ಮಸಾಲ ಪುಡಿ-1ಚಮಚ, ಧನಿಯಾ ಪುಡಿ-ಅರ್ಧ ಚಮಚ, ಕೊತ್ತಂಬರಿ ಸೊಪ್ಪು- ಸ್ವಲ್ಪ (ಸಣ್ಣಗೆ ಹೆಚ್ಚಿದ್ದು), ತೆಂಗಿನ ತುರಿ-4ಚಮಚ, ಏಲಕ್ಕಿ-2,ಪಲಾವ್‌ ಎಲೆ-1,ಜೀರಿಗೆ- ಕಾಲು ಚಮಚ, ಕಸೂರಿ ಮೇಥಿ-ಸ್ವಲ್ಪ, (ಗೋಡಂಬಿ 6, ಗಸಗಸೆ ಸ್ವಲ್ಪ-5 ನಿಮಿಷ ನೀರಿನಲ್ಲಿ ನೆನೆಸಿದ್ದು), ತೆಂಗಿನೆಣ್ಣೆ-3 ಚಮಚ, ಟೊಮೆಟೋ -3(ಪೇಸ್ಟ್‌) ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ
-ಮೊದಲಿಗೆ ಒಂದು ಪಾತ್ರೆಗೆ ಬೆಚ್ಚನೆಯ ನೀರಿನಲ್ಲಿ ಸೋಯಾ ಚಂಕ್ಸ್‌ ಹಾಕಿ ಸ್ವಲ್ಪ ಉಪ್ಪನ್ನ ಸೇರಿಸಿ 10 ನಿಮಿಷಗಳ ಕಾಲ ಹಾಗೇ ಬಿಡಿ.
-ನಂತರ ಮಿಕ್ಸಿಜಾರಿನಲ್ಲಿ ನೆನೆಸಿಟ್ಟ ಗೋಡಂಬಿ-ಗಸಗಸೆ ಹಾಗೂ ತೆಂಗಿನ ತುರಿ ಹಾಕಿ ಸ್ವಲ್ಪ ನೀರನ್ನು ಸೇರಿಸಿ ರುಬ್ಬಿಕೊಳ್ಳಿ.
-ಇನ್ನೊಂದು ಪ್ಯಾನ್‌ ಗೆ 3ಚಮಚ ಎಣ್ಣೆಯನ್ನ ಹಾಕಿ ಅದಕ್ಕೆ ಪಲಾವ್‌ ಎಲೆ, ಜೀರಿಗೆ, ಕಸ್ತೂರಿ ಮೇಥಿ, ಏಲಕ್ಕಿ ಹಾಕಿ ಹುರಿದುಕೊಳ್ಳಿ.
-ಇದಕ್ಕೆ ಸಣ್ಣಗೆ ಹೆಚ್ಚಿದ್ದ ಈರುಳ್ಳಿ , ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ ಹಾಕಿ ಕಂದುಬಣ್ಣ ಬರುವವರೆಗೆ ಹುರಿಯಿರಿ.
-ನಂತರ ಹಸಿಬಟಾಣಿ, ಖಾರದ ಪುಡಿ, ಅರಿಶಿನ ಪುಡಿ, ಧನಿಯಾ ಪುಡಿಯನ್ನ ಹಾಕಿ.ಇದಕ್ಕೆ ರುಬ್ಬಿಕೊಂಡ ಗೋಡಂಬಿ ಮಿಶ್ರಣವನ್ನ ಸೇರಿಸಿ ಅದರ ಜೊತೆ ಟೊಮೆಟೋ ಪೇಸ್ಟ್‌ ನ್ನು ಹಾಕಿ ಹಸಿ ವಾಸನೆ ಹೋಗುವವರೆಗೂ ಹುರಿಯಿರಿ.
-ಬಳಿಕ ಬೆಚ್ಚನೆಯ ನೀರಿನಲ್ಲಿ ಇಟ್ಟ ಸೋಯಾ ಚಂಕ್‌ ಗಳನ್ನ ಹಾಕಿ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ 5 ರಿಂದ 10 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿರಿ.
-ತದನಂತರ ಅದಕ್ಕೆ ಸಣ್ಣಗೆ ಹೆಚ್ಚಿದ್ದ ಕೊತ್ತಂಬರಿ ಸೊಪ್ಪನ್ನು ಹಾಕಿದರೆ ರುಚಿಕರವಾದ ಸೋಯಾ ಚಂಕ್ಸ್‌ ಕುರ್ಮಾ ಸವಿಯಲು ಸಿದ್ಧ.

Advertisement

ಇದು ಚಪಾತಿ, ಪೂರಿ, ರೋಟಿ ಹಾಗೂ ದೋಸೆಯೊಂದಿಗೆ ತಿನ್ನಲು ಬಹಳ ರುಚಿಕರ.

-ಶ್ರೀರಾಮ್ ಜಿ ನಾಯಕ್

Advertisement

Udayavani is now on Telegram. Click here to join our channel and stay updated with the latest news.

Next