ಚನ್ನರಾಯಪಟ್ಟಣ: ರೈತರಿಗೆ ನ್ಯಾಯುತವಾದ ದರದಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ನೀಡುವ ನಿಟ್ಟಿನಲ್ಲಿ ಸಹಕಾರ ಮಾರಾಟ ಮಂಡಳಿಯಿಂದ ಚಿಲ್ಲರೆ ಮಾರಾಟ ಕೇಂದ್ರ ತೆರೆಯಲಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣ ದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿಯಿಂದ ರಸಗೊಬ್ಬರ, ಕೀಟನಾಶಕ ಹಾಗೂ ಬಿತ್ತನೆ ಬೀಜಗಳ ಚಿಲ್ಲರೆ ಮಾರಾಟ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಂಗಾರಿನ ವೇಳೆ ರೈತರಿಂದ ಹೆಚ್ಚುವರಿಯಾಗಿ ವರ್ತಕರು ಹಣ ವಸೂಲಿ ಮಾಡುತ್ತಾರೆ.
ಇದನ್ನು ತಪ್ಪಿಸುವ ದೃಷ್ಟಿಯಿಂದ ಮೂಲಕ ಚಿಲ್ಲರೆ ಮಾರಾಟ ಕೇಂದ್ರ ತೆರೆಯಲಾಗಿದೆ ಎಂದು ಹೇಳಿದರು. ರಿಯಾಯಿತಿ ದರದಲ್ಲಿ ಸಹಕಾರ ಸಂಘ ಹಾಗೂ ಖಾಸಗಿ ಮಾರಾಟಗಾರರಿಗೆ ಅವಕಾಶ ನೀಡಲಾಗಿದೆ, ಕಳೆದ ವರ್ಷ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಸುಸಜ್ಜಿತ ವ್ಯವಸ್ಥೆಯೊಂದಿಗೆ ಎರಡು ಗೋದಾಮು ನಿರ್ಮಿಸಲಾಗಿದೆ.
ಮುಂದಿನ ವರ್ಷದಲ್ಲಿ ಮತ್ತೂಂದು ಗೋದಾಮು ನಿರ್ಮಿಸುವ ಯೋಜನೆ ರೂಪಿಸಲಾಗಿದೆ ಇದರಿಂದ ರೈತರಿಗೆ ಸಹಕಾರಿಯಾಗಲಿದೆ ಎಂದು ಭರವಸೆ ನೀಡಿದರು. ರಾಜ್ಯದಲ್ಲಿ 12ಕ್ಕೂ ಹೆಚ್ಚು ಜಿಲ್ಲೆಯಲ್ಲಿ ತೆಂಗು ಬೆಳೆಯಲಾಗುತ್ತಿದೆ. ಒಂದು ಟನ್ ತೆಂಗಿನಕಾಯಿಗೆ ಕೇವಲ 22 ಸಾವಿರ ರೂ. ಹಾಗೂ ಒಂದು ಕ್ವಿಂಟಲ್ ಕೊಬ್ಬರಿಗೆ 10,300 ರೂ. ಬೆಲೆ ಸಿಗುತ್ತಿದೆ ಇದರಿಂದ ಆರ್ಥಿಕವಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿರ್ದೇಶಕ ಡಿ.ಎಲ್.ಮಂಜುನಾಥ್, ಎಪಿಎಂಸಿ ಉಪಾಧ್ಯಕ್ಷ ಮುನಿಯಪ್ಪ, ನಿರ್ದೇಶಕರಾದ ಎಂ.ಶಂಕರ್, ತಿಮ್ಮೇಗೌಡ, ಫೆಡರೇಷನ್ ವ್ಯವಸ್ಥಾಪಕ ಚೇತನ್, ಕೃಷಿ ಅಧಿಕಾರಿ ರಶ್ಮಿ ಉಪಸ್ಥಿತರಿದ್ದರು.