ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಬಿತ್ತನೆ ಸಮಯದಲ್ಲಿ ಮಾಯವಾಗಿ ರೈತರನ್ನು ಕಂಗಾಲಾಗಿಸಿದ್ದ ಮಳೆರಾಯ, ಒಂದೆರೆಡು ದಿನಗಳಿಂದ ಕೃಪೆ ತೋರುತ್ತಿದ್ದು, ಕೃಷಿ ಇಲಾಖೆ ಹೊಂದಿದ್ದ 1.54 ಲಕ್ಷ ಹೆಕ್ಟೇರ್ ಗುರಿ ಪೈಕಿ ಜಿಲ್ಲಾದ್ಯಂತ ಇದುವರೆಗೂ 74 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ವಿವಿಧ ಬೆಳೆಗಳು ಬಿತ್ತನೆಗೊಂಡು ಶೇ.48.32 ರಷ್ಟು ಮಾತ್ರ ಗುರಿ ಸಾಧಿಸಲಾಗಿದ್ದು, ಜಿಲ್ಲಾದ್ಯಂತ ಈ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆಯಾಗುವುದು ಅನುಮಾನವಾಗಿದೆ.
ಕುಸಿದ ನೆಲಗಡಲೆ, ತೊಗರಿ: ಜಿಲ್ಲೆಯ ಹವಾಮಾನದ ಪ್ರಕಾರ ನೆಲಗಡಲೆ ಹಾಗೂ ತೊಗರಿ ಬಿತ್ತನೆಯನ್ನು ಜುಲೈ ಮೂರನೇ ವಾರ ಅಥವ ಅಂತ್ಯಕ್ಕೆ ಮುಗಿಸಬೇಕು. ಆದರೆ ಮುಂಗಾರಿನ ಆರಂಭದಲ್ಲಿ ಜಿಲ್ಲೆಯಲ್ಲಿ ಮಳೆ ಕೈ ಕೊಟ್ಟಿರುವ ಪರಿಣಾಮ ಜಿಲ್ಲೆಯ ಮಳೆಯ ಆಶ್ರಿತ ಪ್ರಧಾನ ಬೆಳೆಯಾದ ಅದರಲ್ಲೂ ರೈತರಿಗೆ ವಾಣಿಜ್ಯ ಬೆಳೆಯಾಗಿರುವ ನೆಲಗಡಲೆ ಹಾಗೂ ತೊಗರಿ ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಕುಸಿದಿದ್ದು, ರೈತರನ್ನು ಚಿಂತೆಗೀಡು ಮಾಡಿದೆ.
ಶೇ.57.06 ರಷ್ಟು ಪ್ರಗತಿ: ಜಿಲ್ಲೆಯಲ್ಲಿ ಒಟ್ಟು 13,600 ಹೆಕ್ಟೇರ್ ಗುರಿ ಪೈಕಿ ಇದುವರೆಗೂ ತೊಗರಿ ಕೇವಲ 5,850 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದ್ದು, ಶೇ.43.08 ಗುರಿ ಸಾಧಿಸಲಾಗಿದೆ. ಇನ್ನೂ ನೆಲಗಡಲೆ ಜಿಲ್ಲಾದ್ಯಂತ ಒಟ್ಟು 32,750 ಹೆಕ್ಟೇರ್ ಪ್ರದೇಶದಲ್ಲಿ ಗುರಿ ಹೊಂದಿ ಆ ಪೈಕಿ ಇದುವರೆಗೂ ಕೇವಲ 18,688 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿ ಶೇ.57.06 ರಷ್ಟು ಪ್ರಗತಿ ಸಾಧಿಸಿದೆ. ಕೃಷಿ ಇಲಾಖೆ ಪ್ರಕಾರ ಜಿಲ್ಲೆಯಲ್ಲಿ ಇನ್ನೂ ನೆಲಗಡಲೆ ಹಾಗೂ ತೊಗರಿ ಬಿತ್ತನೆಯ ಸಮಯ ಮೀರಿದ್ದು ಬಿತ್ತನೆ ಮಾಡಿದರೂ ಮೊಳಕೆ ಒಡೆಯುವುದು ಅನುಮಾನ. ಇದರ ಬದಲಾಗಿ ರೈತರು ರಾಗಿ, ಅಲಸಂಧಿ, ಹುರುಳಿ ಮತ್ತಿತರ ಬೆಳೆಗಳನ್ನು ಅವಲಂಬಿಸಬೇಕಿದೆ.
ತಾಲೂಕುವಾರು ಬಿತ್ತನೆ ಪ್ರಮಾಣ: ಜಿಲ್ಲೆಯಲ್ಲಿ ಒಟ್ಟು 1.54 ಲಕ್ಷ ಹೇಕ್ಟರ್ ಬಿತ್ತನೆ ಗುರಿ ಪೈಕಿ ಜಿಲ್ಲೆಯ ಆರು ತಾಲೂಕುಗಳಲ್ಲಿ ಇದುವರೆಗೂ 74 ಸಾವಿರ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ ಆಗಿದ್ದು, ಈ ಪೈಕಿ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಒಟ್ಟು 17,579 ಹೆಕ್ಟೇರ್ ಪೈಕಿ ಕೇವಲ 9,332 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಗೌರಿಬಿದನೂರು ತಾಲೂಕಿನಲ್ಲಿ 39,445 ಹೆಕ್ಟೇರ್ ಪೈಕಿ ಇದುವರೆಗೂ ಕೇವಲ 23,648, ಗುಡಿಬಂಡೆ ತಾಲೂಕಿನಲ್ಲಿ 11,885 ಹೆಕ್ಟೇರ್ ಪೈಕಿ 8,804 ಹಾಗೂ ಬಾಗೇಪಲ್ಲಿ ತಾಲೂಕಿನಲ್ಲಿ 31,899 ಹೆಕ್ಟೇರ್ ಪೈಕಿ ಇದುವರೆಗೂ 22,220 ಹೆಕ್ಟೇರ್ ಪ್ರದೇಶದಲ್ಲಿ, ಚಿಂತಾಮಣಿ ತಾಲೂಕಿನಲ್ಲಿ 35,918 ಹೆಕ್ಟೇರ್ ಪೈಕಿ ಇದುವರೆಗೂ 1,717 ಹಾಗೂ ಶಿಡ್ಲಘಟ್ಟ ತಾಲೂಕಿನಲ್ಲಿ 17,273 ಹೆಕ್ಟೇರ್ ಪೈಕಿ 8,691 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಗೊಂಡಿದೆ.
ಜಿಲ್ಲಾದ್ಯಂತ ಒಟ್ಟಾರೆ ಕೃಷಿ ಇಲಾಖೆ ಗುರಿ ಹೊಂದಿದ್ದ 98,150 ಹೆಕ್ಟೇರ್ ಏಕಧಾನ್ಯಗಳ ಪೈಕಿ ಜಿಲ್ಲೆಯಲ್ಲಿ ಇದುವರೆಗೂ 48,097 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿ ಶೇ.49 ರಷ್ಟು ಗುರಿ ಸಾಧಿಸಿದ್ದರೆ, 21,800 ಹೆಕ್ಟೇರ್ ಗುರಿ ಹೊಂದಿರುವ ದ್ವಿದಳ ಧಾನ್ಯಗಳ ಪೈಕಿ ಇದುವರೆಗೂ ಜಿಲ್ಲೆಯಲ್ಲಿ 7,544 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಗೊಂಡು ಶೇ.34.61 ರಷ್ಟು ಗುರಿ ಸಾಧಿಸಲಾಗಿದೆ. ನೆಲಗಡಲೆ, ಸೂರ್ಯಕಾಂತಿ ಮತ್ತಿತರ ಎಣ್ಣೆಕಾಳುಗಳ ಪೈಕಿ 33,700 ಹೆಕ್ಟೇರ್ ಪೈಕಿ ಇದುವರೆಗೂ ಬರೀ 18,718 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿ ಶೇ.55.54 ರಷ್ಟು ಗುರಿ ಸಾಧಿಸಲಾಗಿದೆ. ಒಟ್ಟಿನಲ್ಲಿ ಜಿಲ್ಲಾದ್ಯಂತ ಮಳೆಯ ಕಣ್ಣಾಮುಚ್ಚಲೆಯಿಂದ ಈ ವರ್ಷವು ಬರ ಕಾಯಂ ಎನ್ನುತ್ತಿದ್ದ ರೈತರಿಗೆ ಕಳೆದ ಒಂದು ವಾರದಿಂದ ಮಳೆಯ ಕೃಪೆ ತೋರಿ ಜಿಲ್ಲೆಯಲ್ಲಿ ಶೇ.50ಕ್ಕೆ ಸಮೀಪಿಸುವಷ್ಟು ಬಿತ್ತನೆಯಾಗಿದ್ದು, ಇನ್ನೂ ಅರ್ಧದಷ್ಟು ಬಿತ್ತನೆ ಕಾರ್ಯ ಬಾಕಿ ಇದ್ದು ಮುಂದಿನ ದಿನಗಳಲ್ಲಿ ಮಳೆಯ ಆಟೋಟ ಹೇಗೆ ಇರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಜಿಲ್ಲೆಯಲ್ಲಿ ತಡವಾಗಿ ಮಳೆ ಬಿದ್ದಿರುವುದರಿಂದ ಬಿತ್ತನೆ ಪ್ರಮಾಣ ಇನ್ನೂ ಶೇ.50 ರಷ್ಟು ಕೂಡ ದಾಟಿಲ್ಲ. ಸದ್ಯಕ್ಕೆ ಜಿಲ್ಲೆಯಲ್ಲಿ ನೆಲಗಡಲೆ ಹಾಗೂ ತೊಗರಿ ಬಿತ್ತನೆ ಅವಧಿ ಪೂರ್ಣಗೊಂಡಿದ್ದು. ಕೇವಲ ರಾಗಿ, ಹುರುಳಿ, ಅಲಸಂದಿ ಹಾಗು ಸಿರಿಧಾನ್ಯಗಳನ್ನು ಬಿತ್ತನೆ ಮಾಡಲು ಅವಕಾಶ ಇದೆ. ರಾಗಿಯನ್ನು ಸೆಪ್ಪಂಬರ್ ಅಂತ್ಯದವರೆಗೂ ಬಿತ್ತನೆ ಮಾಡಬಹುದು. ಸದ್ಯಕ್ಕೆ ಜಿಲ್ಲಾದ್ಯಂತ ಇದುವರೆಗೂ 48.32 ರಷ್ಟು ಗುರಿ ಸಾಧಿಸಿದ್ದು, 1.54 ಲಕ್ಷ ಹೆಕ್ಟೇರ್ ಪೈಕಿ ಕೇವಲ 74 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮುಗಿದಿದೆ.
-ಎಲ್.ರೂಪಾ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು.
ಚಿಂತಾಮಣಿ, ಶಿಡ್ಲಘಟ್ಟದಲ್ಲಿ ಬಿತ್ತನೆ ಪ್ರಮಾಣ ಕುಸಿತ: ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ಈ ವರ್ಷ ಬಿತ್ತನೆ ಪ್ರಮಾಣ ಭಾರೀ ಕುಸಿತಗೊಂಡಿದೆ. ಮುಂಗಾರು ಹಂಗಾಮು ಮುಗಿಯುವ ಹಂತದಲ್ಲಿದ್ದು, ಚಿಂತಾಮಣಿ ತಾಲೂಕಿನಲ್ಲಿ ಬರೋಬ್ಬರಿ 35,918 ಹೆಕ್ಟೇರ್ ಪೈಕಿ ಇದುವರೆಗೂ ಕೇವಲ 1,717 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಗೊಂಡು ಅತಿ ಕಡಿಮೆ ಬಿತ್ತನೆಯಾದ ತಾಲೂಕಿನಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನ ಮಾಜಿ ಕೃಷಿ ಸಚಿವ ಶಿವಶಂಕರರೆಡ್ಡಿ ತವರು ಕ್ಷೇತ್ರ ಗೌರಿಬಿದನುರು ಇದೆ. ಇಲ್ಲಿ 39,445 ಹೆಕ್ಟೇರ್ ಪೈಕಿ 23,648 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. ಇನ್ನೂ ರೇಷ್ಮೆ ನಗರಿ ಶಿಡ್ಲಘಟ್ಟ ತಾಲೂಕಿನಲ್ಲಿ ಒಟ್ಟು 17,273 ಹೆಕ್ಟೇರ್ ಪೈಕಿ ಕೇವಲ 8,691 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿ ಮೂರನೇ ಸ್ಥಾನದಲ್ಲಿದೆ.
ಜಿಲ್ಲೆಯಲ್ಲಿ ಬಿತ್ತನೆ ಪ್ರಗತಿ ಪ್ರಮಾಣದ ಅಂಕಿ, ಅಂಶ
ಬೆಳೆಗಳು ಒಟ್ಟು ವಿಸ್ತೀರ್ಣ (ಹೆ.ಪ್ರ) ಬಿತ್ತನೆ ಪ್ರಗತಿ ಶೇ.
ರಾಗಿ 42,500 15,588 36.68
ಮುಸುಕಿನ ಜೋಳ 53,000 32,245 60.84
ತೃನಧಾನ್ಯ 150 131 87.33
ತೊಗರಿ 13,600 5,860 43.09
ಅವರೆ 5,500 1,390 25.27
ಅಲಸಂದೆ 1,500 294 19.61
ನೆಲಗಡಲೆ 32,750 18,688 57.06
ಸಾಸಿವೆ 250 24 9.68
* ಕಾಗತಿ ನಾಗರಾಜಪ್ಪ