ಬೆಂಗಳೂರು: ಕನ್ನಡ ನಾಡಿನ ನೆಲ, ಜಲ, ಭಾಷೆಯ ವಿಚಾರಗಳಿಗಾಗಿ ಜೀವ ನೀಡಲು ನಾವು ಸದಾ ಸಿದ್ಧ ಎಂದು ನಟ ರಾಘವೇಂದ್ರ ರಾಜ್‌ಕುಮಾರ್ ಅಭಿಪ್ರಾಯಪಟ್ಟರು. ಬಿಬಿಎಂಪಿ ವತಿಯಿಂದ ಶುಕ್ರವಾರ ಯಡಿಯೂರು ವಾರ್ಡ್‌ನ ಸೌತ್ ಎಂಡ್ ರಸ್ತೆಗೆ “ಡಾ.ಪಾರ್ವತಮ್ಮ ರಾಜ್‌ಕುಮಾರ್ ರಸ್ತೆ’ ಎಂದು ನಾಮಕರಣ ಮಾಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಗರದಲ್ಲಿ ಪ್ರಮುಖ ರಸ್ತೆಗಳಿಗೆ ರಾಜ್‌ಕುಮಾರ್ ಹಾಗೂ ಪಾರ್ವತಮ್ಮ ರಾಜ್‌ಕುಮಾರ್ ಅವರ ಹೆಸರುಗಳನ್ನು ನಾಮಕರಣ ಮಾಡಿರುವುದು ಖುಷಿಯಾಗಿದೆ,’ ಎಂದು ಸಂತಸ ವ್ಯಕ್ತಪಡಿಸಿದರು.
“ಕನ್ನಡ ಭಾಷೆಗಾಗಿ ಸೇವೆ ಸಲ್ಲಿಸಿದ ಪಾರ್ವತಮ್ಮ ಅವರು ನಮ್ಮೆಲ್ಲರ ಅಗಲಿ ಕೆಲವೇದಿನಗಳಾಗಿವೆ. ಹೀಗಿರುವಾಗಲೇ ಅವರ ಹೆಸರನ್ನು ರಸ್ತೆಯೊಂದಕ್ಕೆ ನಾಮಕರಣ ಮಾಡಿರುವುದು ಅವರ ಮೇಲಿನ ಅಭಿಮಾನವನ್ನು ತೋರಿಸುತ್ತಿದೆ. ರಸ್ತೆಗಳಿಗೆ ಕೇವಲ ನಾಮಕರಣ ಮಾಡಿ ಸುಮ್ಮನಾಗಬಾರದು, ರಸ್ತೆಯ ಎರಡು ಬದಿಯಲ್ಲಿ ಗಿಡಗಳನ್ನು ಬೆಳೆಸುವುದರೊಂದಿಗೆ ಉತ್ತಮವಾಗಿ ನಿರ್ವಹಣೆ ಮಾಡಬೇಕು,’ ಎಂದು ಅವರು ಸಲಹೆ ನೀಡಿದರು.
“ಕಳೆದ 60 ವರ್ಷಗಳಿಂದ ಕನ್ನಡ ಅಭಿಮಾನಿ ದೇವರುಗಳ ಆಶೀರ್ವಾದ ನಮ್ಮ ಮೇಲಿದೆ. ಅವರಿಗೆ ನಮ್ಮ ಕುಟುಂಬ ಸದಾ ಋಣಿಯಾಗಿತ್ತದೆ. ಜತೆಗೆ ಕನ್ನಡ ನಾಡಿನ ನೆಲ, ಜಲ, ನಾಡು-ನುಡಿ ಹಾಗೂ ಭಾಷೆಯ ವಿಚಾರದಲ್ಲಿ ಜೀವ ನೀಡಲು ನಾವು ಸಿದ್ಧವಾಗಿದ್ದೇವೆ. ತಾಯಿಯವರ ಸ್ಮರಣಾರ್ಥ ಪ್ರತಿ ಜಿಲ್ಲೆಯಲ್ಲಿ ಶಕ್ತಿಧಾಮ ಸ್ಥಾಪಿಸುವ ಕುರಿತು ಚಿಂತನೆಯಿದೆ,’ ಎಂದು ಮಾಹಿತಿ ನೀಡಿದರು.
ಅದಮ್ಯ ಚೇತನ ಸಂಸ್ಥೆಯ ಸಂಸ್ಥಾಪಕಿ ತೇಜಸ್ವಿನಿ ಅನಂತ್ ಕುಮಾರ್ ಮಾತನಾಡಿ, “ಪಾರ್ವತಮ್ಮ ರಾಜ್‌ಕುಮಾರ್ ಅವರು ಕನ್ನಡ ಭಾಷೆಯ ಬೆಳವಣಿಗೆಗೆ ದುಡಿದಿದ್ದಾರೆ. ರಸ್ತೆಗಳು ಕೇವಲ ರಸ್ತೆಗಳಾಗಿರದೆ ಸಂಸ್ಕೃತಿ ಹಾಗೂ ಇತಿಹಾಸಕ್ಕೆ ಸಾಕ್ಷಿಯಾಗಿವೆ. ರಸ್ತೆಗಳಲ್ಲಿ ಸಾಗುವ ರೀತಿಯಲ್ಲಿಯೇ ರಸ್ತೆಗೆ ಇರಿಸಲಾಗಿರುವ ಮಹಾನ್ ವ್ಯಕ್ತಿಗಳು ಹಾಕಿಕೊಟ್ಟ ದಾರಿಯಲ್ಲಿ ನಾವು ಸಾಗಬೇಕಿದೆ,’ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ.ರಾಜ್‌ಕುಮಾರ್ ಅವರ ಸಹೋದರಿ ನಾಗಮ್ಮ, ಉಪಮೇಯರ್ ಎಂ.ಆನಂದ್, ನಟ ವಿನಯ್ ರಾಜ್‌ಕುಮಾರ್, ಪಾಲಿಕೆ ಸದಸ್ಯೆ ಪೂರ್ಣಿಮಾ ರಮೇಶ್, ಬಿಜೆಪಿ ನಗರ ವಕ್ತಾರ ಎನ್.ಆರ್.ರಮೇಶ್ ಸೇರಿದಂತೆ ಪ್ರಮುಖರು ಹಾಜರಿದ್ದರು.
ಅನುಮತಿ ಪಡೆಯದೇ ನಾಮಕರಣ!: ರಾಜ್ಯ ಸರ್ಕಾರದ ಒಪ್ಪಿಗೆ ಪಡೆಯದೆ ಸೌತ್ ಎಂಡ್ ರಸ್ತೆಗೆ ಡಾ.ಪಾರ್ವತಮ್ಮ ರಾಜ್‌ಕುಮಾರ್ ಅವರ ಹೆಸರನ್ನು ನಾಮಕರಣ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಹಿಂದೆ ನಡೆದಿದ್ದ ಕೌನ್ಸಿಲ್ ಸಭೆಯಲ್ಲಿ, ಸೌತ್ ಎಂಡ್ ರಸ್ತೆಗೆ ಡಾ.ಪಾರ್ವತಮ್ಮ ರಾಜ್‌ಕುಮಾರ್ ಅವರ ಹೆಸರನ್ನು ನಾಮಕರಣ ಮಾಡಲು ಅನುಮೋದನೆ ನೀಡಲಾಗಿತ್ತು.
ಆದರೂ, ನಿಯಮಗಳ ಪ್ರಕಾರ ಈ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಸ್ವೀಕರಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಬೇಕು. ಸರ್ಕಾರ ಅದಕ್ಕೆ ಒಪ್ಪಿಗೆ ಸೂಚಿಸಿ ಸುತ್ತೋಲೆ ಹೊರಡಿಸಿದ ನಂತರ ಅಧಿಕೃತವಾಗಿ ಹೆಸರಿಡಬೇಕಾಗುತ್ತದೆ. ಆದರೆ, ನಾಮಕರಣಕ್ಕೂ ಮುನ್ನ ನಿಯಮ ಪಾಲಿಸಿಲ್ಲ ಎಂಬ ಆರೋಪ ಬಂದಿದೆ.