ಹೊಸದಿಲ್ಲಿ : ಈ ಬಾರಿಯ ನೈಋತ್ಯ ಮುಂಗಾರು ಸಾಮಾನ್ಯವಾಗಿಯೇ ಇರುತ್ತದೆ ಎಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿದ್ದು ಇದು ದೇಶದ ರೈತಾಪಿ ವರ್ಗಕ್ಕೆ ಹಾಗೂ ಆರ್ಥಿಕತೆಗೆ ಕೇಳಲು ಬಹಳ ಇಂಪೆನಿಸಿದೆ.
ಇಂಡಿಯಾ ಮೀಟಿರಿಯೋಲಾಜಿಕಲ್ ಡಿಪಾರ್ಟ್‌ಮೆಂಟ್ (ಐಎಂಡಿ) ಮಹಾ ನಿರ್ದೇಶಕ ಕೆ ಜೆ ರಮೇಶ್ ಅವರು “ಈ ಬಾರಿಯ ಮುಂಗಾರು ಮಾರುತಗಳು ತೃಪ್ತಿದಾಯಕವಾಗಿಯೇ ಇರಲಿವೆ. ಅವು ದೇಶಾದ್ಯಂತ ವ್ಯಾಪಕವಾಗಿ ಹರಡಿದಂತೆ ಮಳೆ ಸುರಿಯಲಿವೆ’ ಎಂದು ಹೇಳಿದ್ದಾರೆ.
ದೀರ್ಘಾವಧಿ ಸರಾಸರಿ ಪ್ರಕಾರ (ಲಾಂಗ್ ಪೀರಿಯಡ್ ಎವರೇಜ್) ದೇಶಕ್ಕೆ ಈ ಬಾರಿಯ ಮುಂಗಾರು ಮಾರುತಗಳಿಂದ ಶೇ.96ರಷ್ಟು ಮಳೆಯಾಗಲಿದೆ ಎಂದು ರಮೇಶ್ ಹೇಳಿದರು.
ಶೇ.96ರಿಂದ ಶೇ.104ರ ನಡುವಿನ ದೀರ್ಘಾವಧಿ ಸರಾಸರಿ ಮಳೆಯನ್ನು “ಸಾಮಾನ್ಯ’ ಮಳೆ ಎಂದೇ ಪರಿಗಣಿಸಲಾಗುತ್ತದೆ. ಶೇ.96ಕ್ಕಿಂತ ಕೆಳ ಪ್ರಮಾಣದ ಮಳೆಯು “ಸಾಮಾನ್ಯಕ್ಕಿಂತ ಕಡಿಮೆ’ಯದ್ದೆಂದು ತಿಳಿಯಲಾಗುತ್ತದೆ. ಶೇ. 104ರಿಂದ 110ರ ವರೆಗಿನ ದೀರ್ಘಾವಧಿ ಸರಾಸರಿ ಮಳೆಯು “ಸಾಮಾನ್ಯಕ್ಕೆ ಮೀರಿದ ಮಳೆ’ ಎಂದು ತಿಳಿಯಲಾಗುತ್ತದೆ.
ಕಳೆದ ವರ್ಷ ಐಎಂಡಿಯು ದೇಶದಲ್ಲಿ ಸಾಮಾನ್ಯಕ್ಕೆ ಮೀರಿದ ಮಳೆಗಾಲ ಇರುವುದೆಂಬ ಭವಿಷ್ಯ ನುಡಿದಿತ್ತು. ಆದರೆ ಅದು “ಸಾಮಾನ್ಯ’ಕ್ಕೆ ಕುಸಿದು “ತೃಪ್ತಿಕರ’ ಎನ್ನುವ ಮಟ್ಟದಲ್ಲಿ ಮಳೆಯಾಗಿತ್ತು.
ಕಳೆದ ವರ್ಷ ದಕ್ಷಿಣ ಪೀಠಭೂಮಿಯಲ್ಲಿ ಮಳೆ ಕೊರತೆ ಉಂಟಾಗಿತ್ತು. ತಮಿಳುನಾಡು, ಕರ್ನಾಟಕ ಮತ್ತು ಕೇರಳದಲ್ಲಿ ಆ ಪರಿಣಾಮವಾಗಿ ಈಗಲೂ ಬರಗಾಲದ ತಾಂಡವ ನೃತ್ಯ ನಡೆದಿದೆ.