Advertisement

ಅವಧಿಗೆ ಮುನ್ನ ಬಂದ ಮುಂಗಾರು ; ವಾಡಿಕೆಗಿಂತ 12 ದಿನ ಮೊದಲೇ ಮಾನ್ಸೂನ್

01:38 AM Jun 27, 2020 | Hari Prasad |

ಹೊಸದಿಲ್ಲಿ: ದೇಶದ ಗ್ರಾಮೀಣ ಜನರ ಆರ್ಥಿಕತೆಯ ಜೀವನಾಡಿಯಾಗಿರುವ ಮುಂಗಾರು ಈ ವರ್ಷ ಆಶಾದಾಯಕವಾಗಿದೆ.

Advertisement

ವಾಡಿಕೆಗಿಂತ 12 ದಿನ ಮೊದಲೇ ದೇಶಾದ್ಯಂತ ಮಾನ್ಸೂನ್‌ ವ್ಯಾಪಿಸಿದ್ದು, ರೈತರ ಮೊಗದಲ್ಲಿ ಸಂತಸ ತಂದಿದೆ.

ಕೋವಿಡ್ 19 ವೈರಸ್ ನಿಂದ ನಲುಗಿರುವ ಜನತೆಗೆ ಇದು ತುಸು ಸಮಾಧಾನಕರ ಸಂಗತಿಯಾಗಿದೆ.

ವಾಡಿಕೆಯಂತೆ ಜು. 8ಕ್ಕೆ ರಾಷ್ಟ್ರಾದ್ಯಂತ ಮುಂಗಾರು ವ್ಯಾಪಿಸಬೇಕಿತ್ತು. ಆದರೆ, ಈ ವರ್ಷ 12 ದಿನ ಮುನ್ನವೇ ಅಂದರೆ, ಜೂನ್‌ 26ಕ್ಕೆ ದೇಶದ ಎಲ್ಲೆಡೆ ವರ್ಷಧಾರೆ ಸುರಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ ಶುಕ್ರವಾರ ತಿಳಿಸಿದೆ.

ವಾಯುಭಾರ ಕುಸಿತದಿಂದ ರಾಜಸ್ಥಾನ, ಪಂಜಾಬ್‌, ಬಿಹಾರ, ಉತ್ತರಪ್ರದೇಶ, ಪಶ್ಚಿಮ ಬಂಗಾಳ ಮತ್ತಿತರ ಭಾಗಗಳಲ್ಲಿ ಮಳೆಯಾಗಿದೆ. ಈ ವರ್ಷ ಚಂಡ ಮಾರುತಗಳು ಅಪ್ಪಳಿಸಿದ ಪರಿಣಾಮ ದೇಶಾದ್ಯಂತ ಮುಂಗಾರು ಚುರುಕಾಗಿದೆ.

Advertisement

ಮುಂದಿನ ಮೂರು ದಿನಗಳ ಅವಧಿಯಲ್ಲಿ ಈಶಾನ್ಯ ಹಾಗೂ ಪೂರ್ವ ಭಾರತದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ. ಬಿಹಾರ, ಅಸ್ಸಾಂ, ಮೇಘಾಲಯ, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ, ಸಿಕ್ಕಿಂ ರಾಜ್ಯಗಳಲ್ಲಿ ಒಂದೆರಡು ದಿನ ಗಳಲ್ಲಿ ಭಾರೀ ಮಳೆಯಾಗಲಿದೆ.

ಮುಂಗಾರು ಬೆಳೆಗಳಿಗೆ ಜುಲೈ ಹಾಗೂ ಆಗಸ್ಟ್‌ ನಿರ್ಣಾಯಕವಾಗಿದ್ದು, ಈ ಅವಧಿಯಲ್ಲಿ ಉತ್ತಮ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.
ಈ ವರ್ಷ ವಾಡಿಕೆಯಂತೆ ಮುಂಗಾರು ಉತ್ತಮವಾಗಿ­ರಲಿದೆ. ಶೇ.100 ರಷ್ಟು ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಪ್ರಾರಂಭದಲ್ಲಿ ತಿಳಿಸಿತ್ತು. ಏತನ್ಮಧ್ಯೆ, ಕೇರಳದಲ್ಲಿ ಭಾರೀ ಮಳೆ ಸುರಿಯುವ ಸಂಭವ ಇದೆ.
ಈ ನಡುವೆ, ಕರ್ನಾಟಕದ ದಕ್ಷಿಣ ಒಳನಾಡು ಹಾಗೂ ಕರಾವಳಿ­ಯಲ್ಲೂ ಶನಿವಾರ ಮಳೆಯಾಗುವ ಸಾಧ್ಯತೆ ಇದೆ.

ಯುಪಿ, ಬಿಹಾರ: ಸಿಡಿಲಿಗೆ 116 ಜನ ಬಲಿ
ಉತ್ತರಪ್ರದೇಶ ಹಾಗೂ ಬಿಹಾರದಲ್ಲಿ ಗುಡುಗು ಸಿಡಿಲು ಸಹಿತ ಧಾರಾಕಾರವಾಗಿ ಮಳೆ ಸುರಿದಿದ್ದು, ಸಿಡಿಲು ಬಡಿದ ಪರಿಣಾಮ ಮೃತಪಟ್ಟವರ ಸಂಖ್ಯೆ 116ಕ್ಕೆ ತಲುಪಿದೆ. ಬಿಹಾರದಲ್ಲಿ ಸಿಡಿಲಿ­ನಿಂದ ಗುರುವಾರ 85 ಮಂದಿ ಸಾವನ್ನಪ್ಪಿದ್ದರು. ಶುಕ್ರವಾರ ಮತ್ತೆ 9 ಮಂದಿ ಮೃತಪಟ್ಟಿರು­ವುದು ದೃಢಪಟ್ಟಿದೆ. ಉತ್ತರ ಪ್ರದೇಶದಲ್ಲಿ 24 ಮಂದಿ ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next