ಉಡುಪಿ: ವಿಧಾನ ಪರಿಷತ್ ಸದಸ್ಯನಾಗಿ ಕಾರ್ಮಿಕ ವರ್ಗ, ಶಿಕ್ಷಕರು ಹಾಗೂ ಪದವೀಧರರ ಸಮಸ್ಯೆಗಳಿಗೆ ಧ್ವನಿಯಾಗಿದ್ದೇನೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದು, ಪದವೀಧರರ ಪೂರ್ಣ ಬೆಂಬಲ ಸಿಗುವ ವಿಶ್ವಾಸವಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಕೊಡಗು ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರ ಮತ್ತು ದಾವಣಗೆರೆ ಜಿಲ್ಲೆಯ ಹೊನ್ನಾಳಿ, ನ್ಯಾಮತಿ ಮತ್ತು ಚನ್ನಗಿರಿ ಕ್ಷೇತ್ರವು ನೈಋತ್ಯ ಪದವೀಧರ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತದೆ. ಉಡುಪಿ ಜಿಲ್ಲೆಯಲ್ಲಿ ಈ ಬಾರಿ 14 ಸಾವಿರಕ್ಕೂ ಅಧಿಕ ಹೊಸ ನೋಂದಣಿಯಾಗಿದೆ.
ಪದವೀಧರರ, ಶಿಕ್ಷಕರ ಹಾಗೂ ಕಾರ್ಮಿಕ ವರ್ಗದ ಧ್ವನಿಯಾಗಿ ಮುಂದೆಯೂ ಕಾರ್ಯ ನಿರ್ವಹಿಸುವೆ ಎಂದು ಹೇಳಿದರು.
ಎಲ್ಲ ಪದವೀಧರರ ಪರವಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿದ ಅವರು, ನೂತನ ಪಿಂಚಣಿ ವ್ಯವಸ್ಥೆ ರದ್ದಾಗಿ ಹಳೇ ಪಿಂಚಣಿ ವ್ಯವಸ್ಥೆ ಜಾರಿ, ಅನುದಾನಿತ ಶಾಲಾ ಕಾಲೇಜು ಗಳ ಪಿಂಚಣಿ ವಂಚಿತ ಶಿಕ್ಷಕರ, ನೌಕರರ ಸಮಸ್ಯೆಗಳ ಬಗ್ಗೆ ಸದಾ ಹೋರಾಡಿರುವೆ ಎಂದರು.
ಸ್ಪಂದಿಸದ ಬಿಜೆಪಿ: ನಾನು ಬಿಜೆಪಿಯಲ್ಲಿದ್ದಾಗ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಮಿಕರ ಬಗ್ಗೆ ಕೈಗೊಂಡ ಕೆಲವು ನಿರ್ಧಾರ ನೋವು ತಂದಿತ್ತು. ಹಕ್ಕುಗಳಿ ಗಾಗಿ ಕಾರ್ಮಿಕರು ಪ್ರತಿಭಟಿಸಿ ಜೀವ ಕಳೆದುಕೊಂಡರೂ ಕಿಂಚಿತ್ತೂ ಕರುಣೆ ತೋರಲಿಲ್ಲ. ಆದರೆ ತಮ್ಮ ಮನೆಯ ನಾಯಿ ಸತ್ತಾಗ ಮುತ್ತಿಟ್ಟು ಶವಸಂಸ್ಕಾರ ಮಾಡಿದ್ದಾರೆ. ಪ್ರಾಣಿಗಳ ಬಗ್ಗೆ ಇದ್ದ ಪ್ರೀತಿಯನ್ನು ಮನುಷ್ಯರ ಬಗ್ಗೆಯೂ ತೋರಿಸಬೇಕಿತ್ತು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು ಮತ್ತಿತರರು ಉಪಸ್ಥಿತರಿದ್ದರು.