ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಚಿತ್ರ “ಅವನೇ ಶ್ರೀಮನ್ನಾರಾಯಣ’ ತೆರೆಗೆ ಬರೋದಕ್ಕೆ ಕೌಂಟ್ ಡೌನ್ ಶುರುವಾಗಿದೆ. ಸದ್ಯ ಭರದಿಂದ ಚಿತ್ರದ ಪ್ರಮೋಶನ್ ಕೆಲಸಗಳಲ್ಲಿ ಬ್ಯುಸಿಯಾಗಿರುವ ಚಿತ್ರತಂಡ, “ನಾರಾಯಣ’ನನ್ನು ಪ್ರೇಕ್ಷಕರಿಗೆ ತಲುಪಿಸುವ ಅಂತಿಮ ಕಸರತ್ತು ನಡೆಸುತ್ತಿದೆ. ಇತ್ತೀಚೆಗಷ್ಟೇ “ಅವನೇ ಶ್ರೀಮನ್ನಾರಾಯಣ’ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಬುಲೆಟ್ ಬೈಕ್ ಮೇಲೆ ಕುಳಿತುಕೊಂಡು, ಒಂದು ಕೈಯಲ್ಲಿ ಬೈಕ್ ಹ್ಯಾಂಡಲ್ ಹಿಡಿದುಕೊಂಡು, ಮತ್ತೂಂದು ಕೈಯಲ್ಲಿ ಗನ್ ಹಿಡಿದ ಶೂಟ್ ಮಾಡುತ್ತಿರುವ ಪೋಸ್ಟರ್ ಬಿಡುಗಡೆ ಮಾಡಿತ್ತು.
ಈ ಪೋಸ್ಟರ್‌ಗೆ ಎಲ್ಲೆಡೆಯಿಂದ ಬಿಗ್ ರೆಸ್ಪಾನ್ಸ್ ಸಿಗುತ್ತಿರುವಂತೆಯೇ ಚಿತ್ರತಂಡ, ನಾಳೆ (ನ.28ಕ್ಕೆ) “ಅವನೇ ಶ್ರೀಮನ್ನಾರಾಯಣ’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲು ಪ್ಲಾನ್ ಹಾಕಿಕೊಂಡಿದೆ. ಇನ್ನು ಚಿತ್ರದ ಕನ್ನಡದ ಜೊತೆಗೆ, ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಗಳಲ್ಲೂ ಏಕಕಾಲಕ್ಕೆ ಬಿಡುಗಡೆಯಾಗುತ್ತಿದ್ದು, ಅಲ್ಲಿಯೂ ಚಿತ್ರದ ಪ್ರಮೋಶನ್ ಕೆಲಸಗಳು ಜೋರಾಗಿಯೇ ನಡೆಯುತ್ತಿದೆ.
ಈಗಾಗಲೇ ಬಿಡುಗಡೆಯಾಗಿರುವ “ಅವನೇ ಶ್ರೀಮನ್ನಾರಾಯಣ’ ಚಿತ್ರದ ಟೀಸರ್, ಫಸ್ಟ್‌ಲುಕ್ ಪೋಸ್ಟರ್‌ಗಳು ಕನ್ನಡ ಸಿನಿಪ್ರಿಯರನ್ನು ಮಾತ್ರವಲ್ಲದೆ, ಪರಭಾಷಾ ಸ್ಟಾರ್‌ಗಳ ಮನಗೆಲ್ಲುವಲ್ಲಿಯೂ ಯಶಸ್ವಿಯಾಗಿದೆ. ತಮಿಳು, ತೆಲುಗು ಮತ್ತು ಮಲೆಯಾಳಂನಲ್ಲಿ “ಅವನೇ ಶ್ರೀಮನ್ನಾರಾಯಣ’ನಿಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಸಿಗುತ್ತಿರುವುದರಿಂದ, ಚಿತ್ರತಂಡದ ಮೊಗದಲ್ಲಿ ನಗು ಮೂಡಿಸಿದೆ.
“ಅವನೇ ಶ್ರೀಮನ್ನಾರಾಯಣ’ ಚಿತ್ರದ ಟೀಸರ್, ಫಸ್ಟ್‌ಲುಕ್ ಪೋಸ್ಟರ್‌ಗಳನ್ನು ಕಂಡ ತಮಿಳು, ತೆಲುಗು, ಮಲೆಯಾಳಂ ಚಿತ್ರರಂಗದ ಅನೇಕ ಸ್ಟಾರ್ ನಟರು “ನಾರಾಯಣ’ನಿಗೆ ಸಾಥ್ ನೀಡಲು ತಾವಾಗಿಯೇ ಮುಂದೆ ಬಂದಿದ್ದಾರೆ. ಹೌದು, ನಾಳೆ (ನ. 28ಕ್ಕೆ) ಕನ್ನಡದಲ್ಲಿ “ಅವನೇ ಶ್ರೀಮನ್ನಾರಾಯಣ’ ಟ್ರೇಲರ್ ಬಿಡುಗಡೆಯಾಗುತ್ತಿದ್ದು, ಇದೇ ವೇಳೆ ತಮಿಳಿನಲ್ಲಿ ಈ ಚಿತ್ರದ ಟ್ರೇಲರ್ ಅನ್ನು ನಟ ಧನುಶ್, ತೆಲುಗಿನಲ್ಲಿ ನಾನಿ ಮತ್ತು ಮಲೆಯಾಳಂನಲ್ಲಿ ನವೀನ್ ಪೌಲ್ ಏಕಕಾಲಕ್ಕೆ ಬಿಡುಗಡೆ ಮಾಡಲಿದ್ದಾರೆ.
ಇನ್ನು ಹಿಂದಿಯಲ್ಲಿ ಕೂಡ ಸ್ಟಾರ್ ನಟರೊಬ್ಬರು ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಲಿದ್ದಾರೆ ಎನ್ನಲಾಗುತ್ತಿದ್ದು, ಆ ಸ್ಟಾರ್ ನಟ ಯಾರು ಎಂಬ ಕುತೂಹಲವನ್ನು ಮಾತ್ರ ಚಿತ್ರತಂಡ ಇಲ್ಲಿಯವರೆಗೆ ಬಿಟ್ಟುಕೊಟ್ಟಿಲ್ಲ. “ಅವನೇ ಶ್ರೀಮನ್ನಾರಾಯಣ’ ಚಿತ್ರವನ್ನು ಎಚ್.ಕೆ ಪ್ರಕಾಶ್ ಹಾಗೂ ಪುಷ್ಕರ್ ಮಲ್ಲಿಕಾರ್ಜುನಯ್ಯ ಜಂಟಿಯಾಗಿ ಬಂಡವಾಳ ಹೂಡಿ ನಿರ್ಮಿಸುತ್ತಿದ್ದು, ಚಿತ್ರದಲ್ಲಿ ಶಾನ್ವಿ ಶ್ರೀವಾತ್ಸವ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ರಕ್ಷಿತ್ ಶೆಟ್ಟಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.