Advertisement
ಕಳೆದ ವಾರವಷ್ಟೇ ಹೈಡ್ರೋಜನ್ ಬಾಂಬ್ ಪರೀಕ್ಷಿಸುವ ಮೂಲಕ ಅಂತಾರಾಷ್ಟ್ರೀಯ ಸಮುದಾಯದಿಂದ ಸಾಕಷ್ಟು ಟೀಕೆಗೆ ಒಳಗಾಗಿದ್ದ ಉತ್ತರ ಕೊರಿಯಾ ಇದೀಗ ಮತ್ತೂಂದು ದುಸ್ಸಾಹಸಕ್ಕೆ ಮುಂದಾಗಿರುವುದು ಅಚ್ಚರಿ ಮೂಡಿಸಿದೆ. ವಾರಾಂತ್ಯಕ್ಕೆಲ್ಲ ಪರೀಕ್ಷಿಸಲು ಎಲ್ಲ ರೀತಿಯಿಂದ ಸಿದ್ಧತಾ ಕಾರ್ಯ ನಡೆದಿದೆ ಎಂದು ದಕ್ಷಿಣ ಕೊರಿಯಾ ಸರಕಾರದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿ ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಗುರುವಾರ ಸ್ವತಃ ದಕ್ಷಿಣ ಕೊರಿಯಾದ ಪ್ರಧಾನಿ ಲೀ ನಾಕ್-ಯಾನ್ ಪ್ರತಿಕ್ರಿಯಿಸಿ, ಇನ್ನೊಂದು ಕ್ಷಿಪಣಿ ಪರೀಕ್ಷೆಗೆ ತಯಾರಿ ನಡೆದಿರುವ ಸಾಧ್ಯತೆ ಇದೆ ಎಂದು ಹೇಳಿದ್ದರು. ಈ ಬೆನ್ನಿಗೇ ಇದೀಗ ಅಧಿಕಾರಿಗಳು ಇದನ್ನು ಖಚಿತಪಡಿಸಿದ್ದಾರೆ ಎನ್ನಲಾಗಿದೆ.
ಇವೆಲ್ಲದರ ನಡುವೆಯೇ ಉತ್ತರ ಕೊರಿಯಾ ವಿರುದ್ಧ ಕೆಂಡಾಮಂಡಲ ಆಗಿರುವ ಅಮೆರಿಕ ಯಾವುದೇ ಕ್ಷಣದಲ್ಲಿ ಉತ್ತರ ಕೊರಿಯಾವನ್ನು ಹೆಡೆಮುರಿ ಕಟ್ಟಿದರೆ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಿಲಿಟರಿ ಕ್ರಮಕ್ಕೆ ಮುಂದಾಗುವ ಚಿಂತನೆಯಿಂದ ಇನ್ನೂ ಹಿಂದೆ ಸರಿದಿಲ್ಲ. ಆದರೆ ಅನಿವಾರ್ಯ ಎಂದಾದಲ್ಲಿ ಯಾವ ಕ್ಷಣದಲ್ಲಿಯೂ ದಾಳಿಗೆ ಸೂಚಿಸಬಹುದು ಎನ್ನಲಾಗುತ್ತಿದೆ.