Advertisement

ದಕ್ಷಿಣ ಆಫ್ರಿಕಾ, ವಿಶ್ವಕಪ್ ಮತ್ತು ಮಳೆ…; ಇದು ದುರಾದೃಷ್ಟದ ಪರಾಕಾಷ್ಠೆ

05:01 PM Oct 27, 2022 | ಕೀರ್ತನ್ ಶೆಟ್ಟಿ ಬೋಳ |

ಕ್ರಿಕೆಟ್ ವಿಶ್ವದಲ್ಲಿ ದುರಾದೃಷ್ಟವನ್ನೇ ಬೆನ್ನಿಗೆ ಕಟ್ಟಿಕೊಂಡಿರುವ ತಂಡ ಯಾವುದು ಎಂದು ಕೇಳಿದರೆ ಕ್ರಿಕೆಟ್ ಅಭಿಮಾನಿಗಳು ಪಕ್ಕನೇ ಹೇಳುವ ಉತ್ತರ ದಕ್ಷಿಣ ಆಫ್ರಿಕಾ. ಪರಕೀಯರ ದಾಸ್ಯ, ವರ್ಣ ಬೇಧ ನೀತಿಯೆಂಬ ದಾರಿದ್ರ್ಯ ಸ್ಥಿತಿಯನ್ನು ಮೀರಿ ಬಂದರೂ ಹರಿಣಗಳ ದುರಾದೃಷ್ಟಟದ ಸಂಕೋಲೆ ಮಾತ್ರ ಇನ್ನೂ ಬಿಡಿಸಲಾಗಿಲ್ಲ. ಹರ್ಷಲ್ ಗಿಬ್ಸ್ ಕೈಯಿಂದ ಜಾರಿದ ಕ್ಯಾಚ್, 2015ರ ವಿಶ್ವಕಪ್ ಸೆಮಿ ಫೈನಲ್ ಪಂದ್ಯವಿರಬಹುದು.. ಬಹಳಷ್ಟು ಬಾರಿ ಅದೃಷ್ಟ ತಾನು ಈ ತಂಡದಿಂದ ಎಷ್ಟು ದೂರ ಎಂದು ಪ್ರೂವ್ ಮಾಡುತ್ತಲೇ ಬಂದಿದೆ. ಅಂತಹುದೇ ಘಟನೆ ಕೆಲ ದಿನಗಳ ಹಿಂದೆ ನಡೆದಿದೆ.

Advertisement

ಅದು ಅಕ್ಟೋಬರ್ 24ರಂದು ನಡೆದ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ನಡುವಿನ ಟಿ20 ವಿಶ್ವಕಪ್ ಸೂಪರ್ 12 ಪಂದ್ಯ. ಮೊದಲ ಬಾರಿಗೆ ಟಿ20 ವಿಶ್ವಕಪ್ ನ ಈ ಹಂತಕ್ಕೆ ಅರ್ಹತೆ ಪಡೆದ ಜಿಂಬಾಬ್ವೆಗಿಂತ ದಕ್ಷಿಣ ಅಫ್ರಿಕಾವೇ ಫೇವರೇಟ್ ಆಗಿತ್ತು. ಸುಲಭವಾಗಿ ಗೆದ್ದು ಕೂಟ ಶುಭಾರಂಭ ಮಾಡುವ ತೆಂಬ ಬವುಮಾ ಪಡೆಯ ಕನಸಿಗೆ ತಣ್ಣೀರು ಎರಚಿದ್ದು ಮಳೆ. ಹೋಬಾರ್ಟ್ ನಲ್ಲಿ ನಡೆದ ಪಂದ್ಯಕ್ಕೆ ಮೊದಲೇ ಮಳೆ ಆರಂಭವಾಗಿತ್ತು. ಕೆಲ ಗಂಟೆಗಳ ವಿಳಂಬದ ಬಳಿಕ ಪಂದ್ಯದ ಅಧಿಕಾರಿಗಳು ತಲಾ 9 ಓವರ್ ನ ಪಂದ್ಯ ನಡೆಸಲು ತೀರ್ಮಾನಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ಗಳಿಸಿದ್ದು 79 ರನ್.

ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಗೆ ಎಂದು ಮೈದಾನಕ್ಕೆ ಇಳಿದಾಗಲೇ ಕಪ್ಪು ಮೋಡಗಳು ಬಾನಂಗಳದಲ್ಲಿ ಬೆದರಿಕೆ ಹಾಕಲು ಆರಂಭಿಸಿದ್ದವು. ಇದನ್ನು ಗಮನಿಸಿದ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ ಮೊದಲ ಎಸೆತದಿಂದಲೇ ರನ್ ಗಳಿಸಲು ಆರಂಭಿಸಿದರು. ಮಳೆ ಬರುವ ಮೊದಲು ಪಂದ್ಯ ಗೆಲ್ಲಲೇ ಬೇಕು ಎಂಬ ಹಠ ತೊಟ್ಟಂತೆ ಆಡಿದರು ಕ್ವಿನ್ನಿ. ತಲೆಯಲ್ಲಿ ಮಳೆ ಲೆಕ್ಕಾಚಾರ ಹಾಕಿಕೊಂಡೇ ಆಡಿದ ಅವರು ಮೊದಲ ಓವರ್ ನಲ್ಲೇ 23 ರನ್ ಹೊಡೆದರು. ಮೊದಲ ಓವರ್ ಮುಗಿದು ಒಂದು ಎಸೆತವಾಗಿತ್ತಷ್ಟೇ, ಮಳೆ ಬಂದೇ ಬಿಟ್ಟಿತು. ಆದರೆ ಕೆಲವು ಹನಿಯಷ್ಟೇ. ಐದೇ ನಿಮಿಷದಲ್ಲಿ ಮತ್ತೆ ಪಂದ್ಯ ಆರಂಭವಾಯಿತು. ಈಗ ದ.ಆಫ್ರಿಕಾಗೆ ಏಳು ಓವರ್ ಗಳಲ್ಲಿ 64ರನ್ ಗಳಿಸುವ ಟಾರ್ಗೆಟ್ ನೀಡಲಾಯಿತು.

ಮತ್ತೆ ಬ್ಯಾಟ್ ಬೀಸಲಾರಂಭಿಸಿದ ಡಿಕಾಕ್ ಬೌಂಡರಿ ಮೇಲೆ ಬೌಂಡರಿ ಬಾರಿಸಿದರು. ಅವರ ಸ್ಥಿತಿ ಹೇಗಿತ್ತೆಂದರೆ ಒಮ್ಮೆ ಸ್ಕೋರ್ ಬೋರ್ಡ್ ನೋಡಿದರೆ ಮತ್ತೊಮ್ಮೆ ಆಕಾಶ ನೋಡುತ್ತಿದ್ದರು. ಮತ್ತೊಮ್ಮೆ ಮಳೆ ಬರುವ ಮೊದಲು ಮ್ಯಾಚ್ ಗೆದ್ದಾಗಬೇಕು ಎಂಬಂತೆ ಆಡಿದರು. ಡಿಕಾಕ್ ಆಟ ಹೇಗಿತ್ತೆಂದರೆ ಒಟ್ಟಿಗೆ ಬ್ಯಾಟಿಂಗ್ ಗೆ ಆಗಮಿಸಿದ್ದ ನಾಯಕ ತೆಂಬ ಬವುಮಾ ಎದುರಿಸಿದ್ದು ಕೇವಲ ಎರಡು ಬಾಲ್. ಈ ವೇಳೆ ಡಿಕಾಕ್ 18 ಬಾಲ್ ಗಳಲ್ಲಿ 47 ರನ್ ಗಳಿಸಿದರು. ಆಗ ಮೂರು ಓವರ್ ಆಗಿತ್ತು. ದಕ್ಷಿಣ ಆಫ್ರಿಕಾ 51 ರನ್ ಗಳಿಸಿದ್ದರು. ಇನ್ನು 24 ಎಸೆತಗಳಲ್ಲಿ ಅವರಿಗೆ ಬೇಕಾಗಿದ್ದಿದ್ದು ಕೇವಲ 13 ರನ್. ಆಫ್ರಿಕಾ ಆಟಗಾರರು ನಿರಾಳರಾಗಿದ್ದರು.

ಆಗ ಶುರುವಾಯಿತು ನೋಡಿ ಅದೃಷ್ಟದಾಟ. ಮಳೆಯ ರೂಪದಲ್ಲಿ ಬಂದ ದುರಾದೃಷ್ಟ ದಕ್ಷಿಣ ಆಫ್ರಿಕಾಗೆ ಆಘಾತ ನೀಡಿತು. ಮಳೆ ಜೋರಾಗಿ ಸುರಿದ ಕಾರಣ ಪಂದ್ಯವನ್ನೇ ರದ್ದು ಮಾಡಲಾಯಿತು. ಕ್ರಿಕೆಟ್ ನಿಯಮದ ಪ್ರಕಾರ ಟಿ20 ಆಟದಲ್ಲಿ ಮಳೆಯಿಂದ ಪಂದ್ಯಕ್ಕೆ ಅಡ್ಡಿಯಾದರೆ ವಿಜೇತರನ್ನು ನಿರ್ಣಯಿಸಲು ಎರಡನೇ ಇನ್ನಿಂಗ್ಸ್ ನಲ್ಲಿ ಕನಿಷ್ಠ ಐದು ಓವರ್ ಆಟ ನಡೆದಿರಬೇಕು.

Advertisement

ಆದರೆ ಇಲ್ಲಿ ಆಗಿದ್ದು ಕೇವಲ ಮೂರು ಓವರ್. ಒಂದು ವೇಳೆ ಇನ್ನು ಒಂದು ಓವರ್ ನ ಪಂದ್ಯಕ್ಕೆ ಮಳೆ ಅನುವು ಮಾಡಿದ್ದರೂ ಬಾಕಿ 13 ರನ್ ಗಳಿಸಿ ದಕ್ಷಿಣ ಜಯ ಸಾಧಿಸುತ್ತಿತ್ತು. ಎರಡೂ ತಂಡಗಳು ಒಂದೊಂದು ಅಂಕವನ್ನು ಹಂಚಿಕೊಂಡವು.  ಆರಂಭದಲ್ಲಿ ಆಸೆ ತೋರಿಸಿದ ಮಳೆರಾಯ ಕೊನೆಗೆ ಅಮೂಲ್ಯ ಎರಡು ಅಂಕ ಕಸಿದ. ಆ ಎರಡಂಕ ಎಷ್ಟು ಮುಖ್ಯ ಎನ್ನುವುದಕ್ಕೆ ದಕ್ಷಿಣ ಆಫ್ರಿಕಾದ್ದೆ ಮತ್ತೊಂದು ಉದಾಹರಣೆ ನೀಡುತ್ತೇನೆ ಕೇಳಿ.

ಅದು 2003ರ ಏಕದಿನ ವಿಶ್ವಕಪ್. ಮ್ಯಾಚ್ ಫಿಕ್ಸಿಂಗ್ ಆರೋಪ ಸೇರಿ ಹಲವು ಸಂಕಷ್ಟ ಸೇತುವೆಗಳನ್ನು ದಾಟಿ ಬಂದ ದಕ್ಷಿಣ ಆಫ್ರಿಕಾ ಆ ಬಾರಿ ಏಕದಿನ ವಿಶ್ವಕಪ್ ನ ಆತಿಥ್ಯ ವಹಿಸಿತ್ತು. ವರ್ಣಬೇಧ ನೀತಿ ಕಾರಣದಿಂದ ದಶಕಗಳ ಕಾಲ ಯಾವ ತಂಡವನ್ನು ಕ್ರಿಕೆಟ್ ನಿಂದ ದೂರವಿಡಲಾಗಿತ್ತೋ, ಅದೇ ಹರಿಣಗಳ ನಾಡಿನಲ್ಲಿ ವಿಶ್ವಕಪ್ ಗಾಗಿ ಎಲ್ಲಾ ತಂಡಗಳು ಒಟ್ಟು ಸೇರಿದ್ದವು.

ಅಂದು ಮಾರ್ಚ್ 3. ಆತಿಥೇಯ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ನಡುವಿನ ಮಾಡು ಇಲ್ಲವೇ ಮಡಿ ಎಂಬಂತ ಪಂದ್ಯ. ಮುಂದಿನ ಹಂತ ತಲುಪಲು ಆಫ್ರಿಕಾಗೆ ಈ ಪಂದ್ಯ ಗೆಲ್ಲಲೇ ಬೇಕು. ಆದರೆ ಡರ್ಬನ್ ಮೈದಾನದಲ್ಲಿಅದೃಷ್ಟ ದೇವತೆ ತನ್ನ ಹೊಸ ಕತೆಯೊಂದು ಬರೆದಿತ್ತು.

ಪಂದ್ಯ ಆರಂಭವಾಗಿತ್ತು. ಟಾಸ್ ಗೆದ್ದ ಶ್ರಿಲಂಕಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಅನುಭವಿಗಳಾದ ಮರ್ವನ್ ಅಟ್ಟಪಟ್ಟು ಮತ್ತು ಅರವಿಂದ ಡಿಸಿಲ್ವಾ ತಮ್ಮ ತಂಡವನ್ನು ಸೆಮಿ ಫೈನಲ್ ಗೇರಿಸಲು ಎಲ್ಲಾ ಪ್ರಯತ್ನ ಮಾಡಿದರು. ಅವರಿಬ್ಬರ ಬ್ಯಾಟಿಂಗ್ ನೆರವಿನಿಂದ ಲಂಕಾ ತಂಡ 50 ಓವರ್ ಗಳಲ್ಲಿ 268 ರನ್ ಗಳಿಸಿತು. ಅಟ್ಟಪಟ್ಟು 124 ರನ್ ಗಳಿಸಿದರೆ, ಅರವಿಂದ ಡಿಸಿಲ್ವಾ 73 ರನ್ ಕಾಣಿಕೆ ನೀಡಿದ್ದರು.

ಸೆಮಿ ಫೈನಲ್ ಆಸೆಯೊಂದಿಗೆ ತವರು ಅಭಿಮಾನಿಗಳೆದುರು 269 ರನ್ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಮೊದಲ ವಿಕೆಟ್ ಗೆ 65 ರನ್ ಗಳಿಸಿತು. ಗ್ರೇಮ್ ಸ್ಮಿತ್ ಮತ್ತು ಹರ್ಷಲ್ ಗಿಬ್ಸ್ ಅವರು ಲೆಕ್ಕಾಚಾರದಿಂದ ಬ್ಯಾಟಿಂಗ್ ಮಾಡುತ್ತಿದ್ದರೆ ಲಂಕಾ ನಾಯಕ ಸನತ್ ಜಯಸೂರ್ಯ ಅವರು ಅರವಿಂದ ಡಿಸಿಲ್ವಾ ರೂಪದಲ್ಲಿ ಸ್ಪಿನ್ ದಾಳಿ ಆರಂಭಿಸಿದರು. ಡಿಸಿಲ್ವಾ ಸ್ಪಿನ್ ಜಾಲಕ್ಕೆ ಬಿದ್ದ ಸ್ಮಿತ್ ಮತ್ತು ಗ್ಯಾರಿ ಕರ್ಸ್ಟನ್ ವಿಕೆಟ್ ಒಪ್ಪಿಸಿದರು. ಆದರೆ ಮತ್ತೊಂದೆಡೆ ಗಿಬ್ಸ್ ತಾಳ್ಮೆಯಿಂದ ಬ್ಯಾಟಿಂಗ್ ಮುಂದುವರಿಸಿದರು. ಆದರೆ 73 ರನ್ ಗಳಿಸಿದ್ದ ವೇಳೆ ಸ್ಪಿನ್ ಮಾಂತ್ರಿಕ ಮುರಳೀಧರನ್ ಬಲೆಗೆ ಬಿದ್ದರು. ಸತತ ವಿಕೆಟ್ ಕಳೆದುಕೊಂಡ ಹರಿಣಗಳು 29 ಓವರ್ ಮುಗಿಯುವಾಗ ಐದು ವಿಕೆಟ್ ಕಳೆದುಕೊಂಡು 149 ರನ್ ಗಳಿಸಿದ್ದರು.

ಆಗ ಜೊತೆಯಾಗಿದ್ದು ನಾಯಕ ಶಾನ್ ಪೊಲಾಕ್ ಮತ್ತು ಕೀಪರ್ ಮಾರ್ಕ್ ಬೌಚರ್. ಇವರಿಬ್ಬರ 63 ರನ್ ಜೊತೆಯಾಟದಿಂದ ತವರು ಅಭಿಮಾನಿಗಳಿಗೆ ಮತ್ತೆ ಪಂದ್ಯ ಗೆಲ್ಲುವ ಆಸೆ ಚಿಗುರಿತು. ಪಂದ್ಯ ರೋಮಾಂಚನಕಾರಿ ರೀತಿಯಲ್ಲಿ ಸಾಗುತ್ತಿತ್ತು. ಈ ವೇಳೆ ನಾಯಕ ಪೊಲಾಕ್ ರನೌಟಾದರು. ಆಗ ತಂಡದ ಮೊತ್ತ 212 ರನ್.

ತಂಡವನ್ನು ಗುರಿ ಮುಟ್ಟಿಸಲಾಗದ ಹತಾಶೆಯಿಂದ ನಾಯಕ ಪೊಲಾಕ್ ಪೆವಲಿಯನ್ ಕಡೆ ಭಾರವಾದ ಹೆಜ್ಜೆ ಹಾಕುತ್ತಿದ್ದರೆ, ಅತ್ತ ಡರ್ಬನ್ ನ ಆಕಾಶದ ತುಂಬಾ ಕಪ್ಪಡರಿತ್ತು. ಅಲ್ಲೊಂದು ಇಲ್ಲೊಂದು ಮಿಂಚು ಗುಡುಗು ಆರಂಭವಾಗಿತ್ತು. ಪೊಲಾಕ್ ಒಮ್ಮೆ ಡಕ್ ವರ್ತ್ ಲೂಯಿಸ್ ನಿಯಮದ ಲೆಕ್ಕಾಚಾರದ ಕಡೆಗೆ ಕಣ್ಣಾಡಿಸಿದರು. ತಂಡ ಮುಂದೆ ಇತ್ತು. ನಿರಾಳರಾದರು. ಲ್ಯಾನ್ಸ್ ಕ್ಲೂಸ್ನರ್ ಕ್ರೀಸ್ ಗೆ ಬಂದಾಗ ಹರಿಣಗಳ ಗೆಲುವಿಗೆ 45 ಎಸೆತದಲ್ಲಿ 57 ರನ್ ಅಗತ್ಯವಿತ್ತಷ್ಟೇ. ಕೈಯಲ್ಲಿ ಇನ್ನೂ ನಾಲ್ಕು ವಿಕೆಟ್ ಗಳಿದ್ದವು. ಅಲ್ಲದೆ ಮಾರ್ಕ್ ಬೌಚರ್ ಇನ್ನೂ ಕ್ರೀಸ್ ನಲ್ಲಿದ್ದರು.

ದಕ್ಷಿಣ ಆಫ್ರಿಕಾದ ರನ್ ಗತಿಗೆ ಕಡಿವಾಣ ಹಾಕಬೇಕು ಎಂಬ ಲೆಕ್ಕಾಚಾರದಿಂದ ಲಂಕಾ ನಾಯಕ ಜಯಸೂರ್ಯ 45 ನೇ ಓವರ್ ನ್ನು ಮುರಳೀಧರನ್ ಗೆ ನೀಡಿದರು. ಮುರಳಿ ಸ್ಪಿನ್ ಗೆ ತಿಣುಕಾಡಿದ ಕ್ಲೂಸ್ನರ್ ರನ್ ಗಳಿಸಲಾಗದೆ ಪರದಾಡಿದರು. ಎಂಟು ಎಸೆತಗಳಿಂದ ಕ್ಲೂಸ್ನರ್ ಮಾಡಿದ್ದು ಕೇವಲ ಒಂದು ರನ್. ಆ ಓವರ್ ನ ಐದನೇ ಎಸೆತದ ಎದುರಿಸಿದ ಬೌಚರ್ ಚೆಂಡನ್ನು ಬೌಂಡರಿ ಗೆರೆಗಟ್ಟಿ ತಂಡದ ರನ್ ಗತಿ ಏರಿಸಲು ಸಹಾಯ ಮಾಡಿದರು. ಕೊನೆಯ ಎಸೆತವನ್ನು ರಕ್ಷಣಾತ್ಮಕವಾಗಿ ಆಡಿದ ಬೌಚರ್ ವಿಕೆಟ್ ಕೈಚೆಲ್ಲದಂತೆ ನೋಡಿಕೊಂಡರು. ಆಗ ತಂಡದ ಮೊತ್ತ 45 ಓವರ್ ಅಂತ್ಯಕ್ಕೆ ಆರು ವಿಕೆಟ್ ನಷ್ಟಕ್ಕೆ 229 ರನ್.

ಆಗ ಶುರುವಾಯಿತು ನೋಡಿ ಮಳೆ ಡ್ರಾಮಾ. ಡರ್ಬನ್ ಅಂಗಳದಲ್ಲಿ ಧಾರಾಕಾರವಾಗಿ ಸುರಿಯಲಾರಂಭಿಸಿತು. ಅಂಪೈರ್ ಗಳು ಆಟಗಾರರನ್ನು ಹೊರಹೋಗಲು ಸೂಚಿಸಿದರು. ಪೆವಿಲಿಯನ್ ಕಡೆ ಹೆಜ್ಜೆ ಹಾಕಿದ ಬೌಚರ್ ತಲೆಯಲ್ಲಿ ಲೆಕ್ಕಾಚಾರ ಓಡುತ್ತಿತ್ತು. ಡಿಎಲ್ ನಿಯಮದ ಪ್ರಕಾರ ಗೆಲುವಿಗೆ ಬೇಕಾಗುವಷ್ಟು ರನ್ ಗಳಿಸಿದ್ದೇವೆ ಎಂದುಕೊಂಡ ಬೌಚರ್ ಮುಖದಲ್ಲಿ ಸಣ್ಣದೊಂದು ನಿರಾಳತೆಯ ನಗುವಿತ್ತು. ಆದರೆ ಆ ನಗು ಕೆಲವೇ ನಿಮಿಷಗಳಲ್ಲಿ ನಿರಾಸೆಯಾಗಿ ಮಾರ್ಪಟ್ಟಿತ್ತು.

ಹೌದು, ಬೌಚರ್ ಲೆಕ್ಕಾಚಾರ ತಪ್ಪಾಗಿತ್ತು. ಡಿಎಲ್ ನಿಯಮದ ಪ್ರಕಾರ 45 ಓವರ್ ಅಂತ್ಯದಲ್ಲಿ ದಕ್ಷಿಣ ಆಫ್ರಿಕಾ ಗೆಲ್ಲಲು 230 ರನ್ ಗಳಿಸಬೇಕಿತ್ತು. ಆದರೆ ಹರಿಣಗಳು ಗಳಿಸಿದ್ದು 229 ರನ್. ಅಂದರೆ ಪಂದ್ಯ ಟೈ. ಆ ಕೊನೆಯ ಎಸೆತವನ್ನು ಡಿಫೆಂಡ್ ಮಾಡುವ ಬದಲು ಬೌಚರ್ ಒಂಟಿ ರನ್ ತೆಗೆದಿದ್ದರೂ ಅವರು ಗೆಲ್ಲುತ್ತಿದ್ದರು!

ಪಂದ್ಯ ಟೈ ಆಯಿತು. ಎರಡಂಕ ಗಳಿಸಲೇಬೇಕಿದ್ದ ದಕ್ಷಿಣ ಆಫ್ರಿಕಾ ಒಂದೇ ಅಂಕ ಪಡೆದು ಕೂಟದಿಂದ ಹೊರಬಿತ್ತು. ಮಳೆಯ ಅದೃಷ್ಟ ಪಡೆದ ಶ್ರೀಲಂಕಾ ಸೆಮಿ ಫೈನಲ್ ಟಿಕೆಟ್ ಪಡೆಯಿತು. ದುರಾದೃಷ್ಟ, ತಪ್ಪು ಲೆಕ್ಕಾಚಾರದಿಂದ ದಕ್ಷಿಣ ಆಫ್ರಿಕಾ ದೊಡ್ಡ ನಷ್ಟ ಅನುಭವಿಸಿತು,

ಕೀರ್ತನ್ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next