ಪೊಚೆಫ್ಸೂóಮ್: ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 333 ರನ್ನುಗಳ ಬೃಹತ್ ಅಂತರದಿಂದ ಬಾಂಗ್ಲಾದೇಶವನ್ನು ಬಗ್ಗುಬಡಿದಿದೆ. ಗೆಲುವಿಗೆ 424 ರನ್ನುಗಳ ಗುರಿ ಪಡೆದಿದ್ದ ಬಾಂಗ್ಲಾದೇಶ, ಅಂತಿಮ ದಿನವಾದ ಸೋಮವಾರ ಬೆಳಗ್ಗೆ 90 ರನ್ನಿಗೆ ಉರುಳಿತು.
ಬಾಂಗ್ಲಾದ ಕೊನೆಯ 7 ವಿಕೆಟ್ ಕೇವಲ 41 ರನ್ ಅಂತರದಲ್ಲಿ ಉದುರಿ ಹೋಯಿತು. ಅಂತಿಮ ದಿನ ನಡೆದದ್ದು ಕೇವಲ 83 ನಿಮಿಷಗಳ ಆಟ ಮಾತ್ರ. 3 ವಿಕೆಟಿಗೆ 49 ರನ್ ಮಾಡಿದಲ್ಲಿಂದ ಬಾಂಗ್ಲಾ ಬ್ಯಾಟಿಂಗ್ ಮುಂದುವರಿಸಿತ್ತು.
ಸ್ಪಿನ್ನರ್ ಕೇಶವ ಮಹಾರಾಜ್ (24ಕ್ಕೆ 4) ಮತ್ತು ವೇಗಿಗಳಾದ ಕ್ಯಾಗಿಸೊ ರಬಾಡ (33ಕ್ಕೆ 3), ಮಾರ್ನೆ ಮಾರ್ಕೆಲ್ (19ಕ್ಕೆ 2) ಸೇರಿಕೊಂಡು ಬಾಂಗ್ಲಾ ಕತೆ ಮುಗಿಸಿದರು. ರಬಾಡ ತಮ್ಮ ಮೊದಲ 4 ಓವರ್‌ಗಳಲ್ಲೇ 3 ವಿಕೆಟ್ ಉಡಾಯಿಸಿ ಪ್ರವಾಸಿಗರಿಗೆ ಮರ್ಮಾಘಾತವಿಕ್ಕಿದರು.
ದಕ್ಷಿಣ ಆಫ್ರಿಕಾ ಬಾಂಗ್ಲಾವನ್ನು ನೂರರೊಳಗೆ ಆಲೌಟ್ ಮಾಡಿದ್ದು ಇದೇ ಮೊದಲ ಸಲ. ಹಾಗೆಯೇ ಕಳೆದೊಂದು ದಶಕದಲ್ಲಿ ಬಾಂಗ್ಲಾ ಮೊದಲ ಬಾರಿಗೆ ನೂರಕ್ಕೂ ಕಡಿಮೆ ಸ್ಕೋರಿಗೆ ಸರ್ವಪತನ ಕಂಡ ಸಂಕಟಕ್ಕೆ ಸಿಲುಕಿತು. ಇದು ಬಾಂಗ್ಲಾ ಟೆಸ್ಟ್ ಚರಿತ್ರೆಯ 3ನೇ ದೊಡ್ಡ ಸೋಲು.
ಮೊದಲ ಸರದಿಯಲ್ಲಿ 199 ರನ್ ಮಾಡಿದ ಡೀನ್ ಎಲ್ಗರ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಸರಣಿಯ 2ನೇ ಟೆಸ್ಟ್ ಅ. 6ರಿಂದ ಬ್ಲೋಮ್‌ಫಾಂಟೀನ್‌ನಲ್ಲಿ ಆರಂಭವಾಗಲಿದೆ.
ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ-3ಕ್ಕೆ 496 ಡಿಕ್ಲೇರ್ ಮತ್ತು 6ಕ್ಕೆ 247 ಡಿಕ್ಲೇರ್. ಬಾಂಗ್ಲಾದೇಶ-320 ಮತ್ತು 90 (ಕಯೆಸ್ 32, ರಹೀಂ 16, ಮೆಹಿದಿ ಹಸನ್ ಔಟಾಗದೆ 15, ಮಹಾರಾಜ್ 25ಕ್ಕೆ 4, ರಬಾಡ 33ಕ್ಕೆ 3, ಮಾರ್ಕೆಲ್ 19ಕ್ಕೆ 2). ಪಂದ್ಯಶ್ರೇಷ್ಠ: ಡೀನ್ ಎಲ್ಗರ್.