ಬೆಂಗಳೂರು: ಘನತ್ಯಾಜ್ಯ ವಿಚಾರದಲ್ಲಿ ಬಿಬಿಎಂಪಿಯನ್ನು ದೂರುವ ಬದಲು ನಾಗರಿಕರು ತ್ಯಾಜ್ಯ ವಿಂಗಡಿಸಲು ಮುಂದಾಗಬೇಕು ಎಂದು ಮೇಯರ್ ಜಿ.ಪದ್ಮಾವತಿ ಕರೆ ನೀಡಿದ್ದಾರೆ. ಕೆ.ಆರ್.ಪುರ ವಿಧಾನಸಭೆ ಕ್ಷೇತ್ರದ ವಿಜಿನಾಪುರ ವಾರ್ಡ್‌ನಲ್ಲಿ ಬಿಬಿಎಂಪಿ ಹಾಗೂ ಕೆ.ಆರ್.ಪುರ ಕ್ಷೇಮಾಭಿವೃದ್ಧಿ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಕಾಂಪೋಸ್ಟ್ ಸಂತೆ ಕಾರ್ಯಕ್ರಮದಲ್ಲಿ ಮಾತನಾಡಿ, ತ್ಯಾಜ್ಯ ವಿಂಗಡಿಸಿ ಪಾಲಿಕೆಗೆ ನೀಡುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ ಎಂದರು.
ಮನೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವಿಂಗಡಿಸಿ ಪೌರ ಕಾರ್ಮಿಕರಿಗೆ ನೀಡಬೇಕು. ಜತೆಗೆ ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯದೆ ಸುತ್ತಮುತ್ತಲಿನ ವಾತಾವರಣ ಸ್ವತ್ಛವಾಗಿಟ್ಟುಕೊಳ್ಳುವ ಮೂಲಕ ನಾಗರಿಕರು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ತ್ಯಾಜ್ಯ ಸ್ವೀಕರಿಸಲು ಪೌರಕಾರ್ಮಿಕರು ತಡವಾಗಿ ಬರುತ್ತಾರೆ ಎಂದು ರಸ್ತೆ ಬದಿಯಲ್ಲಿ ತ್ಯಾಜ್ಯ ಸುರಿಯುವುದು ಸರಿಯಲ್ಲ. ನಗರದಲ್ಲಿ ತ್ಯಾಜ್ಯ ಸಮಸ್ಯೆ ನಿವಾರಿಸುವ ಉದ್ದೇಶದಿಂದ ಸಾರ್ವಜನಿಕರು ಪಾಲಿಕೆಗೆ ಸಹಕಾರ ನೀಡಬೇಕು. ದೇಶದಲ್ಲಿಯೇ ಬೆಂಗಳೂರು ತ್ಯಾಜ್ಯ ವಿಂಗಡಣೆಯಲ್ಲಿ ಶೇ.50ರಷ್ಟು ಸಾಧನೆ ಮಾಡಿದ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ನಾಗರಿಕರು ತ್ಯಾಜ್ಯ ವಿಂಗಡಿಸಿ ನೀಡುವುದರಿಂದ ಅದನ್ನು ಗೊಬ್ಬರವಾಗಿ ಪರಿವರ್ತಿಬಹುದು ಎಂದರು.
ಶಾಸಕ ಬಿ.ಎ.ಬಸವರಾಜ್, ಭೂಮಿಯಲ್ಲಿ ಕರಗದ ಮತ್ತು ಮಣ್ಣಿನ ಫಲವತ್ತತೆಗೆ ಮಾರಕವಾಗಬಲ್ಲ ವಸ್ತುಗಳನ್ನು ಮನೆಗಳಲ್ಲಿಯೇ ವಿಂಗಡಿಸಿ ನೀಡುವ ಮೂಲಕ ಪರಿಸರ ಸಂರಕ್ಷಣೆಗೆ ನಾಗರಿಕರು ಮುಂದಾಗಬೇಕು. ತ್ಯಾಜ್ಯ ವಿಲೇವಾರಿ ಕುರಿತು ಪಾಲಿಕೆಯಿಂದ ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.
ಕಾಂಪೋಸ್ಟ್ ಸಂತೆಯಲ್ಲಿ ಸ್ಥಳೀಯ ಪಾಲಿಕೆ ಸದಸ್ಯ ರಾಜಣ್ಣ ಸೇರಿದಂತೆ ಪ್ರಮುಖರು ಹಾಜರಿದ್ದರು. ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಗೊಬ್ಬರ ತಯಾರಿಕೆ, ಮರುಬಳಕೆ, ಬಯೋಗ್ಯಾಸ್, ಅಲಂಕಾರಿಕ ವಸ್ತುಗಳ ತಯಾರಿಕೆಗೆ ಬಳಸುವ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸಲಾಯಿತು.