Advertisement

ಸೊರಬದಲ್ಲಿ ಶೇ.74.94 ಮತದಾನ

06:48 AM Jun 02, 2019 | Lakshmi GovindaRaj |

ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಸೊರಬ ಪಟ್ಟಣ ಪಂಚಾಯಿತಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಪುರಸಭೆಗೆ ಶನಿವಾರ ಮತದಾನ ನಡೆದಿದ್ದು, ನೆಲಮಂಗಲ ಪುರಸಭೆಯಲ್ಲಿ ಶೇ.72.89 ಮತ್ತು ಸೊರಬ ಪಟ್ಟಣ ಪಂಚಾಯಿತಿಯಲ್ಲಿ ಶೇ.74.94ರಷ್ಟು ಮತದಾನ ಆಗಿದೆ.

Advertisement

ಈ ಎರಡೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ತಕರಾರು ಅರ್ಜಿ ದಾಖಲಾಗಿದ್ದರಿಂದ ಮೇ 13ರಂದು ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗಿತ್ತು. ಅದರಂತೆ ಜೂ.1ರಂದು ಬೆಳಗ್ಗೆ 7ರಿಂದ ಸಂಜೆ 5ರ ತನಕ ಮತದಾನ ನಡೆಯಿತು.

ನೆಲಮಂಗಲ ಪುರಸಭೆಯ ಒಟ್ಟು 23 ವಾರ್ಡ್‌ಗಳ ಪೈಕಿ 1 ವಾರ್ಡ್‌ನಲ್ಲಿ ಅವಿರೋಧ ಆಯ್ಕೆ ನಡೆದಿದ್ದರಿಂದ 22 ವಾರ್ಡ್‌ಗಳಲ್ಲಿ ಮತದಾನ ನಡೆಯಿತು. 97 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಅದೇ ರೀತಿ, ಸೊರಬ ಪಟ್ಟಣ ಪಂಚಾಯಿತಿಯ 12 ವಾರ್ಡ್‌ಗಳಲ್ಲಿ ಮತದಾನ ನಡೆದಿದ್ದು, 35 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

ಜೂ.3ಕ್ಕೆ ಮತ ಎಣಿಕೆ: ನೆಲಮಂಗಲ ಪುರಸಭೆ ಹಾಗೂ ಸೊರಬ ಪಟ್ಟಣ ಪಂಚಾಯಿತಿಯ ಮತ ಎಣಿಕೆ ಜೂ.3ಕ್ಕೆ ನಡೆಯಲಿದೆ. ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಮತ ಎಣಿಕೆಯನ್ನು ಏಕಕಾಲಕ್ಕೆ ನಡೆಸಬೇಕು ಎಂಬ ಹಿನ್ನೆಲೆಯಲ್ಲಿ ಮೇ 29ರಂದು ಮತದಾನ ನಡೆದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪುರಸಭೆ, ಶಿವಮೊಗ್ಗ ಜಿಲ್ಲೆಯ ಸಾಗರ ನಗರಸಭೆ, ಶಿಕಾರಿಪುರ ಪುರಸಭೆ, ಶಿರಾಳಕೊಪ್ಪ, ಹೊಸನಗರ ಪಟ್ಟಣ ಪಂಚಾಯಿತಿಗಳ ಮತ ಎಣಿಕೆಯನ್ನೂ ಇದೇ ವೇಳೆ ನಡೆಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next