ಅಮೀನಗಡ: ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಕಸದ ಕಡ್ಡಿ, ಪ್ಲಾಸ್ಟಿಕ್, ಸಿಗರೆಟ್ ಪ್ಯಾಕ್, ಉಗಿದಿರುವ ಗುಟ್ಕಾ ಕಲೆಗಳು, ಆಶ್ರಯ ಪಡೆದ ಮೇಕೆಗಳು…
ಹೌದು, ಇದು ಸಾರ್ವಜನಿಕ ಮಾರುಕಟ್ಟೆಯಲ್ಲ, ಕುರಿ-ಮೇಕೆಗಳನ್ನು ಸಾಕುವ ಶೆಡ್ ಕೂಡಾ ಅಲ್ಲ. ಕುರಿ ಸಂತೆಯಂತೂ ಅಲ್ಲವೇ ಅಲ್ಲ. ಇವೆಲ್ಲ ಕಾಣುವುದು ಸೂಳೇಭಾವಿ ಗ್ರಾಮದ ಬಸ್ ನಿಲ್ದಾಣದಲ್ಲಿ. ಸೂಳೇಭಾವಿ ಬಸ್ ನಿಲ್ದಾಣದ ಸ್ಥಿತಿ.
ಹುನಗುಂದ ತಾಲೂಕಿನಲ್ಲಿ ಬಹುದೊಡ್ಡ ಗ್ರಾಮವೆಂಬ ಖ್ಯಾತಿ ಪಡೆದ ಈ ಗ್ರಾಮದಲ್ಲಿ 2011ರ ಜನಗಣತಿ ಪ್ರಕಾರ 5140 ಪುರುಷರು, 5036 ಮಹಿಳೆಯರು ಸೇರಿದಂತೆ ಒಟ್ಟು 10176 ಜನಸಂಖ್ಯೆ ಹೊಂದಿದೆ. ಗ್ರಾಮದ ಪ್ರಯಾಣಿಕರಿಗೆ ಅನುಕೂಲವಾಗಲಿ ಎಂದು ಅಮೀನಗಡ ಮತ್ತು ಐತಿಹಾಸಿಕ ಪ್ರವಾಸಿ ಕೇಂದ್ರ ಐಹೊಳೆಗೆ ಹೋಗುವ ಹೆದ್ದಾರಿಯ ಬದಿಯಲ್ಲಿ ಅರ್ಧಕೋಟಿ ಖರ್ಚು ಮಾಡಿ ಸುಂದರವಾದ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ.
ಬಸ್ ನಿಲ್ದಾಣದ ಸುತ್ತಲೂ ಕಾಂಪೌಂಡ್, ಪ್ರಯಾಣಿಕರಿಗೆ ಉತ್ತಮವಾದ ಆಸನ, ನಿಲ್ದಾಣಾಧಿಕಾರಿಗಳ ಕೊಠಡಿ, ಮಹಿಳೆಯರ ವಿಶ್ರಾಂತಿ ಕೊಠಡಿ, ಉಪಹಾರ ಗೃಹ, ಶೌಚಾಲಯವನ್ನು ಅಚ್ಚುಕಟ್ಟಾಗಿ ನಿರ್ಮಾಣ ಮಾಡಲಾಗಿದೆ. ಆದರೆ, ನಿರ್ವಹಣೆ ಇಲ್ಲದೆ ಬಸ್ ನಿಲ್ದಾಣ ಅವ್ಯವಸ್ಥೆಯ ತಾಣವಾಗಿದೆ.
ಅಸ್ವಚ್ಛತೆಯ ತಾಣ: ಬಸ್ ನಿಲ್ದಾಣದಲ್ಲಿ ನಿರ್ವಹಣೆ ಮಾಡುವವರು ಇಲ್ಲದೆ ಇರುವುದರಿಂದ ಬಸ್ ನಿಲ್ದಾಣದ ಗೋಡೆಗಳ ಮೇಲೆ ಉಗಿದಿರುವ ಗುಟ್ಕಾ ಕಲೆಗಳು ನಿಲ್ದಾಣಕ್ಕೆ ಕಪ್ಪುಚುಕ್ಕೆಯಂತೆ ಕಾಣುತ್ತಿವೆ. ಬಸ್ ನಿಲ್ದಾಣ ಸುತ್ತಮುತ್ತ ಎಲ್ಲೆಂದರಲ್ಲಿ ಹುಲ್ಲು, ಕಸ, ಕಡ್ಡಿ ಬೆಳೆದು ಸ್ವಚ್ಛತೆ ಮಾಯವಾಗಿದೆ.
ಬಸ್ ನಿಲ್ದಾಣದ ಒಳಗಡೆ ಪ್ಲಾಸ್ಟಿಕ್‌ಗಳು, ನೀರಿನ ಬಾಟಲ್‌ಗಳು, ಸಾರಾಯಿ ಪ್ಯಾಕೇಟ್‌ಗಳು, ಕಸ ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಬಳಕೆಯಾಗದೇ ಇರುವ ಕೆಲವು ಕೊಠಡಿಗಳ ಕಿಟಕಿಗಳ ಗ್ಲಾಸ್‌ಗಳು ಒಡೆದು ಹೋಗಿದೆ. ಅಸ್ವತ್ಛತೆಯಿಂದಾಗಿ ಪ್ರಯಾಣಿಕರು ಬಸ್ ನಿಲ್ದಾಣದ ಒಳಗಡೆ ಬಾರದೆ ಅಂಗಳದಲ್ಲಿಯೇ ನಿಂತು ಬಸ್‌ಗಾಗಿ ಕಾಯುವ ಪರಿಸ್ಥಿತಿ ಇದೆ.
ಅಧಿಕಾರಿಗಳ ನಿರ್ಲಕ್ಷ್ಯ: ಸಾವಿರಾರು ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ 50 ಲಕ್ಷ ರೂ. ಖರ್ಚು ಮಾಡಿ ನಿರ್ಮಾಣ ಮಾಡಿದ ಬಸ್ ನಿಲ್ದಾಣ ನಿರ್ವಹಣೆ ಇಲ್ಲದೆ ಹಾಳಾಗಲು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಘಟಕ ಸಿಬ್ಬಂದಿ ನೇಮಕ ಮಾಡದೇ ನಿರ್ಲಕ್ಷ್ಯ ವಹಿಸಿದ್ದು, ಮತ್ತು ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಕಾಪಾಡದ ಸ್ಥಳಿಯ ಗ್ರಾಪಂ ಆಡಳಿತ ಮಂಡಳಿಯ ಬೇಜವಾಬ್ದಾರಿ ನಿಲ್ದಾಣದಲ್ಲಿ ಸ್ವಚ್ಛತೆ ಮರೀಚಿಕೆಯಾಗಲು ಕಾರಣ ಎಂಬುದು ಗ್ರಾಮದ ಪ್ರಜ್ಞಾವಂತ ನಾಗರಿಕರ ಆರೋಪವಾಗಿದೆ.
ಇನ್ನಾದರೂ ಸಂಬಂಧಪಟ್ಟ ಸಾರಿಗೆ ಇಲಾಖೆಯ ಅಧಿಕಾರಿಗಳು ಬಸ್ ನಿಲ್ದಾಣ ನಿರ್ವಹಣೆಗೆ ಸಿಬ್ಬಂದಿ ನೇಮಕ ಮಾಡಬೇಕು ಮತ್ತು ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಕಾಪಾಡಲು ಗ್ರಾಪಂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸೂಳೇಭಾವಿ ಗ್ರಾಮದ ಬಸ್ ನಿಲ್ದಾಣ ನಿರ್ವಹಣೆ ಮಾಡಲು ಸಿಬ್ಬಂದಿ ನೇಮಕ ಮಾಡಲು ಈ ಹಿಂದೆಯೇ ಹಿರಿಯ ಅಧಿಕಾರಿಗಳಿಗೆ ಮೌಖೀಕವಾಗಿ ತಿಳಿಸಲಾಗಿದೆ. ಸೂಳೇಭಾವಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಮತ್ತೂಮ್ಮೆ ಹಿರಿಯ ಅಧಿಕಾರಿಗಳಿಗೆ ವಿಷಯ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುವುದು. –
ಎಸ್.ಬಿ. ಜತ್ತಿ, ಡಿಪೋ ಮ್ಯಾನೇಜರ್, ಹುನಗುಂದ
ಸುಂದರವಾಗಿರುವ ಸೂಳೇಭಾವಿ ಗ್ರಾಮದ ಬಸ್ ನಿಲ್ದಾಣ ನಿರ್ವಹಣೆ ಇಲ್ಲದೆ ಅಸ್ವಚ್ಛತೆಯಿಂದ ಹಾಳಾಗುತ್ತಿದೆ. ಆದರಿಂದ ಬಸ್ ನಿಲ್ದಾಣ ನಿರ್ವಹಣೆ ಮಾಡಲು ಸಿಬ್ಬಂದಿ ನೇಮಕ ಮಾಡಿ ಎಂದು ಹಲವಾರು ಬಾರಿ ಸಾರಿಗೆ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಸ್ಥಳೀಯ ಗ್ರಾಪಂ, ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಮಾಡುವಲ್ಲಿ ವಿಫಲವಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯವನ್ನು ಶಾಸಕರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ. –
ನಾಗೇಶ ಗಂಜೀಹಾಳ, ಬಿಜೆಪಿ ಮುಖಂಡರು, ಸೂಳೇಭಾವಿ
–
ಎಚ್.ಎಚ್. ಬೇಪಾರಿ