Advertisement
ಈ ಸಂಬಂಧ ಜಂಟಿ ಸುದ್ದಿಗೋಷ್ಠಿ ನಡೆಸಿದ ಸಾಹಿತಿಗಳು ಮತ್ತು ಕನ್ನಡಪರ ಸಂಘಟನೆಗಳು, ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ನಾಡು-ನುಡಿ ರಕ್ಷಣೆಗಾಗಿ ಹೋರಾಟ ನಡೆಸುವುದು ಹಕ್ಕು ಮತ್ತು ಹೊಣೆಗಾರಿಕೆ. ಆದರೆ, ದುರುದ್ದೇಶದಿಂದ ಹೋರಾಟಗಾರರ ಮೇಲೆ ಕೋಮುಗಲಭೆಯಂತಹ ಗಂಭೀರ ಪ್ರಕರಣ ದಾಖಲಿಸಿ, ಹೋರಾಟ ಹತ್ತಿಕ್ಕುವುದು ಖಂಡನೀಯ. ಕೂಡಲೇ ಕೋಮುಗಲಭೆ ಅಡಿ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯಬೇಕು. ಇಲ್ಲದಿದ್ದರೆ, “ಪ್ರವೀಣ್ ಸೂದ್ ಹಠಾವೋ’ ಚಳವಳಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
Related Articles
Advertisement
ಹಿಂದಿ ನಾಮಫಲಕಗಳಿಗೆ ಮಸಿಬಳಿಯುವುದರಿಂದ ಕೋಮುಗಲಭೆ ಹೇಗೆ ಸೃಷ್ಟಿಯಾಗುತ್ತದೆ ಎಂದು ಕೇಳಿದ ಪ್ರಕಾಶ್ ಬೆಳವಾಡಿ, ಈ “ಕೋಮುಗಲಭೆ’ ಪ್ರಕರಣ ದಾಖಲಿಸುವ ಮೂಲಕ ಕನ್ನಡವನ್ನು ಪ್ರತಿನಿಧಿಸುವವರದ್ದು ಒಂದು ಕೋಮು ಹಾಗೂ ಇತರೆ ಭಾಷಿಕರದ್ದು ಮತ್ತೂಂದು ಕೋಮು ಎಂದು ಸ್ವತಃ ಪೊಲೀಸರು ಪ್ರತಿಪಾದಿಸಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಮತ್ತ್ಯಾವ ರೀತಿ ಹೇಳ್ಬೇಕು?: ಬನವಾಸಿ ಬಳಗದ ಅಧ್ಯಕ್ಷ ಜಿ. ಆನಂದ್ ಮಾತನಾಡಿ, ಹಿಂದಿ ಹೇರಿಕೆ ವಿರುದ್ಧ ಟ್ವಿಟರ್ ಅಭಿಯಾನ ನಡೆಸಲಾಯಿತು. ಹಿಂದಿ ಬೇಡ ಎಂದು ಪತ್ರದ ಮೂಲಕ ತಿಳಿಸಲಾಯಿತು. ಹಿರಿಯ ಸಾಹಿತಿಗಳು, ಲೇಖಕರ ಸಹಿ ಸಂಗ್ರಹಿಸಲಾಯಿತು. ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಮಾಡಲಾಯಿತು. ಪ್ರತಿಭಟನೆ ಮಾಡಿ, ಗಡುವು ಕೂಡ ನೀಡಲಾಯಿತು. ಇದಾವುದನ್ನೂ ಕೇಳಲಿಲ್ಲ. ಅನಿವಾರ್ಯವಾಗಿ ಮಸಿ ಬಳಿಯಬೇಕಾಯಿತು.
ಇದೂ ಬೇಡ ಎಂದಾದರೆ, ಜನರ ಅಭಿಪ್ರಾಯಗಳನ್ನು ಇನ್ನಾವ ರೀತಿ ವ್ಯಕ್ತಪಡಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರವು ರಾಜ್ಯಕ್ಕೆ ಹಲವು ಯೋಜನೆಗಳಿಗೆ ಅನುದಾನ ನೀಡುತ್ತದೆ. ಅದರ ಎರಡು-ಮೂರುಪಟ್ಟು ರಾಜ್ಯದಿಂದ ತೆರಿಗೆ ಹೋಗಿರುತ್ತದೆ. ಹೀಗೆ ಅನುದಾನ ಕೊಟ್ಟಿರುವ ಯೋಜನೆಗಳಿಗೆಲ್ಲಾ ಹಿಂದಿ ಹೇರುವ ಪ್ರಯತ್ನ ನಡೆದಿದೆ. ಇದಕ್ಕೆ “ನಮ್ಮ ಮೆಟ್ರೋ’ ಮುನ್ನುಡಿ. ತಕ್ಷಣ ಸರ್ಕಾರ ಈ ನಿಟ್ಟಿನಲ್ಲಿ ಸ್ಪಷ್ಟ ನಿಲುವು ತಳೆಯಬೇಕು ಎಂದು ಆಗ್ರಹಿಸಿದರು.
ಸಾಹಿತಿ ಪಿ.ವಿ. ನಾರಾಯಣ್ ಮಾತನಾಡಿ, ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯ ಏಕಪಕ್ಷೀಯ ತೀರ್ಮಾನವನ್ನು ಸಂವಿಧಾನಬದ್ಧವಾಗಿ ನಡೆಸಲಾಗುತ್ತಿದೆ. ಯಾವ ಆಸ್ತಿಪಾಸ್ತಿ ಹಾಳುಮಾಡಿಲ್ಲ. ಅಹಿಂಸಾತ್ಮಕವಾಗಿ, ಸೌಮ್ಯರೀತಿಯಲ್ಲಿ ಹೋರಾಟ ನಡೆಸಲಾಗಿದೆ. ಅದಕ್ಕೆ ಕೋಮುಗಲಭೆ ಆರೋಪ ಹೊರಿಸಿ, ಹೋರಾಟ ಹತ್ತಿಕ್ಕಲು ಮುಂದಾಗಿರುವುದು ಖಂಡನೀಯ ಎಂದು ಹೇಳಿದರು.
ಸೂದ್ ವರ್ಗಾವಣೆಗೆ ಆಗ್ರಹ: ಸಮತಾ ಸೈನಿಕ ದಳದ ಅಧ್ಯಕ್ಷ ಎಂ. ವೆಂಕಟಸ್ವಾಮಿ ಮಾತನಾಡಿ, ಅನೇಕ ಸಂದರ್ಭದಲ್ಲಿ ಎಷ್ಟೋ ಜನರಿಗೆ ಮಸಿ ಬಳಿಯಲಾಗಿರುತ್ತದೆ. ಆದರೆ, ಇಲ್ಲಿ ಮೆಟ್ರೋ ನಿಲ್ದಾಣದ ಪ್ರವೇಶದ್ವಾರದಲ್ಲಿರುವ ಹಿಂದಿ ನಾಮಫಲಕಗಳಿಗೆ ಮಸಿ ಬಳಿದಿರುವುದಕ್ಕೆ ಕೋಮುಗಲಭೆ ಕೇಸು ಹಾಕುವುದು ಯಾವ ನ್ಯಾಯ? ಇದಕ್ಕೆ ಕಾರಣರಾದ ಪೊಲೀಸ್ ಆಯುಕ್ತ ಪ್ರವೀಣ್‌ಸೂದ್ ಅವರನ್ನು ತಕ್ಷಣ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಹಮದಿಯರ ಕನ್ನಡ ವೇದಿಕೆ ಅಧ್ಯಕ್ಷ ಸಮೀವುಲ್ಲಾ, ಅಖೀಲ ಕರ್ನಾಟಕ ಕೆಥೋಲಿಕ್ ಕ್ರೈಸ್ತರ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ರಫಾಯಲ್ ರಾಜು, ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಿ.ಆರ್. ಭಾಸ್ಕರ್ ಪ್ರಸಾದ್, ಕರ್ನಾಟಕ ಜನಶಕ್ತಿ ಪದಾಧಿಕಾರಿ ವಾಸು ಮಾತನಾಡಿದರು.