ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಬುಧವಾರ (ಜೂನ್ 01) ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಸಂಸದ ರಾಹುಲ್ ಗಾಂಧಿಗೆ ಸಮನ್ಸ್ ಜಾರಿಗೊಳಿಸಿರುವುದಾಗಿ ವರದಿ ತಿಳಿಸಿದೆ. ಪ್ರಕರಣದ ತನಿಖೆಯನ್ನು ತನಿಖಾ ಸಂಸ್ಥೆ 2015ರಲ್ಲಿ ಮುಕ್ತಾಯಗೊಳಿಸಿತ್ತು.
ಇದನ್ನೂ ಓದಿ:ಅಕ್ಕನ ಮದುವೆಗೆ ಸಹಾಯ ಮಾಡದಿದ್ದಕ್ಕೆ ಉಪನ್ಯಾಸಕನ ಕೊಲೆ: ಮಗ ಸೇರಿ ಮೂವರ ಬಂಧನ
ನ್ಯಾಷನಲ್ ಹೆರಾಲ್ಡ್ ಪ್ರಕರಣದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯಕ್ಕೆ ಹಾಜರಾಗಬೇಕೆಂದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಸಮನ್ಸ್ ಜಾರಿ ಮಾಡಿರುವುದಾಗಿ ಪಕ್ಷದ ಮುಖಂಡ ರಣದೀಪ್ ಸುರ್ಜೇವಾಲಾ ತಿಳಿಸಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣದ ಕುರಿತಂತೆ 2011-12ರಲ್ಲಿ ಹಣಕಾಸು ದುರುಪಯೋಗದ ಆರೋಪದಡಿ ಪ್ರಕರಣ ದಾಖಲಾಗಿತ್ತು. ಇದೀಗ ಜೂನ್ 08ರಂದು ಸೋನಿಯಾ ಗಾಂಧಿ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಬೇಕೆಂದು ತಿಳಿಸಿದ್ದು, ಜೂನ್ 02ರಂದು ರಾಹುಲ್ ಗಾಂಧಿ ಇ.ಡಿ ಕಚೇರಿಗೆ ಹಾಜರಾಗಬೇಕೆಂದು ಸೂಚಿಸಿದೆ. ಆದರೆ ರಾಹುಲ್ ಗಾಂಧಿ ವಿದೇಶದಲ್ಲಿದ್ದು, ತಮಗೆ ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ವರದಿ ವಿವರಿಸಿದೆ.
ಆಡಳಿತಾರೂಢ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡರನ್ನು ಗುರಿಯಾಗಿರಿಸಿಕೊಂಡು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆ 1942ರಲ್ಲಿ ಆರಂಭವಾಗಿತ್ತು. ಅಂದು ನ್ಯಾಷನಲ್ ಹೆರಾಲ್ಡ್ ಅನ್ನು ಬ್ರಿಟಿಷರು ಹತ್ತಿಕ್ಕಲು ಪ್ರಯತ್ನಿಸಿದ್ದು, ಇಂದು ಮೋದಿ ಸರ್ಕಾರ ಕೂಡಾ ಇ.ಡಿಯನ್ನು ಬಳಸಿಕೊಂಡು ಹತ್ತಿಕ್ಕುತ್ತಿರುವುದಾಗಿ ಸುರ್ಜೇವಾಲಾ ಆರೋಪಿಸಿದ್ದಾರೆ.