ವಿಜಯಪುರ : ”ಪ್ರಧಾನಿ ನರೇಂದ್ರ ಮೋದಿ ಅವರ ರಂಗುರಂಗಿನ ಭಾಷಣದಿಂದ ಬಡವರ ಖಾಲಿ ಹೊಟ್ಟೆಗಳು ತುಂಬುವುದಿಲ್ಲ” ಎಂದು ಕಾಂಗ್ರೆಸ್ ನಾಯಕಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
ಸರಿ ಸುಮಾರು ಎರಡು ವರ್ಷಗಳ ಬಳಿಕ ಚುನಾವಣಾ ಪ್ರಚಾರ ಕಣಕ್ಕೆ ಇಳಿದ ಸೋನಿಯಾ ಗಾಂಧಿ ಅವರು ಇಂದಿಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಾ, “ಮೋದಿ ಜೀ ಅವರಿಗೆ ತಾನೋರ್ವ ಅತ್ಯುತ್ತಮ ಭಾಷಣಕಾರ ಎಂಬ ಬಗ್ಗೆ ಹೆಮ್ಮೆ ಇದ್ದಂತಿದೆ. ನಾನದನ್ನು ಒಪ್ಪುತ್ತೇನೆ. ಅವರೊಬ್ಬ ನಟನ ಹಾಗೆ ಮಾತನಾಡುತ್ತಾರೆ; ಅವರ ಭಾಷಣಗಳಿಂದ ಒಂದೊಮ್ಮೆ ದೇಶದ ಬಡಜನರ ಹೊಟ್ಟೆ ತುಂಬುವುದಾದರೆ ನಾನು ನಿಜಕ್ಕೂ ಸಂತಸ ಪಡುತ್ತೇನೆ; ಆದರೆ ಭಾಷಣಗಳಿಂದ ಯಾವತ್ತೂ ಹೊಟ್ಟೆ ತುಂಬುವುದಿಲ್ಲ ಎನ್ನುವುದು ಪರಮ ಸತ್ಯ. ಹಸಿದ ಬಡ ಜನರಿಗೆ ಆಹಾರ ಬೇಕೇ ಹೊರತು ರಂಗುರಂಗಿನ ಭಾಷಣ ಅಲ್ಲ” ಎಂದು ಹೇಳಿದರು.
ಪ್ರಧಾನಿ ಮೋದಿ ವಿರುದ್ಧ ತನ್ನ ವಾಕ್ ದಾಳಿಯನ್ನು ಮುಂದುವರಿಸುತ್ತಾ ಸೋನಿಯಾ ಅವರು “ಬರ ಪೀಡಿತ ಎಲ್ಲ ರಾಜ್ಯಗಳಿಗೆ ಕೇಂದ್ರ ಸರಕಾರ ಸೂಕ್ತ ಪರಿಹಾರ ನೀಡಿದೆ; ಆದರೆ ಕರ್ನಾಟಕಕ್ಕೆ ಮಾತ್ರ ನೀಡಿಲ್ಲ. ಕೇಂದ್ರದ ಈ ನೀತಿಯಿಂದ ಕರ್ನಾಟಕ ರಾಜ್ಯದ ರೈತರ ಗಾಯಕ್ಕೆ ಉಪ್ಪು ಸವರಿದಂತಾಗಿದೆ; ನಾನು ಮೋದಿ ಅವರನ್ನು ಕೇಳುತ್ತೇನೆ : ಇದೇ ನಿಮ್ಮ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಆಗಿದೆಯಾ?’ ಎಂದು ಹೇಳಿದರು.
“ಪ್ರಧಾನಿ ಮೋದಿ ಅವರು ‘ಕಾಂಗ್ರೆಸ್ ಮುಕ್ತ ಭಾರತ’ ಬಗ್ಗೆ ಅತಿಯಾದ ವಾಂಛೆ ಬೆಳೆಸಿಕೊಂಡಿದ್ದಾರೆ. ಕಾಂಗ್ರೆಸ್ ಮುಕ್ತ ಭಾರತ ಬಿಡಿ; ಮೋದಿ ಅವರು ತಮ್ಮ ಎದುರು ನಿಲ್ಲುವ ಯಾರನ್ನೂ ಸಹಿಸಿಕೊಳ್ಳುವುದಿಲ್ಲ” ಎಂದು ಸೋನಿಯಾ ಆರೋಪಿಸಿದರು.
ಜನರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕೆಂದು ಕೋರಿದ ಸೋನಿಯಾ, “ಕಾಂಗ್ರೆಸ್ ಕರ್ನಾಟಕದ ಅಭಿವೃದ್ಧಿಗಾಗಿ ಶ್ರಮಿಸಿದೆ. ಕೇಂದ್ರ ಸರಕಾರ ತನ್ನ ಅಧಿಕಾರದಲ್ಲಿಲ್ಲದ ರಾಜ್ಯಗಳತ್ತ ಪಕ್ಷಪಾತ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಕರ್ನಾಟಕವನ್ನು ಅನೇಕ ಅಭಿವೃದ್ಧಿ ವಿಷಯಗಳಲ್ಲಿ ನಂಬರ್ ಒನ್ ರಾಜ್ಯವನ್ನಾಗಿ ಮಾಡಿದೆ; ನಾವೆಲ್ಲ ಜತೆಗೂಡಿ ಈ ಸಾಧನೆಯನ್ನು ಮುಂದುವರಿಸೋಣ’ ಎಂದು ಹೇಳಿದರು.