ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅನಾರೋಗ್ಯ ಕಾರಣದಿಂದಾಗಿ ದಿಲ್ಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೊಟ್ಟೆನೋವಿನಿಂದ ಬಳಲುತ್ತಿದ್ದ ಅವರನ್ನು ಶುಕ್ರವಾರ ಸಂಜೆ ವೇಳೆಗೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
ಶುಕ್ರವಾರ ರಾತ್ರಿಯಿಡೀ ಅವರ ಆರೋಗ್ಯದ ಮೇಲೆ ನಿಗಾ ವಹಿಸಲಾಗುವುದು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ತಾಯಿಯ ಆರೋಗ್ಯದ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, “ಶುಕ್ರವಾರ ಅಮ್ಮ ಶಿಮ್ಲಾಕ್ಕೆ ತೆರಳಿದ್ದಾಗ ಅವರಿಗೆ ಉದರ ಬಾಧೆ ಕಾಡಿದೆ. ಹಾಗಾಗಿ ಅವರನ್ನು ದಿಲ್ಲಿಗೆ ಕರೆತರಲಾಗಿದ್ದು, ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ’ ಎಂದಿದ್ದಾರೆ.
ಅನಾರೋಗ್ಯದಿಂದಾಗಿ ಸೋನಿಯಾ ಅವರು ಆಸ್ಪತ್ರೆಗೆ ದಾಖ ಲಾಗುತ್ತಿರುವುದು ಈ ವರ್ಷದಲ್ಲಿ ಇದು ಮೂರನೇ ಬಾರಿ. ಜನವರಿಯಲ್ಲಿ ಜ್ವರ ಹಾಗೂ ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಅನಂತರ ಮೇ ತಿಂಗಳಲ್ಲಿ ಆಹಾರ ವ್ಯತ್ಯಯದಿಂದಾಗಿ ಪುನಃ ಆಸ್ಪತ್ರೆಯಲ್ಲಿ ಕೆಲ ದಿನ ಚಿಕಿತ್ಸೆ ಪಡೆದಿದ್ದರು.