ಜೀ ಕನ್ನಡ ವಾಹಿನಿಯ “ಉಘೇ ಉಘೇ ಮಾದೇಶ್ವರ’ ಧಾರಾವಾಹಿಯಲ್ಲಿ ಗೀತರಚನೆಕಾರ ನಾಗೇಂದ್ರ ಪ್ರಸಾದ್ ಅವರು ಖಳನಟರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರತಿ ಶನಿವಾರ ಹಾಗೂ ಭಾನುವಾರ ಸಂಜೆ 6 ಕ್ಕೆ ಪ್ರಸಾರವಾಗುವ ಈ ಧಾರಾವಾಹಿಯಲ್ಲಿ ಅವರು ಓಜಯ್ಯ ಎಂಬ ಪ್ರಮುಖ ಖಳಟನರಾಗಿ ನಟಿಸುತ್ತಿದ್ದಾರೆ.
ಓಜಯ್ಯ ಒಬ್ಬ ದುಷ್ಟ ಬುದ್ಧಿಯ ಶಿಕ್ಷಕ. ಶಿಷ್ಯಂದಿರಲ್ಲಿ ತಾರತಮ್ಯ ಮಾಡುತ್ತ ಜಾತಿ ಭೇದ ಮೆರೆಯುವ ವ್ಯಕ್ತಿ. ವಿಧವೆಯೊಬ್ಬಳು ತನ್ನ ಮಗನನ್ನು ಗುರುಕುಲಕ್ಕೆ ಸೇರಿಸಲು ಬಂದಾಗ ಅವಳ ಮೇಲೆ ಕಣ್ಣಾಯಿಸುವ ದುಷ್ಟ. ಆಮೇಲೆ ಏನೆಲ್ಲಾ ನಡೆಯುತ್ತದೆ ಎಂಬುದು ಧಾರಾವಾಹಿಯ ಸಾರಾಂಶ. ಇಲ್ಲಿ ಅನೇಕ ಪವಾಡ ದೃಶ್ಯಗಳೂ ಇವೆ.
ಆ ಸಾಲಿಗೆ ಸತ್ತ ಬಾಲಕನನ್ನು ಬದುಕಿಸುವ ಪವಾಡವೂ ಇದೆ. ಅದೇ ಓಜಯ್ಯನ ಸಾಲಿನ ಪ್ರಮುಖ ಘಟ್ಟ. ಖಳನಟನಾಗಿ ಕಾಣಿಸಿಕೊಳ್ಳುತ್ತಿರುವ ನಾಗೇಂದ್ರ ಪ್ರಸಾದ್ ಪ್ರಕಾರ, ಯಾವುದೇ ಪಾತ್ರವಿರಲಿ, ನಟನಿಗೆ ಅದು ಮುಖ್ಯ. ನಟಿಸಲೇಬೇಕು ಎಂದು ತೀರ್ಮಾನಿಸಿದ ಮೇಲೆ, ಕಲಾವಿದನಿಗೆ ಒಳ್ಳೆಯ ಪಾತ್ರ, ಕೆಟ್ಟ ಪಾತ್ರ ಎಂಬ ಭೇದವಿರಬಾರದು.
ಖಳನಟನ ಪಾತ್ರ ನಿರ್ವಹಿಸುವುದು ಸವಾಲಿನ ಕೆಲಸ. ಇಲ್ಲಿ ಆ ಓಜಯ್ಯನ ಪಾತ್ರಕ್ಕೆ ಸಾಕಷ್ಟು ಬದಲಾವಣೆ ಇದೆ. ಉಡುಪು, ಭಾಷೆ, ಆಂಗಿಕ ಅಭಿನಯ ಎಲ್ಲವನ್ನೂ ಎಚ್ಚರಿಕೆಯಿಂದ ಕಾಳಜಿ ವಹಿಸಿ ನಿರ್ವಹಿಸಿದ್ದಾಗಿ ಹೇಳುವ ಅವರು, ಮಾದೇಶ್ವರ ಮಹಾಕಾವ್ಯ ನನ್ನ ಇಷ್ಟದ ಕಾವ್ಯ. ಅದರಲ್ಲಿ ನಾನು ನಟಿಸುತ್ತಿರುವುದು ಖುಷಿ ಕೊಟ್ಟಿದೆ’ ಎನ್ನುತ್ತಾರೆ ನಾಗೇಂದ್ರ ಪ್ರಸಾದ್.
ಅಂದಹಾಗೆ, ಇಲ್ಲಿ ನಾಗೇಂದ್ರ ಪ್ರಸಾದ್ ಅವರ ಪತ್ನಿ ಪಾತ್ರದಲ್ಲಿ ಕಿರುತೆರೆ ನಟಿ ಸಂಜನಾ ಕಾಣಿಸಿಕೊಂಡರೆ, ಉಳಿದಂತೆ ಶೃಂಗೇರಿ ರಾಮಣ್ಣ, ಕೀರ್ತಿ ಭಟ್, ಮಾ.ಶ್ರೇಯಸ್, ಮಾ. ವಿಶಾಲ… ಇತರರು ನಟಿಸುತ್ತಿದ್ದಾರೆ. ಧಾರಾವಾಹಿಗೆ ನವೀನ್ ಕೃಷ್ಣ ನಿರ್ದೇಶಕರು. ಯುಗಾದಿ ಹಬ್ಬದ ದಿನಂದು ಓಜಯ್ಯನ ಪಾತ್ರ ಎಂಟ್ರಿಕೊಟ್ಟಿದೆ.