ಸಿಂಬು ಆಗ ಬರಬಹುದು, ಈಗ ಬರಬಹುದು ಎಂದು ಎಲ್ಲರೂ ಕಾಯುತ್ತಲೇ ಇದ್ದರು. ಹೊರಗೆ ಜೋರು ಮಳೆ. ಅದೇ ಕಾರಣಕ್ಕೆ ಸಿಂಬು ಬರುವುದು ತಡವಾಗುತ್ತಿದೆ ಎಂದು ಎಲ್ಲರೂ ಸಮಾಧಾನ ಪಟ್ಟುಕೊಳ್ಳುವಷ್ಟರಲ್ಲಿ, ಸಿಂಬು ಬರುವುದಿಲ್ಲ, ಅವರಿಗೆ ಅನಾರೋಗ್ಯ ಎಂಬ ಸುದ್ದಿ ಬಂತು. ಇನ್ನು ಅವರು ಬರುವುದಿಲ್ಲ ಎಂದು ಗೊತ್ತಾಗುತ್ತಿದ್ದಂತೆಯೇ ಸಮಾರಂಭ ಶುರುವಾಯಿತು.
“ಇರುವುದೆಲ್ಲವ ಬಿಟ್ಟು’ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವುದಕ್ಕೆ ಅಂದು ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾ ಮುಖ್ಯ ಅತಿಥಿಗಳಾಗಿ ಬಂದಿದ್ದರು. ಜೊತೆಗೆ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಮೇಘನಾ ರಾಜ್ ಸಹ ಇದ್ದರು. ಸರ್ಜಾ ಫ್ಯಾಮಿಲಿಯ ಮೂವರು ಸದಸ್ಯರು ಒಂದೇ ವೇದಿಕೆಯಲ್ಲಿ ನಿಂತು ಶ್ರೀಧರ್ ಸಂಭ್ರಮ್ ಸಂಯೋಜಿಸಿರುವ ಹಾಡುಗಳನ್ನು ಬಿಡುಗಡೆ ಮಾಡಿದರು. ಜೊತೆಗೆ ಸುಂದರ್ ರಾಜ್, ಪ್ರಮೀಳಾ ಜೋಷಾಯ್, ಉಮೇಶ್ ಬಣಕಾರ್ ಮುಂತಾದವರು ಹಾಜರಿದ್ದರು.
ಈ ಚಿತ್ರವು ಪ್ರಮುಖವಾಗಿ ಐದು ಪಾತ್ರಗಳ ಸುತ್ತ ಸುತ್ತುತ್ತದಂತೆ. ಚಿತ್ರವನ್ನು ನಿರ್ದೇಶಿಸಿರುವ ಕಾಂತ ಕನ್ನಲ್ಲಿ ಮಾತನಾಡಿ, “ನಾವು ಜೀವನದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಲೇ ಇರುತ್ತೇವೆ. ಆ ಎಲ್ಲಾ ಸವಾಲುಗಳನ್ನು ಎದುರಿಸಿ, ನಮ್ಮ ಗುರಿಯನ್ನು ಮುಟ್ಟಬೇಕು. ಈ ಸವಾಲುಗಳು ಮತ್ತು ಗುರಿ ಸಾಧನೆ ಸುತ್ತ ಚಿತ್ರ ಸುತ್ತುತ್ತದೆ. ಈ ಚಿತ್ರದಲ್ಲಿ ಐದು ಮುಖ್ಯ ಪಾತ್ರಗಳಿವೆ. ಚಿತ್ರಕ್ಕೆ “ಇರುವೆ ಬಿಟ್ಟುಕೊಳ್ಳುವುದೇ ಜೀವನ’ ಎಂಬ ಸಬ್‌ಟೈಟಲ್ ಇದೆ’ ಎಂದು ಹೇಳಿದರು.
ಇನ್ನು ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾ ಇಬ್ಬರೂ ಮೇಘನಾ ರಾಜ್‌ಗೆ ಮತ್ತು ಚಿತ್ರತಂಡದವರಿಗೆ ಶುಭ ಕೋರಿದರು. ಮದುವೆಯ ನಂತರ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಇಬ್ಬರೂ ಮೊದಲ ಬಾರಿಗೆ ಒಟ್ಟಾಗಿ ಸಿನಿಮಾ ಕಾರ್ಯಕ್ರಮಕ್ಕೆ ಆಗಮಿಸಿದ್ದರಿಂದ, ಅವರಿಂದ ಕಟ್ ಮಾಡಿಸಿ, ಗೌರವಿಸಲಾಯಿತು.
ಈ ಚಿತ್ರವನ್ನು ಕಾಂತ ಕನ್ನಲ್ಲಿ ನಿರ್ದೇಶಿಸಿರುವುದಷ್ಟೇ ಅಲ್ಲ, ಚಿತ್ರಕ್ಕೆ ಕಥೆ, ಚಿತ್ರಕಥೆಯನ್ನೂ ರಚಿಸಿದ್ದಾರೆ. ಚಿತ್ರದಲ್ಲಿ ಮೇಘನಾ ರಾಜ್ ಜೊತೆಗೆ ತಿಲಕ್, ಶ್ರೀ ಮುಂತಾದವರು ನಟಿಸಿದ್ದಾರೆ. ಈ ಚಿತ್ರವನ್ನು ದೇವರಾಜ್ ದಾವಣಗೆರೆ ಎನ್ನುವವರು ನಿರ್ಮಿಸುತ್ತಿದ್ದು, ಇದವರ ಮೊದಲ ಚಿತ್ರ.