ಮಾರ್ಟಿನ್ ಅಭಿಮಾನಿಗಳ ಕುತೂಹಲ ತಣಿಸಿದೆ. ಒಂದು ಸ್ಟಾರ್ ಸಿನಿಮಾದಲ್ಲಿ ಏನೆಲ್ಲಾ ಅಂಶಗಳು ಇರಬೇಕು ಆ ಎಲ್ಲಾ ಅಂಶಗಳು ಇಲ್ಲಿವೆ. ಸಿನಿಮಾದ ಕಥೆಯೇ ಇಲ್ಲಿ ಹೈಲೈಟ್. ಎಲ್ಲ ಭಾಷೆಗೂ ಒಪ್ಪುವಂಥ ಕಥೆಯನ್ನೇ ನಿರ್ಮಪಕರು ಆಯ್ಕೆ ಮಾಡಿದ್ದಾರೆ. ಕಥೆಯಲ್ಲಿ ಬರುವ ಟ್ವಿಸ್ಟ್ ಆ್ಯಂಡ್ ಟರ್ನ್ ಗಳೇ ಸಿನಿಮಾದ ಪ್ಲಸ್‌ಗಳು.
ಪ್ರೇಕ್ಷಕನ ನಿರೀಕ್ಷಿಗೆ ನಿಲುಕದೆ ಮಗ್ಗಲು ಬದಲಿಸುತ್ತಾ ಸಿನಿಮಾ ಸಾಗುತ್ತದೆ. ಚಿತ್ರದ ಅದ್ಧೂರಿತನದಲ್ಲಿ ಗ್ರಾಫಿಕ್ಸ್ ಕೊಡುಗೆ ಮಹತ್ವದ್ದು. ಆದರೆ ಇದು ಇನ್ನೊಂದಿಷ್ಟು ಗುಣಮಟ್ಟದಲ್ಲಿ ಇದ್ದಿದ್ದರೆ ಮಾರ್ಟಿನ್ ವೈಭವ ಹೆಚ್ಚುತ್ತಿತ್ತು. ಸಿನಿಮಾದ ಕೊನೆಯಲ್ಲೊಂದು ಟ್ವಿಸ್ಟ್ ಕೂಡಾ ಇದೆ. ಇಲ್ಲಿ ಆ್ಯಕ್ಷನ್ ದೃಶ್ಯಗಳಿಗೆ ಹೆಚ್ಚಿನ ಮಹತ್ವವಿದೆ. ರೆಗ್ಯುಲರ್ ಶೈಲಿ ಬಿಟ್ಟ ಆಕ್ಷನ್ ದೃಶ್ಯಗಳನ್ನು ಇಲ್ಲಿ ನೋಡಬಹುದು. ನಿರ್ಮಾಪಕ ಉದಯ್ ಮೆಹ್ತಾ ಆ್ಯಕ್ಷನ್‌ಗೆ ಸ್ವಲ್ಪ ಹೆಚ್ಚೇ ಖರ್ಚು ಮಾಡಿದ್ದಾರೆ ಎನ್ನಬಹುದು. ಇಡೀ ಸಿನಿಮಾವನ್ನು ಅದ್ದೂರಿಯಾಗಿ ಕಟ್ಟಿಕೊಡಬೇಕೆಂಬ ನಿರ್ಮಾಪಕರ ಸಂಕಲ್ಪ ತೆರೆಮೇಲೆ ಎದ್ದು ಕಾಣುತ್ತದೆ.
ಮಾರ್ಟಿನ್ ಒಂದು ಔಟ್ ಆ್ಯಂಡ್ ಔಟ್ ಆಕ್ಷನ್ ಸಿನಿಮಾ. ಮಾಸ್ ಮನಸುಗಳು ಖುಷಿಪಡುವ ಸನ್ನಿವೇಶಗಳು ಹೆಜ್ಜೆ ಹೆಜ್ಜೆಗೂ ಇಲ್ಲಿ ಸಿಗುತ್ತವೆ. ಚಿತ್ರದಲ್ಲಿ ಪಾಕಿಸ್ತಾನವಿದೆ. ಅಲ್ಲೊಬ್ಬ “ಇಂಡಿಯನ್’ ಎಂಬ ಟ್ಯಾಟೂ ಹಾಕಿಕೊಂಡು ಎಲ್ಲರ ಹುಟ್ಟಡಗಿಸುವ ಬಲಶಾಲಿ ಇದ್ದಾನೆ. ಜೊತೆಗೆ ಆತನಿಗೊಂದು ಕನ್ಫೂಶನ್ ಕೂಡಾ ಇದೆ. ಇದೆ ಕಥೆಯ ಮೂಲ ಮಂತ್ರ… ಆ ಕುತೂಹಲ ಏನೆಂಬುದನ್ನು ತೆರೆ ಮೇಲೆ ನೋಡಿದರೇನೆ ಚೆನ್ನ.
ಇನ್ನು ನಟನೆ ಬಗ್ಗೆ ಹೇಳುವುದಾದರೆ, ಧ್ರುವ ಸರ್ಜಾ ಅವರಿಗೆ ಇಲ್ಲಿ ಎರಡು ಶೇಡ್‌ನ ಪಾತ್ರ ಸಿಕ್ಕಿದೆ. ಇಡೀ ಸಿನಿಮಾವನ್ನು ಹೆಗಲ ಮೇಲೆ ಹೊತ್ತು ಸಾಗಿದವರೇ ಧ್ರುವ. ಆಕ್ಷನ್ ದೃಶ್ಯಗಳಲ್ಲಿ ಅಬ್ಬರಿಸಿರುವ ಅವರ ಎನರ್ಜಿಗೊಂದು ಮೆಚ್ಚುಗೆ ವ್ಯಕ್ತಪಡಿಸಲೇಬೇಕು. ಅವರ ಎರಡು ಭಿನ್ನ ಪಾತ್ರಗಳನ್ನು ಸಿನಿಮಾದಲ್ಲಿ ನೋಡಿದರೇನೆ ಮಜಾ.
ನಾಯಕಿ ವೈಭವಿ ಶಾಂಡಿಲ್ಯಗೆ ಹೆಚ್ಚಿನ ಅವಕಾಶ ಸಿಗದಿದ್ದರೂ, ಗ್ಲಾಮರಸ್ ಆಗಿ ಸಿನಿಮಾದಲ್ಲಿ ಬಂದು ಹೋಗುತ್ತಾರೆ. ಯಾವಾಗಲೂ ಕಾಮಿಡಿ ಮಾಡುವ ಚಿಕ್ಕಣ್ಣ ಇಲ್ಲಿ ಗಂಭೀರವಾಗಿ ಕಾಣಿಸಿಕೊಂಡಿರುವುದು ವಿಶೇಷ. ಉಳಿದಂತೆ ಅಚ್ಯುತ್, ಅನ್ವಿಶಿ, ನಿಕ್ತಿನ್ ಇತರರು ನಟಿಸಿದ್ದಾರೆ. ಸತ್ಯ ಹೆಗ್ಡೆ ಅವರ ಛಾಯಾಗ್ರಹಣ, ರವಿ ಬಸೂÅರ ಅವರ ಸಂಗೀತ ಚಿತ್ರಕ್ಕಿದೆ. ಒಟ್ಟಾರೆ ಆ್ಯಕ್ಷನ್ ಪ್ರಿಯರಿಗೆ ಹೇಳಿ ಮಾಡಿಸಿದ ಸಿನಿಮಾವಿದು.
ರವಿಪ್ರಕಾಶ್ ರೈ