Advertisement

B. S. Yediyurappa ಪುತ್ರ ಎಂದು ರಾಜ್ಯಾಧ್ಯಕ್ಷ ಸ್ಥಾನ ನೀಡಿಲ್ಲ: ವಿಜಯೇಂದ್ರ

01:17 AM Apr 17, 2024 | Team Udayavani |

ಬೆಂಗಳೂರು: ನಾನು ಬಿಎಸ್‌ವೈ ಪುತ್ರ ಎಂಬ ಬಗ್ಗೆ ಹೆಮ್ಮೆ ಇದೆ. ಆದರೆ ಅದೇ ಕಾರಣಕ್ಕೆ ವರಿಷ್ಠರು ನನಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿಲ್ಲ. ಈಶ್ವರಪ್ಪನವರ ಮಗನಿಗೆ ಈ ಬಾರಿ ಟಿಕೆಟ್‌ ಕೊಡಲಿಲ್ಲ, ಅಷ್ಟಕ್ಕೆ ಅವರ ರಾಜಕೀಯ ಭವಿಷ್ಯ ಮುಗಿಯಿತಾ? ನನಗೂ ವರುಣದಲ್ಲಿ ಟಿಕೆಟ್‌ ನಿರಾಕರಿಸಿದ್ದರು, ಎಂಎಲ್‌ಸಿ ಅವಕಾಶ ತಪ್ಪಿತ್ತು. ಆ ಎಲ್ಲ ಸಂದರ್ಭದಲ್ಲಿ ನಾನು ಹೇಗೆ ವರ್ತಿಸಿದ್ದೇನೆ, 10-12 ವರ್ಷಗಳಿಂದ ಪಕ್ಷದಲ್ಲಿ ಹೇಗೆ ತೊಡಗಿಕೊಂಡಿದ್ದೇನೆ ಎಂಬ ಕಾರಣಕ್ಕೆ ಹುದ್ದೆ ದೊರಕಿದೆಯೇ ವಿನಾ ಇದು ಕುಟುಂಬ ರಾಜಕಾರಣ ಅಲ್ಲ.

Advertisement

ಇದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ರಾಜಕೀಯ ಟೀಕಾಕಾರರಿಗೆ ನೀಡಿರುವ ದಿಟ್ಟ ಪ್ರತಿಕ್ರಿಯೆ. “ಉದಯವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಎಲ್ಲ ಅಂಶಗಳನ್ನು ವಿವರವಾಗಿ ತೆರೆದಿರಿಸಿದ್ದಾರೆ.

ವಿಧಾನಸಭಾ ಚುನಾವಣೆ ಸೋತ ಬಳಿಕ ಈಗ ಬಿಜೆಪಿಗೆ ಏಕೆ ಮತ ಹಾಕಬೇಕು ಎಂದು ಜನರಿಗೆ ಮನವೊಲಿಸುತ್ತೀರಿ?
ಈ ಹಿಂದಿನ ನಮ್ಮ ನಡವಳಿಕೆಗಳಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆಯಾದದ್ದು ನಿಜ. ಆದರೆ ಅದನ್ನು ಈಗಿನ ಲೋಕಸಭಾ ಚುನಾವಣೆ ಜತೆಗೆ ತುಲನೆ ಮಾಡಲು ಸಾಧ್ಯವಿಲ್ಲ. ಇದರ ಮಾನದಂಡವೇ ಬೇರೆ. ಹಳ್ಳಿ ಹಳ್ಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪರ ಅಲೆ ಇದೆ.

ಈಶ್ವರಪ್ಪನವರಿಗೆ ಹಾವೇರಿಯಿಂದ ಸ್ಪರ್ಧಿಸಿ ಅಂದೆ, ಒಲ್ಲೆ ಅಂದರು!
ನನಗೆ ಹಾವೇರಿ ವಾಸ್ತವ ಏನೆಂದು ಗೊತ್ತಿತ್ತು. ನಿಮ್ಮ ಮಗನಿಗೆ ಟಿಕೆಟ್‌ ತಪ್ಪಿದರೆ ನೀವೇ ಸ್ಪರ್ಧಿಸಿ ಎಂದು ಈಶ್ವರಪ್ಪನವರಿಗೆ ಸಲಹೆ ಕೊಟ್ಟಿದ್ದೆ. ಇಲ್ಲ, ಹಾಗೆ ಮಾಡಿದರೆ ನಮ್ಮ ಕುಟುಂಬ ಒಡೆದು ಹೋಗುತ್ತದೆ ಎಂದು ಅವರೇ ಹೇಳಿದ್ದರು. ಅಲ್ಲದೆ ತಮ್ಮ ಮಗನಿಗೆ ಟಿಕೆಟ್‌ ಕೊಡಿಸುವ ಜವಾಬ್ದಾರಿ ನಿನ್ನದು ಎಂದಿದ್ದರು. ನಾನು ನನ್ನ ಪ್ರಯತ್ನ ಮಾಡಿದೆ, ವರಿಷ್ಠರು ಒಪ್ಪಲಿಲ್ಲ. ಕಡೆಗೆ ಈಶ್ವರಪ್ಪನವರನ್ನು ರಾಜ್ಯಸಭೆಗೆ ಆರಿಸಿ ಎಂದು ಸಲಹೆ ಕೊಟ್ಟೆ. ಅದಕ್ಕೂ ಪಕ್ಷ ಒಪ್ಪಲಿಲ್ಲ. ನಾನೇನು ಮಾಡಲಿ?

ಹಾಗಾದರೆ ರಾಜ್ಯದ ಗ್ಯಾರಂಟಿ ಯೋಜನೆಗಳು ಯಾವುದೇ ಪರಿಣಾಮ ಬೀರುವುದಿಲ್ಲವೇ?
ಗ್ಯಾರಂಟಿ ಯೋಜನೆಗಳ ಸರಿ-ತಪ್ಪುಗಳ ಬಗ್ಗೆ ಚರ್ಚೆ ಬಯಸುವುದಿಲ್ಲ. ಆದರೆ ಹತ್ತು ತಿಂಗಳಲ್ಲಿ ರಾಜ್ಯದ ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ನಿಂತಿವೆ. ಜನರು ಬದುಕು ಕಟ್ಟಿಕೊಳ್ಳುವಂಥ ಒಂದೇ ಒಂದು ಯೋಜನೆಯನ್ನು ಕಾಂಗ್ರೆಸ್‌ ಸರಕಾರ ಜಾರಿಗೆ ತಂದಿಲ್ಲ. ಶಾಸಕರಿಗೆ ಅನುದಾನ ಕೊಟ್ಟಿಲ್ಲ.

Advertisement

ಹಾಗಾದರೆ ಸ್ವತಃ ಪ್ರಧಾನಿಯವರೇ “ಮೋದಿ ಕಾ ಗ್ಯಾರಂಟಿ’ ಎಂಬ ಪದ ಬಳಸುವಂತೆ ಕಾಂಗ್ರೆಸ್‌ ಮಾಡಿಲ್ಲವೇ? ಅದು ಗ್ಯಾರಂಟಿಯ ಯಶಸ್ಸಲ್ಲವೇ?
ಹೌದು. ನಾವು “ಮೋದಿ ಕಾ ಗ್ಯಾರಂಟಿ’ ಎನ್ನುತ್ತಿದ್ದೇವೆ. ಹತ್ತು ವರ್ಷಗಳಲ್ಲಿ ಮೋದಿ ಸರಕಾರ ಯಾವ ಭರವಸೆ ನೀಡಿತ್ತೋ ಅದೆಲ್ಲವನ್ನೂ ಈಡೇರಿಸಿದೆ. ನಾವು ಪ್ರಣಾಳಿಕೆಯಲ್ಲಿ ಕೊಟ್ಟ ವಾಗ್ಧಾನವನ್ನು ಈಡೇರಿಸುತ್ತೇವೆ. ಮೋದಿ ಗ್ಯಾರಂಟಿ ಎಂದರೆ ಅನುಷ್ಠಾನ ಖಚಿತ.

ಆ ರೀತಿ ಹೆದರಿಸುತ್ತಿದ್ದಾರೆ ಎಂದು ಆರೋಪಿಸು ವುದಕ್ಕೆ ನಿಮ್ಮ ಸಾಕ್ಷಿ ಇದೆಯೇ?
ಹೌದು. ಮಾಗಡಿ ಶಾಸಕ ಬಾಲಕೃಷ್ಣ ಬಹಿರಂಗ ವಾಗಿಯೇ ಈ ರೀತಿ ಮತದಾರರನ್ನು ಬೆದರಿಸಿದ್ದಾರೆ. ಕಾಂಗ್ರೆಸ್‌ನ ವರಿಷ್ಠರು ತಮ್ಮ ಶಾಸಕರ ಮೂಲಕ ಹೇಳಿಸಿ ರಾಜ್ಯದ ಮತದಾರರನ್ನು ಬ್ಲ್ಯಾಕ್‌ ಮೇಲ್‌ ಮಾಡಿಸುತ್ತಿದ್ದಾರೆ.

ಈ ಫ‌ಲಿತಾಂಶದ ಯಶಸ್ಸು ಅಥವಾ ವೈಫ‌ಲ್ಯ ನಿಮ್ಮ ಮೇಲೂ ಪರಿಣಾಮ ಬೀರುವುದಿಲ್ಲವೇ?
ಈ ಚುನಾವಣೆ ಮೋದಿಯವರಿಗೆ ಮುಖ್ಯವೋ, ವಿಜಯೇಂದ್ರ ಅವರಿಗೆ ಮುಖ್ಯವೋ ಎಂಬುದಕ್ಕಿಂತ ಈ ದೇಶದ ಜನರಿಗೆ ಮುಖ್ಯ. ರಾಷ್ಟ್ರೀಯ ನಾಯಕರು ಸಣ್ಣ ವಯಸ್ಸಿನಲ್ಲಿ ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ. ಅತೀ ಹೆಚ್ಚು ಸ್ಥಾನ ಗಳಿಸುವ ಜತೆಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಂಪೂರ್ಣ ಬಹುಮತದಿಂದ ಪಕ್ಷವನ್ನು ಗೆಲ್ಲಿಸಿಕೊಂಡು ಬರುವೆ. ಅದರಲ್ಲಿ ನಾನು ಯಶಸ್ವಿಯಾಗುತ್ತೇನೆ.

ಲೋಕಸಭಾ ಫ‌ಲಿತಾಂಶ ಏನೇ ಆದರೂ ನಿಮ್ಮ ಮೇಲೆ ಪರಿಣಾಮ ಬೀರುವುದಿಲ್ಲವೇ?
ಫ‌ಲಿತಾಂಶ ಉಲ್ಟಾ ಆಗುವುದಕ್ಕೆ ಸಾಧ್ಯವೇ ಇಲ್ಲ. ಪಕ್ಷದ ಅಧ್ಯಕ್ಷನಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿ ಕಾರ್ಯಕರ್ತರ ಭಾವನೆ ಅರಿತು ಹೇಳುತ್ತಿದ್ದೇನೆ. 28ಕ್ಕೆ 28 ಕ್ಷೇತ್ರ ಗೆಲ್ಲುವಂಥ ವಾತಾವರಣ ಇದೆ.

ರಾಜ್ಯದಲ್ಲಿ ಮೈತ್ರಿಯಾಗಿದೆ. ಜೆಡಿಎಸ್‌ನಿಂದ ನಿಮಗೆ ಸಹಾಯವೋ ಅಥವಾ ನಿಮ್ಮಿಂದ ಜೆಡಿಎಸ್‌ಗೆ ಸಹಾಯವಾಗುತ್ತದೋ?
ನಮ್ಮಿಂದ ಅವರಿಗೆ, ಅವರಿಂದ ನಮಗೆ ಸಹಾಯವಾಗುತ್ತದೆ.

ಹೊಂದಾಣಿಕೆ ಬಳಿಕ ಟಿಕೆಟ್‌ ಹಂಚಿಕೆ ಮಾಡುವ ವಿಚಾರದಲ್ಲಿ ಏಕೆ ತಡವಾಯಿತು?
ತಡವಾಯಿತು ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಅದರರ್ಥ ನಮ್ಮಲ್ಲಿ ಗೊಂದಲ ಇತ್ತು ಎಂದಲ್ಲ. ಜೆಡಿಎಸ್‌ನವರು ಕೋಲಾರ ಕೇಳಿದ್ದರು. ಆದರೆ ಅಲ್ಲಿ ನಮ್ಮ ಹಾಲಿ ಸಂಸದರಿದ್ದರು. ಇಲ್ಲಿ ಮಾತ್ರ ಕೊಂಚ ವ್ಯತ್ಯಾಸವಿತ್ತು. ಈಗ ಎಲ್ಲವೂ ಬಗೆಹರಿದಿದೆ.

ಈ ಮೈತ್ರಿಯ ಅವಧಿ ಎಷ್ಟು?
ಈ ಮೈತ್ರಿ ಮುಂದುವರಿಯಬೇಕೆಂಬ ಅಪೇಕ್ಷೆ ಎರಡೂ ಪಕ್ಷದ ಕಾರ್ಯಕರ್ತರಿಗೆ ಇದೆ. ಇದು ತಾತ್ಕಾಲಿಕ ಎಂದು ನಾನು ಭಾವಿಸುವುದಿಲ್ಲ.

ಟಿಕೆಟ್‌ ಹಂಚಿಕೆಯಲ್ಲಿ ನಡೆದಿದ್ದೇನು?
ಯಡಿಯೂರಪ್ಪ ಒಬ್ಬ ಮಗನನ್ನು ಎಂಪಿ ಮಾಡಿದ್ದಾರೆ. ಇನ್ನೊಬ್ಬನನ್ನು ರಾಜ್ಯಾಧ್ಯಕ್ಷನಾಗಿ ಮಾಡಿದರು. ಹೀಗಾಗಿ ನಮ್ಮ ಮಕ್ಕಳಿಗೂ ಟಿಕೆಟ್‌ ಸಿಗುತ್ತದೆ ಎಂಬ ಭಾವನೆ ಕೆಲವರಿಗೆ ಇತ್ತು. ಆದರೆ ನಾನು ಯಡಿಯೂರಪ್ಪನವರ ಮಗ ಎಂಬ ಒಂದೇ ಕಾರಣಕ್ಕೆ ಪಕ್ಷ ನನಗೆ ಈ ಜವಾಬ್ದಾರಿ ನೀಡಿಲ್ಲ. 10-12 ವರ್ಷದಿಂದ ಪಕ್ಷದ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಇದನ್ನು ವರಿಷ್ಠರು ಕೂಡ ಸ್ಪಷ್ಟಪಡಿಸಿದ್ದಾರೆ. ಪಕ್ಷಕ್ಕೆ ಕೊಟ್ಟ ಕೊಡುಗೆ ಏನು ಎಂಬುದನ್ನು ಆಧಾರವಾಗಿಟ್ಟು ಈಶ್ವರಪ್ಪ ಹಾಗೂ ಉಳಿದವರ ಮಕ್ಕಳಿಗೆ ಟಿಕೆಟ್‌ ಕೊಟ್ಟಿಲ್ಲ.

ಕುರುಬರು ಸೇರಿದಂತೆ ಕೆಲವು ಪ್ರಮುಖ ಜಾತಿಗಳಿಗೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲವಲ್ಲ?
ಈ ವಾದ ಒಪ್ಪಿಕೊಳ್ಳುತ್ತೇನೆ. ಆದರೆ ಲೋಕಸಭಾ ಚುನಾವಣೆಯಲ್ಲಿ ಜಾತಿ, ಉಪಜಾತಿ ನೋಡುತ್ತ ಹೋದರೆ 28 ಕ್ಷೇತ್ರ ಸಾಕಾಗುವುದಿಲ್ಲ.

-ರಾಘವೇಂದ್ರ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next