Advertisement

ಯಾರದ್ದೋ ತಪ್ಪು, ಶಿಕ್ಷಕರಿಗೆ ಶಿಕ್ಷೆ; ಅರ್ಹತೆಯಿದ್ದರೂ ಸಿಗದ ವರ್ಗಾವಣೆ ಅವಕಾಶ

01:48 AM Dec 11, 2021 | Team Udayavani |

ಉಡುಪಿ: ರಾಜ್ಯದಲ್ಲಿ ಸರಕಾರಿ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಸೇವಾ ಜ್ಯೇಷ್ಠತೆ ಆಧಾರದಲ್ಲಿ ವರ್ಗಾ ವಣೆ ಪಟ್ಟಿಯಲ್ಲಿ ಹೆಸರಿದ್ದರೂ ತಾಂತ್ರಿಕ ಸಮಸ್ಯೆಯಿಂದ ಅದೆಷ್ಟೋ ಶಿಕ್ಷಕರಿಗೆ ವರ್ಗಾವಣೆ ಸಾಧ್ಯವಾಗುತ್ತಿಲ್ಲ.

Advertisement

ವರ್ಗಾವಣೆಗಾಗಿ 72 ಸಾವಿರಕ್ಕೂ ಅಧಿಕ ಶಿಕ್ಷಕರು ಅರ್ಜಿ ಸಲ್ಲಿಸಿದ್ದು, ಘಟಕದ ಒಳಗೆ, ಹೊರಗೆ ಲಭ್ಯ ವಿರುವ ಖಾಲಿ ಹುದ್ದೆಗಳ ಆಧಾರದಲ್ಲಿ ವರ್ಗಾವಣೆ ಪಡೆಯುತ್ತಿದ್ದಾರೆ. ಸೇವಾ ಜ್ಯೇಷ್ಠತೆಯಿದ್ದು, ನಿರ್ದಿಷ್ಟ ಘಟಕದ ಒಳಗೆ ಅಥವಾ ಹೊರಗೆ ಖಾಲಿ ಹುದ್ದೆ ಇದ್ದರೂ ಹಲವು ಶಿಕ್ಷಕರಿಗೆ ಸೇವಾ ಮಾಹಿತಿ ಅಪ್‌ಡೇಷನ್‌ನಲ್ಲಿ ಯಾರೋ ಮಾಡಿದ ತಪ್ಪಿನಿಂದಾಗಿ ಈಗ ಎದುರಾಗಿರುವ ತಾಂತ್ರಿಕ ತೊಡಕಿನಿಂದ ವರ್ಗಾವಣೆ ಅವಕಾಶ ತಪ್ಪಿದೆ.

ವರ್ಗ ಪ್ರಕ್ರಿಯೆ ಅರಂಭಕ್ಕೆ ಮುನ್ನ ಶಿಕ್ಷಣ ಇಲಾಖೆ ಶಿಕ್ಷಕ ಮಿತ್ರ ತಂತ್ರಾಂಶ (ಮೊಬೈಲ್‌ ಆ್ಯಪ್‌) ಮೂಲಕ ಶಿಕ್ಷಕರ ಸೇವಾ ಮಾಹಿತಿ ಅಪ್‌ಲೋಡ್‌ ಮಾಡುವಂತೆ ಸೂಚಿಸಿತ್ತು. ಅದರಂತೆ ಶಿಕ್ಷಕರು ತಮ್ಮ ಲಾಗಿನ್‌ಗಳಲ್ಲಿ ಸೇವಾ ಮಾಹಿತಿಯನ್ನು ಅಪ್‌ಲೋಡ್‌ ಮಾಡಿದ್ದಾರೆ. ಶಿಕ್ಷಕರು ಅಪ್‌ಲೋಡ್‌ ಮಾಡಿರುವ ಮಾಹಿತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಉಪನಿರ್ದೇಶಕರ ಕಚೇರಿಯಲ್ಲಿ ಪರಿಶೀಲಿಸಿ ಡಿಡಿಒ ಲಾಗಿನ್‌ ಮೂಲಕ ಅಂತಿಮಗೊಳಿಸಲಾಗಿದೆ. ಅಪ್‌ಲೋಡ್‌ ಆಗಿರುವ ಶಿಕ್ಷಕರ ಮಾಹಿತಿ ಡಿಡಿಒ ಲಾಗಿನ್‌ಗಳಲ್ಲಿ ಅಂತಿಮಗೊಳಿಸುವ ಸಮಯದಲ್ಲಿ ದಿನಾಂಕಗಳನ್ನು ತಪ್ಪಾಗಿ ನಮೂದಿಸಿದ್ದಾರೆ. ಇದರಿಂದ ತಾಂತ್ರಿಕ ಸಮಸ್ಯೆ ಉಂಟಾಗಿ ವರ್ಗಾವಣೆ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ವರ್ಗಾವಣೆಗೆ ಅರ್ಹ ಶಿಕ್ಷಕರು ದೂರುತ್ತಿದ್ದಾರೆ.

ತಾಲೂಕುಗಳಲ್ಲಿ ಮಂಜೂರಾಗಿರುವ ಒಟ್ಟು ಶಿಕ್ಷಕರ ಹುದ್ದೆಯಲ್ಲಿ ಶೇ. 25ರಷ್ಟು ಹುದ್ದೆ ಖಾಲಿಯಿದ್ದರೆ ಆ ತಾಲೂಕಿನ ಶಿಕ್ಷಕರು ಘಟಕದ ಒಳಗೆ ಅಥವಾ ಹೊರಗೆ ವರ್ಗಾವಣೆ ಪಡೆಯಲು ಸಾಧ್ಯವಾಗುತ್ತಿಲ್ಲ. ಜತೆಗೆ ವರ್ಗಾವಣೆ ಪಡೆಯಲು ಅರ್ಹತೆಯಿದ್ದರೂ ಯಾರೋ ಮಾಡಿದ ತಪ್ಪಿಗೆ ವರ್ಗಾವಣೆ ಹೊಂದಲು ಸಾಧ್ಯವಾಗದೆ ಇರುವುದು ಇನ್ನಷ್ಟು ನೋವಾಗುತ್ತಿದೆ. ತಾಂತ್ರಿಕ ಸಮಸ್ಯೆಯಿಂದ ವರ್ಗಾವಣೆ ಪಡೆಯಲು ಸಾಧ್ಯವಾಗದವರಿಗೆ ಮುಂದಿನ ವರ್ಗಾವಣೆಯಲ್ಲಿ ಮೊದಲ ಆದ್ಯತೆ ನೀಡಬೇಕು ಅಥವಾ ಈಗಲೇ ಸಮಸ್ಯೆಗೆ ಪರಿಹಾರ ಕಲ್ಪಿಸಿ, ಎರಡನೇ ಪಟ್ಟಿಯಲ್ಲಿ ವರ್ಗಾವಣೆಗೆ ಅವಕಾಶ ನೀಡಬೇಕು ಎನ್ನುವುದು ಶಿಕ್ಷಕರ ಆಗ್ರಹವಾಗಿದೆ.

ಇದನ್ನೂ ಓದಿ:ವಾಸ್ತುಶಿಲ್ಪಿ ಬಾಲಕೃಷ್ಣ ಜೋಷಿಗೆ ರಾಯಲ್‌ ಗೋಲ್ಡ್‌ ಮೆಡಲ್‌ 2022 ಗೌರವ

Advertisement

ಸಮಸ್ಯೆ ಏನು?
ಸದ್ಯ ಸೇವೆ ಸಲ್ಲಿಸುತ್ತಿರುವ ಶಾಲೆಗೆ ನಾವು (18 ಮಂದಿ) ಒಂದೇ ದಿನ ವೃತ್ತಿಗೆ ಸೇರಿದ್ದೇವೆ ಎಂದು ತಂತ್ರಾಂಶದಲ್ಲಿ ತೋರಿಸಲಾಗಿದೆ. ಐದಾರು ವರ್ಷದಿಂದ ಇದೇ ಶಾಲೆಯಲ್ಲಿದ್ದರೂ ಮೂರು ವರ್ಷವೂ ಆಗಿಲ್ಲ ಎನ್ನುವ ಅಂಶ ತಂತ್ರಾಂಶದಲ್ಲಿದೆ. ಇದು ನಾವು ಅಪ್‌ಲೋಡ್‌ ಮಾಡಿರುವ ಮಾಹಿತಿಗೆ ವ್ಯತಿರಿಕ್ತವಾಗಿದೆ. ಮೊದಲ ಲಿಸ್ಟ್‌ನಲ್ಲಿ ಹೆಸರು ಬಂದಿದ್ದರೂ ತಾಂತ್ರಿಕ ತೊಡಕಿನಿಂದ ವರ್ಗಾವಣೆ ಸಾಧ್ಯವಾಗಿಲ್ಲ. ಈಗ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಈ ಬಗ್ಗೆ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ (ಕೆಎಟಿ) ಮೆಟ್ಟಿಲೇರುವ ಚಿಂತನೆ ನಡೆಸುತ್ತಿದ್ದೇವೆ ಎಂದು ನೊಂದ ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ.

ಶಿಕ್ಷಕರ ಸೇವಾ ಮಾಹಿತಿಯನ್ನು ಶಿಕ್ಷಕರು ತಮ್ಮ ಲಾಗಿನ್‌ ಐಡಿಯಿಂದ ಅಪ್‌ಲೋಡ್‌ ಮಾಡುತ್ತಾರೆ. ಕೆಲವೊಮ್ಮೆ ಕೇಂದ್ರ ಕಚೇರಿಯಲ್ಲಿ ತಾಂತ್ರಿಕ ದೋಷ ಅಗುವ ಸಾಧ್ಯತೆ ಇರುತ್ತದೆ. ಮುಂದೆ ಅಪ್‌ಡೇಟ್‌ ಮಾಡುವಾಗ ಸರಿಪಡಿಸಲು ಅವಕಾಶ ಇರುತ್ತದೆ. ತಂತ್ರಾಂಶದಲ್ಲಿರುವ ಸೇವಾ ಮಾಹಿತಿ ಆಧಾರದಲ್ಲೇ ವರ್ಗಾವಣೆ ನಡೆಯುತ್ತದೆ. ತಾಂತ್ರಿಕ ದೋಷ ಸರಿಪಡಿಸಲು ಇಲಾಖೆ ಕ್ರಮ ತೆಗೆದುಕೊಳ್ಳಬೇಕು.
-ಚಂದ್ರಶೇಖರ್‌ ನೂಗ್ಲಿ, ಪ್ರಧಾನ ಕಾರ್ಯದರ್ಶಿ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ

ಶಿಕ್ಷಕರ ಸೇವಾ ಮಾಹಿತಿ ಅಪ್‌ಡೇಟ್‌ನಲ್ಲಿ ಆಗಿರುವ ತಾಂತ್ರಿಕ ದೋಷದ ವಿಚಾರವಾಗಿ ವರ್ಗಾವಣೆ ಕೈತಪ್ಪಿದೆ ಎನ್ನುವ ಯಾವುದೇ ದೂರು ಸಲ್ಲಿಕೆಯಾಗಿಲ್ಲ. ವರ್ಗಾವಣೆ ಪ್ರಕ್ರಿಯೆ ತಾಂತ್ರಿಕ ದೋಷ ಇಲ್ಲದೆ ನಡೆಸಲು ಕ್ರಮ ತೆಗೆದುಕೊಂಡಿದ್ದೇವೆ.
  -ಡಾ. ವಿಶಾಲ್‌ ಆರ್‌, ಆಯುಕ್ತ,
ಸಾರ್ವಜನಿಕ ಶಿಕ್ಷಣ ಇಲಾಖೆ

ಶಿಕ್ಷಕರು ಮತ್ತು ಶಿಕ್ಷಕರ ಸಂಘಟನೆಗಳಿಂದ ಕೆಲವು ಅಹವಾಲು ಬಂದಿವೆ. ತಾಂತ್ರಿಕ ಕಾರಣದಿಂದ ವರ್ಗಾವಣೆ ಪಡೆಯಲು ಸಾಧ್ಯವಾಗದೆ ಇರುವ ಶಿಕ್ಷಕರ ಸಮಸ್ಯೆಗೆ ಮುಂದಿನ ವರ್ಗಾವಣೆ ಸಂದರ್ಭದಲ್ಲಿ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ಯೋಚಿಸಲಿದ್ದೇವೆ.
-ಬಿ.ಸಿ. ನಾಗೇಶ್‌, ಶಿಕ್ಷಣ ಸಚಿವ

-  ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next