ಚಿಂಚೋಳಿ: ನನ್ನ ವಿರುದ್ಧ ಕೆಲವು ಕಾರ್ಯಕರ್ತರು ನಡೆಸುತ್ತಿರುವ ಕುತಂತ್ರ ಇನ್ನು ಮುಂದೆ ಸಹಿಸಲು ಆಗುವುದಿಲ್ಲ ಸಂಸದೀಯ ಕಾರ್ಯದರ್ಶಿ ಡಾ| ಉಮೇಶ ಜಾಧವ ಹೇಳಿದರು. ಗುಂಡ್ಲುಪೇಟೆ ಮತ್ತು ನಂಜನಗೂಡು ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಸಾಧಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಶಾಸಕರ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
2018ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ನಾನೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುತ್ತೇನೆ ಮತ್ತು ಗೆಲುವು ನನ್ನದೆ ಆಗಿರುತ್ತದೆ. ಪಕ್ಷದಲ್ಲಿ ಹೊಸ ಮತ್ತು ಹಳೆ ಕಾಂಗ್ರೆಸ್ ಕಾರ್ಯಕರ್ತರು ಎಂಬ ಭೇದಭಾವ ಮರೆತು ನಾವೆಲ್ಲರೂ ಒಂದೇ ಪಕ್ಷದ ಕಾರ್ಯಕರ್ತರು ಎಂಬುದನ್ನು ಮರೆಯಬಾರದು ಎಂದು ಹೇಳಿದರು. ಚಿಂಚೋಳಿ ಮತಕ್ಷೇತ್ರ ಅತಿ ಹಿಂದುಳಿದ ಪ್ರದೇಶ ಆಗಿದೆ.
ಹಾಗಾಗಿ ನಮ್ಮ ಕಾಂಗ್ರೆಸ್ ಪಕ್ಷದ ಆಡಳಿತ ಸರಕಾರದಿಂದ ಕಳೆದ 4 ವರ್ಷಗಳಲ್ಲಿ ವಿವಿಧ ಯೋಜನೆ ಅಡಿ ಸಾವಿರ ಕೋಟಿ ರೂ. ಮಂಜೂರಿಗೊಳಿಸಿ ಸಾಕಷ್ಟು ಅಭಿವೃದ್ಧಿಗೊಳಿಸಿದ್ದೇನೆ. ನಮ್ಮ ಕ್ಷೇತ್ರವನ್ನು ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡದೇ ಇರುವುದರಿಂದ ಕೇಂದ್ರ ಸರಕಾರದಿಂದ ಯಾವುದೇ ಅನುದಾನ ಬರುತ್ತಿಲ್ಲ.
ಆದರೆ ಚಿತ್ತಾಪುರ, ಸೇಡಂ ಕ್ಷೇತ್ರಗಳು ಬರ ಪೀಡಿತ ಪ್ರದೇಶ ಎಂದು 3 ದಶಕಗಳ ಹಿಂದೆ ಕೇಂದ್ರ ಸರಕಾರ ಘೋಷಣೆ ಮಾಡಿದೆ. ಹೀಗಾಗಿ ಆ ಎರಡೂ ತಾಲೂಕುಗಳಿಗೆ ಹೆಚ್ಚಿನ ಅನುದಾನ ಬರುತ್ತಿದೆ. ಹಾಗಾಗಿ ಬ್ಯಾರೇಜ್ ನಿರ್ಮಾಣ ಕಾಮಗಾರಿಗಳು ನಡೆಯುತ್ತಿವೆ ಎಂದು ಹೇಳಿದರು.
ಸುಂಠಾಣ ಗ್ರಾಮಕ್ಕೆ 8 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಡಾಂಬರಿಕರಣ ಮಾಡಲಾಗಿದೆ. ಆದರೂ ಆ ಗ್ರಾಮದಲ್ಲಿ ಜನರು ಕತ್ತೆಗಳ ಮೇಲೆ ಸಂಚರಿಸುತ್ತಾರೆ ಎಂದು ಮಾಧ್ಯಮದಲ್ಲಿ ವರದಿ ಪ್ರಸಾರ ಮಾಡುತ್ತಾರೆ. ಚಿಂಚೋಳಿ ತಾಲೂಕಿಗೆ ಸಚಿವರಾದ ಡಿ.ಕೆ. ಶಿವಕುಮಾರ, ತನ್ವೀರ್ ಸೇಠ ಆಗಮಿಸಿದ ಸಂದರ್ಭದಲ್ಲಿ ಕೇವಲ 6 ಜನ ಬಿಜೆಪಿ ಕಾರ್ಯಕರ್ತರು ಘೇರಾವ್ ಹಾಕಿರುವ ಸಂಗತಿ ರಾಷ್ಟ್ರೀಯ ಸುದ್ದಿಯಾಗಿತ್ತು.
ಆದರೆ ನಮ್ಮ ಸರಕಾರದ ಸಾಧನೆಗಳ ಬಗ್ಗೆ ಮಾಧ್ಯಮಗಳು ಸರಿಯಾಗಿ ಬರೆಯುವುದಿಲ್ಲ ಮತ್ತು ಪ್ರಸಾರ ಮಾಡುವುದಿಲ್ಲ ಎಂದು ಮಾಧ್ಯಮ ವಿರುದ್ಧ ಹರಿಹಾಯ್ದರು. ಮಧುಸೂಧನರೆಡ್ಡಿ ಕಲ್ಲೂರ, ಗೋಪಾಲರಾವ ಕಟ್ಟಿಮನಿ, ಕೆ.ಎಂ. ಬಾರಿ, ಆರ್. ಗಣಪತರಾವ, ಅಮಜದ್ ಅಲಿ, ಅಬ್ದುಲ್ ಬಾಸೀತ್, ಲಕ್ಷಣ ಆವಂಟಿ ಮಾತನಾಡಿದರು. ರಾಮಶೆಟ್ಟಿ ಪವಾರ ಸ್ವಾಗತಿಸಿದರು. ನಾಗೇಶ ಗುಣಾಜಿ ನಿರೂಪಿಸಿದರು. ಉಮಾ ಪಾಟೀಲ ವಂದಿಸಿದರು.