ತಿರುವನಂತಪುರ: ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಮಾಧವ ಗಾಡ್ಗೀಳ್ ಹಾಗೂ ಕಸ್ತೂರಿರಂಗನ್ ಸಮಿತಿಗಳು ನೀಡಿರುವ ವರದಿಗಳು ವಾಸ್ತವಿಕವಾಗಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರವಿವಾರ ಹೇಳಿದ್ದಾರೆ.
ಭೂಕುಸಿತಕ್ಕೆ ಸಂಬಂಧ ಮಾಧ್ಯಮವೊಂದರ ಜತೆ ಮಾತನಾಡಿರುವ ಅವರು, ಈ ವರದಿಗಳು ಸಾಮಾಜಿಕ ನಿರೀಕ್ಷೆ, ವಾಸ್ತವ ಸಂಗತಿಗಳನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದಿದ್ದಾರೆ.
ಕೆಲವರು ಶತಮಾನಗಳಿಂದ ಸೂಕ್ಷ್ಮ ಪರಿಸರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಅಂಥವರನ್ನು ಈ ಸಮಿತಿಗಳು ಪರಿಗಣನೆಗೆ ತೆಗೆದುಕೊಂಡಿಲ್ಲ. ಪ್ಲಾಂಟೇಶನ್ ಮಾಲಕರು, ರಿಯಲ್ ಎಸ್ಟೇಟ್ ಉದ್ಯಮಿಗಳು ಅಥವಾ ಗಣಿಗಾರಿಕೆ ನಡೆಸುವವರನ್ನು ಸಾಮಾನ್ಯ ರೈತರ ಜತೆ ಹೋಲಿಸಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.
2,000 ಕೋಟಿ ಪರಿಹಾರ ಬೇಡಿಕೆ
ವಯನಾಡ್ ಭೂ ಕುಸಿತಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ 2,000 ಕೋಟಿ ರೂ. ಪರಿಹಾರ ನೀಡಬೇಕು ಎಂದು ಅವರು ಬೇಡಿಕೆ ಇಟ್ಟಿದ್ದಾರೆ. ಈ ದುರಂತ ಹಿಂದೆ ನಡೆಯದ ಅನಾಹುತ ಸೃಷ್ಟಿಸಿದ್ದು ಕೇಂದ್ರ ಸರಕಾರ ಭಾರೀ ಪರಿಹಾರ ನೀಡುವ ಭರವಸೆ ಇದೆ ಎಂದಿದ್ದಾರೆ.