Advertisement

Service: ಜನ ಸೇವೆ ಜನಾರ್ದನನ ಸೇವೆ

03:30 PM Aug 31, 2024 | Team Udayavani |

ಸರಕಾರಿ ಕೆಲಸ ದೇವರ ಕೆಲಸ ಎಂಬ ಮಾತೊಂದಿದೆ. ಸಣ್ಣ ಕೆಲಸವಾದರೂ ಪರವಾಗಿಲ್ಲ ನನಗೊಂದು ಸರಕಾರಿ ಉದ್ಯೋಗ ಸಿಗಬೇಕು ಎಂದು ಕಾದು ಕುಳಿತಿರುವ ಅದೆಷ್ಟೋ ಯುವ ಚೇತನಗಳು ನಮ್ಮ ಮಧ್ಯ ಇದ್ದಾರೆ. ಈಗೀನ ಕಾಲದಲ್ಲಿ ಕಷ್ಟಪಟ್ಟು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆಯಾಗಿ ಬಂದಿರುವವರು ಪರವಾಗಿಲ್ಲ, ಆದರೆ ಆಗಿನ ಕಾಲದಲ್ಲಿ ಬೇರೆ ಬೇರೆ ಮಾರ್ಗಗಳ ಮೂಲಕ ಬಂದವರಿಗೆ ಇದು ಇರುವೆಯಂತೆ ಭಾಸವಾಗುತ್ತೆ.

Advertisement

ನಮಗೆ ಅಲ್ಲಿ ಡ್ನೂಟಿ ಹಾಕ್ತಾರೆ, ಇಲ್ಲಿ ಡ್ನೂಟಿ ಹಾಕ್ತಾರೆ, ಎರಡನೇ ಶನಿವಾರ ರಜಾ ಇಲ್ಲ, ನಾಲ್ಕನೇ ಶನಿವಾರ ರಜಾ ಬೇಕು, ಕೆಲಸದ ಒತ್ತಡ, ಹೆಚ್ಚಿನ ಸಂಬಳಕ್ಕಾಗಿ ಅನಿರ್ಧಿಷ್ಟಾವಧಿ ಮುಷ್ಕರ ಎಂಬ ಅನೇಕ ಮಾತುಗಳನ್ನು ನಾವು ಕೇಳುವುದಿದೆ. ಸಾಮಾನ್ಯವಾಗಿ ಕಚೇರಿಗಳಿಗೆ ಬೇರೆ ಬೇರೆ ರೀತಿಯ ಸಮಸ್ಯೆ ಇರುವವರು ಬರುತ್ತಾರೆ, ಸಾಧ್ಯವಾದರೆ ಅವರ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಪರಿಹಾರ ಕೊಡಿ. ಏಕೆಂದರೆ ನೀವು ಸಂಬಳ ಪಡೆಯುವುದು ಇದೇ ಕಾರಣಕ್ಕೆ, ಅದರಲ್ಲೇ ದೇವರಿದ್ದಾನೆ. ನೀವು ಮಾಡೋದು ಜನ ಸೇವೆ ಅಲ್ಲ ಜನಾರ್ದನನ ಸೇವೆ.

ಇನ್ನು ಯಾವುದೋ ಒಂದು ಕೆಲಸವಾಗಲು ಸರಕಾರಿ ಕಚೇರಿಗಳಿಗೆ ಹತ್ತು ಬಾರಿ ಅಲೆದು ಮುಖದಲ್ಲಿ ನಿರಾಸೆ ಭಾವನೆ ಮೂಡಿ, ಚಪ್ಪಲಿಯ ಹರಿದು ಹೋದಾಗ ಒಮ್ಮೆ ಲಕ್ಷ್ಮೀ ದರ್ಶನ ಮಾಡಿಸಿದ್ದರೆ ಇಷ್ಟೊಂದು ಕಷ್ಟ ಪಡುವ ಅಗತ್ಯ ಇಲ್ಲ ಎಂದು ಅನ್ನಿಸುತ್ತೆ. ಅಂತಹದ್ದೇ ಒಂದು ಸನ್ನಿವೇಶ ನೋಡಿ. ಆಧಾರ್‌ ತಿದ್ದುಪಡಿಗೆ ಸಾಮಾನ್ಯವಾಗಿ ಗಜೆಟೆಡ್‌ ಅಧಿಕಾರಿಗಳ ಹಸುರು ಬಣ್ಣದ ಸಹಿಯ ಅಗತ್ಯವಿರುತ್ತದೆ. ಆ ಒಂದು ಸಹಿ ಪಡೆಯಲು ನನಗೆ ತಗುಲಿದ್ದು ಹದಿನೈದು ದಿನ. ಸರಕಾರಿ ಕಚೇರಿಗಳಿಗೆ ಹಿರಿಯ ಅಧಿಕಾರಿಯೊಬ್ಬರ ಬಳಿ ಸಹಿ ಬೇಕು ಎಂದು ಹೋದರೆ ಅರ್ಜಿ ನೋಡಿ ನೀನು ನನ್ನ ವ್ಯಾಪ್ತಿಗೆ ಬರುವುದಿಲ್ಲ, ಇದು ನನಗೆ ಸಂಬಂಧವಿಲ್ಲ ಎನ್ನತ್ತಾರೆ.

ವೈದ್ಯಾಧಿಕಾರಿಯೊಬ್ಬರ ಬಳಿ ಹೋದರೆ ನನಗೆ ನಿನ್ನ ಪರಿಚಯವಿಲ್ಲ ನಿಮ್ಮ ಊರಿನಲ್ಲಿ ಯಾರಾದರೂ ಇದ್ದರೆ ಸಹಿ ಮಾಡಿಸಿಕೊ ಎಂದರು. ಇನ್ನು ಕಂದಾಯ ಅಧಿಕಾರಿ ಬಳಿ ಹೋದರೆ ನನಗೆ ಈಗ ಮೀಟಿಂಗ್‌ ಇದೆ, ಮಳೆ ಹಾನಿ ಪ್ರದೇಶಕ್ಕೆ ಭೇಟಿ ಕೋಡಬೇಕು ಈಗ ಆಗುವುದಿಲ್ಲ ಅಂದರು, ಕೃಷಿ ಇಲಾಖೆಯ ಅಧಿಕಾರಿಯ ಕಚೇರಿಗೆ ಹೋದರೆ ಒಂದು ವಾರ ರಜೆಯಲ್ಲಿದ್ದಾರಂತೆ.

ಆದರೆ ಇಲ್ಲಿ ಒಂದು ಮಾತ್ರ ಸ್ಪಷ್ಟ ಈ ಎಲ್ಲ ಅಧಿಕಾರಿಗಳ ಸಹಿಗೆ ಬಹಳ ದೊಡ್ಡ ಮೌಲ್ಯ ಇದೆ. ಈ ಅಧಿಕಾರಿಗಳ ನಿರಾಕರಣೆ ಹಿಂದೆ ಇದಿದ್ದು ಒಂದೇ ಕಾರಣ ಅದು ಲಕ್ಷ್ಮೀ ದರ್ಶನ. ಆದರೆ ನಾನು ಒಂದೇ ಒಂದು ರೂಪಾಯಿ ಲಕ್ಷ್ಮೀ ದರ್ಶನ ಮಾಡಿಸಿ ನಿಮ್ಮಿಂದ ಸಹಿ ಪಡಿಯೋದಿಲ್ಲ. ನೀವು ಮಾಡುತ್ತಿರುವುದು ಸರಕಾರಿ ಕೆಲಸ. ಅದಕ್ಕೆ ನಿಮಗೆ ಸಂಬಳ ಬರುತ್ತದೆ. ಸಹಿ ಹಾಕಿದ ಮಾತ್ರಕ್ಕೆ ಸಂಬಳ ಕಡಿಮೆ ಬರುವುದಿಲ್ಲ. ಮತ್ತೇಕೆ ನಿಮಗೆ ಲಕ್ಷ್ಮೀ ದರ್ಶನದ ಅಗತ್ಯತೆ? ನಿಮ್ಮ ಆಡಂಭರದ ಬದುಕಿಗೆ ನೀವು ಲಕ್ಷ್ಮೀ ಕೇಳುತ್ತೀರಿ ಎಂದಾದರೆ ನಿಮ್ಮನ್ನು ಭ್ರಷ್ಟರು ಅನ್ನದೆ ಬೇರೇನು ಹೇಳಬೇಕು.

Advertisement

ನಮ್ಮ ವ್ಯವಸ್ಥೆ ತುಂಬ ಮುಂದುವರೆದಿದೆ. ಕಚೇರಿಗಳಲ್ಲಿ ಕೆಮರಾ ಇದೆ, ಹದ್ದಿನ ಕಾವಲಿದೆ ಅಂತಿರಲ್ಲ ಇದೇನಾ ನಮ್ಮ ವ್ಯವಸ್ಥೆ. ಹೇಳಿಕೆಗಾಗಿ ಅಲ್ಲಲ್ಲಿ ಲೋಕಾಯುಕ್ತ, ಐಟಿ, ಇಡಿ ದಾಳಿ ಆಗುತ್ತಿರುವುದನ್ನು ನಾವು ಕೇಳುತ್ತಿರುತ್ತೇವೆ, ಆದರೆ ಒಮ್ಮೆ ಸರಕಾರಿ ಉದ್ಯೋಗ ಪಡೆದರೆ ಮುಗಿತು ಎಂದು ತಿಳಿದ ಯಾವ ಅಧಿಕಾರಿಯೂ ಇಂತಹ ದಾಳಿಗಳಿಗೆ ಹೆದರುವುದಿಲ್ಲ. ಏಕೆಂದರೆ ಅವರಿಗೆ ತಿಳಿದಿದೆ ನಾವು ಏನೇ ಮಾಡಿದರೂ ನಮ್ಮ ಮೇಲೆ ಶಿಕ್ಷೆ ವಿಧಿಸುವುದಿಲ್ಲ ಎಂದು. ಎಲ್ಲಿಯ ವರೆಗೆ ತನಿಖಾ ಸಂಸ್ಥೆಗಳನ್ನು ಮುಕ್ತವಾಗಿ ಬಿಡುವುದಿಲ್ಲವೋ ಅಲ್ಲಿಯವರೆಗೆ ಭ್ರಷ್ಟಚಾರ ನಿಲ್ಲುವುದಿಲ್ಲ. ಇವುಗಳನ್ನು ಖಂಡಿಸುವ ಯುವ ಅಧಿಕಾರಿಗಳನ್ನು ಗುರುತೇ ಇಲ್ಲದ ಸ್ಥಳಕ್ಕೆ ವರ್ಗಾವಣೆ ಮಾಡಿ ಬಿಡುತ್ತಾರೆ. ಒಬ್ಬ ಭ್ರಷ್ಟ ಅಧಿಕಾರಿಗೆ ಕೊಡುವ ಶಿಕ್ಷೆ ಮುಂದೆ ಯಾರು ಕೂಡ ಅಂತಹ ತಪ್ಪನ್ನು ಮಾಡಿದ ಹಾಗೆ ಸಂದೇಶ ಕೂಡಬೇಕೇ ಹೊರತು, ಅದು ಇನ್ನೊಬ್ಬರಿಗೆ ಪ್ರೇರಣೆ ಆಗಬಾರದು.

ಆದರೆ ಒಂದನ್ನು ನೆನಪಿಡಿ, ನೀವು ಪ್ರಸ್ತುತ ಬದುಕುತ್ತಿರುವ ಬದುಕು ಅದ್ದೆಷ್ಟೋ ಯುವ ಚೈತನ್ಯಗಳ ಕನಸಿನ ಕೂಸು. ಆ ಕನಸು ನಿಮ್ಮ ಜೀವನದಲ್ಲಿ ಈಡೇರಿದೆ ಎಂದಾದರೆ ನೀವು ಮೊದಲು ಸಂತೋಷ ಪಡಬೇಕು. ನೀವು ಮಾಡುವ ವೃತ್ತಿಯನ್ನು ಗೌರವಿಸಿ ಅದು ಬಹಳ ಶ್ರೇಷ್ಠವಾದ ಕೆಲಸ. ಮಾಡುವ ಕೆಲಸವನ್ನು ಪ್ರೀತಿಸಿದರೆ ಅದರಲ್ಲಿ ಸಾರ್ಥಕತೆ ಕಾಣಲು ಸಾಧ್ಯವಿಲ್ಲ. ನಿಮ್ಮ ಪರಿಮಿತಿಯ ಒಳಗೋ, ಹೊರಗೋ ಅದು ನಮಗೆ ಸಂಬಂಧಿಸಿಲ್ಲಾ ಎಂದು ನಿಲ್ಲಬೇಡಿ. ಸಾಧ್ಯ ಆದರೆ ಸಮಸ್ಯೆಗೆ ಸ್ಫಂದಿಸಲು ಪ್ರಯತ್ನಿಸಿ, ಸಂಬಳಕ್ಕೂ ಹೊರತಾಗಿ ಒಂದು ರೀತಿಯ ಸಂತೃಪ್ತ ಭಾವನೆ ನಿಮ್ಮ ಮನಸ್ಸಿನಲ್ಲಿ ಮೂಡಿ ಬಂದರೆ ಅದು ಸರಕಾರಿ ಹುದ್ದೆಯ ಮಹತ್ತರ ಸಾರ್ಥಕತೆ.

 ಸುಜಯ ಶೆಟ್ಟಿ ಹಳ್ನಾಡು

ಕಾವ್ರಾಡಿ

Advertisement

Udayavani is now on Telegram. Click here to join our channel and stay updated with the latest news.

Next