Advertisement

Bengaluru: ಜನರ ಒತ್ತಡಕ್ಕೆ ಮಣಿದು ಜೈಲಿನ ಜಾಮರ್‌ ಸಡಿಲ?

10:33 AM Aug 28, 2024 | Team Udayavani |

ಬೆಂಗಳೂರು: ಪರಪ್ಪನ ಅಗ್ರಹಾರ ಕಾರಾಗೃಹದ 4 ದಿಕ್ಕುಗಳಲ್ಲಿ ಅಳವಡಿಸಿರುವ ಹಾರ್ಮೋನಿಯಸ್‌ ಕಾಲ್‌ ಬ್ಲಾಕಿಂಗ್‌ ಸಿಸ್ಟಂ(ಎಚ್‌ಸಿಬಿಎಸ್‌)ನ ಫ್ರೀಕ್ವೇನ್ಸಿ ಕಡಿಮೆ ಮಾಡಿದ ಪರಿಣಾಮವೇ ಜೈಲುಗಳಲ್ಲಿ ಕೈದಿ ಗಳು ಮೊಬೈಲ್‌ ಬಳಕೆ ಹೆಚ್ಚಾಗಿದೆ ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

Advertisement

ಪರಪ್ಪನ ಅಗ್ರಹಾರ ಮಾತ್ರವಲ್ಲ ರಾಜ್ಯದ ಎಲ್ಲಾ ಜೈಲುಗಳಲ್ಲಿ ಕೈದಿಗಳು ಮೊಬೈಲ್‌ ಬಳಕೆ ಬಗ್ಗೆ ಗಂಭೀರ ಆರೋಪ ಕೇಳಿ ಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಪ್ರಾಥಮಿಕವಾಗಿ 8 ತಿಂಗಳ ಹಿಂದಷ್ಟೇ ಪರಪ್ಪನ ಅಗ್ರಹಾರ ಜೈಲಿನ 4ದಿಕ್ಕುಗಳಲ್ಲಿ ಅತ್ಯಾಧುನಿಕ ಮೊಬೈಲ್‌ ಜಾಮರ್‌ ಹಾರ್ಮೋನಿಯಸ್‌ ಕಾಲ್‌ ಬ್ಲಾಕಿಂಗ್‌ ಸಿಸ್ಟಂಗಳನ್ನು ಅಳವಡಿಸಲಾಗಿತ್ತು. ಅದರಿಂದ ಜೈಲಿನ ಆವರಣದಲ್ಲಿರುವ ಕೈದಿಗಳು ಮಾತ್ರವಲ್ಲ, ಅಧಿಕಾರಿ- ಸಿಬ್ಬಂದಿ ಕೂಡ ಮೊಬೈಲ್‌ ಬಳಕೆ ಅಸಾಧ್ಯವಾಗಿತ್ತು. ಆದರೆ, ಒಂದೆರಡು ತಿಂಗಳಲ್ಲಿ ಅಕ್ಕ-ಪಕ್ಕದ ನಿವಾಸಿಗಳ ಮೊಬೈಲ್‌ಗ‌ಳು ಕೂಡ ಕಾರ್ಯ ಸ್ಥಗಿತವಾಗಿತ್ತು. ಅದರಿಂದ ಆಕ್ರೋಶಗೊಂಡ ಸಾರ್ವಜನಿಕರು ಜೈಲಿನ ಮುಂಭಾಗ ಪ್ರತಿಭಟನೆ ನಡೆಸಿದ್ದರು.

ಪ್ರಿಕ್ವೇನ್ಸಿ ಕಡಿಮೆ ಮಾಡಿಸಿದ ಅಧಿಕಾರಿಗಳು:

ಈ ಸಿಸ್ಟಂನಿಂದ ಯಾವುದೇ ಕರೆಗಳು ಬರುವುದು ಮತ್ತು ಹೋಗುವುದು ಹಾಗೂ ಎಸ್‌ಎಂಎಸ್‌ ಕೂಡ ಬರುವುದಿಲ್ಲ. ಹೀಗಾಗಿ ಸಾರ್ವಜನಿಕರ ನಿರಂತರ ಒತ್ತಾಯಕ್ಕೆ ಮಣಿದ ಇಲಾಖೆ ಅಧಿಕಾರಿಗಳು ಟೆಲಿಕಾಂ ಅಧಿಕಾರಿ ಗಳ ಮೂಲಕ ಎಚ್‌ಸಿಬಿಎಸ್‌ನ ಫ್ರೀಕ್ವೇನ್ಸಿ ಕಡಿಮೆ ಮಾಡಿಸಿದ್ದರು. ಅದರಿಂದ ಮತ್ತೆ ಜೈಲಿನಲ್ಲಿ ಮೊಬೈಲ್‌ಗ‌ಳು ರಿಂಗಣಿಸ ತೊಡಗಿವೆ. ಇದೀಗ ದರ್ಶನ್‌ಗೆ ವಿಶೇಷ ಆತಿಥ್ಯ ನೀಡಿದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ತನಿಖೆಗೆ ಇಳಿದ ಪೊಲೀಸರಿಗೆ ಇಂತಹ ಈ ಮಹತ್ವದ ವಿಚಾರ ಬೆಳಕಿಗೆ ಬಂದಿದೆ.

ಮತ್ತೂಂದೆಡೆ ಮೂಲಗಳ ಪ್ರಕಾರ, ಫ್ರೀಕ್ವೇನ್ಸಿ ಕಡಿಮೆ ಮಾಡಿರುವುದರಿಂದ ಸಾರ್ವಜನಿಕರ ಸಮಸ್ಯೆ ಬಗೆ ಹರಿದಿತ್ತು. ಆದರೆ, ಜೈಲಿನ ಮೊಬೈಲ್‌ಗ‌ಳಿಗೆ ಕಡಿವಾಣ ಹಾಕಲಾಗಿತ್ತು. ಆದರೂ ಕೈದಿಗಳು ಮೊಬೈಲ್‌ಗ‌ಳನ್ನು ಹೇಗೆ ಬಳಸಿದ್ದಾರೆ ಎಂಬುದು ತಾಂತ್ರಿಕ ತನಿಖೆ ನಡೆಯಬೇಕಿದೆ. ಈ ಸಿಸ್ಟಂಗಳಲ್ಲಿ ಮಾನವಸಹಿತ ಹಾಗೂ ಮಾನವ ರಹಿತ ಜಾಮರ್‌ ನಿಯಂತ್ರಿಸುವ ಸಿಸ್ಟಂ ಕೂಡ ಇದೆ. ಹೀಗಾಗಿ ನಿರ್ದಿಷ್ಟ ಸಮಯದಲ್ಲಿ ಜೈಲಿನ ಅಧಿಕಾರಿಗಳೇ ಜಾಮರ್‌ ಆಫ್ ಮಾಡಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

Advertisement

ಚೇರ್‌ ಕೊಡಲು ಕೂಡ ಅನುಮತಿ ಬೇಕು: ಪೊಲೀ ಸರಿಂದ ಕಾಲಿಗೆ ಗುಂಡೇಟು ತಿಂದ ರೌಡಿಗಳು, ಆರೋಪಿಗಳಿಗೆ ಕುಳಿತುಕೊಳ್ಳಲು ಚೇರ್‌ ಕೊಡಬೇಕಾ ದರೆ, ಜೈಲಿನ ಮುಖ್ಯ ಆರೋಗ್ಯಾಧಿಕಾರಿಯ ಅನುಮತಿ ಬೇಕಾಗುತ್ತದೆ. ಆದಾಗ್ಯೂ ದರ್ಶನ್‌, ರೌಡಿ ನಾಗನಿಗೆ ಕುಳಿತುಕೊಳ್ಳಲು ಚೇರ್‌ ಹಾಗೂ ಟೀಪಾಯಿ ಪೂರೈಕೆ ಮಾಡಿರುವುದು ಜೈಲಿನ ಅಧಿಕಾರಿಗಳುವ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂಬ ಅಂಶ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ದರ್ಶನ್‌ ಆತಿಥ್ಯಕ್ಕೆ ನಾಗ, ರಘು ಮಧ್ಯೆ ಪೈಪೋಟಿ!

ದರ್ಶನ್‌ ಹೊರಗೆ ಇದ್ದಾಗಲೇ ಕುಖ್ಯಾತ ರೌಡಿಶೀಟರ್‌ ಸೈಕಲ್‌ ರವಿಯ ಬಲಗೈ ಬಂಟ ಬೇಕರಿ ರಘು ಪರಿಚಯ ಇತ್ತು. ನಾಗನ ಪರಿಚಯ ಅಷ್ಟಾಗಿ ಇರಲಿಲ್ಲ. ದರ್ಶನ್‌ ಕಾರಾ ಗೃಹ ಕ್ಕೆ ಬರುತ್ತಿದ್ದ ಮಾಹಿತಿ ತಿಳಿದಿದ್ದ ನಾಗ ನಟನ ಸ್ನೇಹ ಬೆಳೆ ಸಲು ಹಾಗೂ ಆತನ ಬ್ಯಾರಕ್‌ ಹಾಕು ವಂತೆ ಜೈಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದ ಎನ್ನಲಾಗಿದೆ. ಆದರೆ ದರ್ಶನ್‌ ಜೈಲು ಸೇರುತ್ತಿ ದ್ದಂತೆಯೇ ರಘು ಉಸ್ತುವಾರಿಯಲ್ಲಿ ದರ್ಶನ್‌ಗೆ ವಿಶೇಷ ಆತಿಥ್ಯ ನೀಡಲಾಗಿತ್ತು. ರಘು ತಮಗೆ ಪರಿಚಯಸ್ಥರಿಂದ ನಟನಿಗೆ ಕೆಲವು ಸೌಲಭ್ಯಗಳನ್ನು ತರಿಸಿ ಕೊಡುತ್ತಿದ್ದ.

ಕೆಲವು ದಿನಗಳ ಬಳಿಕ ರಘು ಪೂರೈಸುವು ದಕ್ಕಿಂತಲೂ ಹೆಚ್ಚಿನ ವಸ್ತುಗಳು ಹಾಗೂ ಸೌಲಭ್ಯಗಳನ್ನು ನಾಗ ದರ್ಶನ್‌ಗೆ ಕೊಟ್ಟಿದ್ದ. ಆಗ ನಾಗನೇ ದರ್ಶನ್‌ಗೆ ಬೇಕಾದ ಸೌಲಭ್ಯ ಕಲ್ಪಿಸುತ್ತಿದ್ದ. ಜೈಲಿನ ಒಳಗೆ ಇಬ್ಬರೂ ತಮ್ಮ ಸಹಚರರ ಜತೆಗೆ ರೌಂಡ್‌ ಟೇಬಲ್‌ ಪಾರ್ಟಿ ನಡೆಸುತ್ತಿದ್ದರು. ಇದು ರಘುಗೆ ಸಿಟ್ಟು ತರಿಸಿತ್ತು.

ಇದೇ ವಿಚಾರಕ್ಕೆ ರಘು ಕಡೆಯವರು ಫೋಟೋ ತೆಗೆದು ಹೊರಗಿದ್ದ ವ್ಯಕ್ತಿಯೊಬ್ಬರಿಗೆ ಕಳುಹಿಸಲಾಗಿತ್ತು ಎಂದು ಹೇಳಲಾಗಿತ್ತು. ಆದರೆ, ಸಿದ್ದಾಪುರ ಮಹೇಶ ಮತ್ತು ಶಾಂತಿನಗರ ಲಿಂಗರಾಜು ಕೊಲೆ ಪ್ರಕರಣದ ಆರೋಪಿಗಳಾಗಿರುವ ನಾಗ ಶಿಷ್ಯಂದಿರಾದ ಕಣ್ಣನ್‌ ಮತ್ತು ವೇಲು ಎಂಬ ಅಣ್ಣತಮ್ಮಂದಿರ ಪೈಕಿ ವೇಲು ಈ ಫೋಟೋ ತೆಗೆದು ನಾಗನ ಫ್ಯಾನ್ಸ್‌ ಗ್ರೂಪ್‌ಗೆ ಶೇರ್‌ ಮಾಡಿದ್ದಾನೆ. ಅದು ವೈರಲ್‌ ಆಗಿದೆ ಎಂಬುದು ಪ್ರಾಥಮಿಕ ಮಾಹಿತಿಯಿಂದ ಗೊತ್ತಾಗಿದೆ. ಆದರೆ, ನಾಗನ ಯುವಕರು ಬೇಕರಿ ರಘು ಯುವಕರ ಜತೆ ಇದೇ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ, ವೇಲು ಮೇಲೆ ನಾಗನ ಯುವಕರೇ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಸಿಸಿಬಿ ದಾಳಿಗೂ ಮುನ್ನ ವಸ್ತು ಸ್ಥಳಾಂತರ: ಮೂವರು ಅಧಿಕಾರಿಗಳ ವಿರುದ್ಧ ಕೇಸ್‌

ಜೈಲು ನಿಯಮ ಉಲ್ಲಂಘನೆ ಪ್ರಕರಣದಲ್ಲಿ ದರ್ಶನ್‌ ಎ1 ಆರೋಪಿ

ಬೆಂಗಳೂರು: ನಟ ದರ್ಶನ್‌ಗೆ ವಿಶೇಷ ಆತಿಥ್ಯ ನೀಡಿದ ಪ್ರಕರಣ ಸಂಬಂಧ ಸಿಸಿಬಿ ದಾಳಿಯ ಹಿಂದಿನ ದಿನ ರಾತ್ರಿಯೇ ಕೈದಿಗಳ ಕೊಠಡಿಯಿಂದ ಕೆಲ ವಸ್ತುಗಳನ್ನು ಸಾಗಿಸಿರುವ ಸಂಬಂಧ ಮೂವರು ಜೈಲಿನ ಅಧಿಕಾರಿಗಳು ಸೇರಿ ನಾಲ್ವರ ವಿರುದ್ಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ.

ಕಾರಾಗೃಹ ಹಾಗೂ ಸುಧಾರಣಾ ಇಲಾಖೆಯ ಡಿಐಜಿ ಸೋಮಶೇಖರ್‌ ನೀಡಿದ ದೂರಿನ ಮೇರೆಗೆ ಜೈಲು ಸಿಬ್ಬಂದಿ ಸುದರ್ಶನ್‌, ಪರಮೇಶ್‌ ನಾಯಕ್‌, ಕೆ.ಬಿ.ರಾಯಮನೆ ಹಾಗೂ ಶಿûಾಬಂಧಿ ಮುಜೀಬ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಎಫ್ಐಆರ್‌ ದಾಖಲಿಸಿದ್ದಾರೆ. ಈ ಪ್ರಕರಣ ಸಂಬಂಧ ಎಲೆಕ್ಟ್ರಾನಿಕ್‌ ಸಿಟಿ ಉಪವಿಭಾಗದ ಎಸಿಪಿ ಮಂಜುನಾಥ್‌ ತನಿಖೆ ನಡೆಸುತ್ತಿದ್ದಾರೆ.

ಜೈಲಿನಲ್ಲಿ ಮೊಬೈಲ್‌ ಹಾಗೂ ಮಾದಕವಸ್ತು ಸೇರಿ ನಿಷೇಧಿತ ವಸ್ತುಗಳ ಬಳಕೆ ಹಿನ್ನೆಲೆ ಸಿಸಿಬಿ ಪೊಲೀಸರು ಆ. 24 ರಂದು ದಾಳಿ ನಡೆಸಿದ್ದರು. ಅದಕ್ಕೂ ಮುನ್ನ ಸಿಸಿಬಿ ದಾಳಿ ಮಾಹಿತಿ ಸೋರಿಕೆ ಹಿನ್ನೆಲೆಯಲ್ಲಿ ಆ.23 ರ ರಾತ್ರಿ 10.58 ರಿಂದ 11.30ರ ವರೆಗೆ ಆರೋಪಿಗಳು ಕೆಲ ವಸ್ತುಗಳನ್ನು ಸಾಗಿಸುತ್ತಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅನುಮಾನಾಸ್ಪದ ರೀತಿಯಲ್ಲಿ ಸಾಗಿಸಿರುವ ಬಗ್ಗೆ ಪ್ರಶ್ನಿಸಿದಾಗ “ಇದು ಕಸ’ ಎಂದು ಸಿಬ್ಬಂದಿ ಸಮಜಾಯಿಷಿ ನೀಡಿದ್ದರು. ಅಲ್ಲದೆ, ಸಿಸಿಬಿ ದಾಳಿ ವೇಳೆ ನಿಷೇಧಿತ ವಸ್ತುಗಳು ಸಿಗದಿರುವುದಕ್ಕೆ ಜೈಲು ಸಿಬ್ಬಂದಿ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ಪ್ರತ್ಯೇಕ ತನಿಖೆಯನ್ನು ಸಿಸಿಬಿ ನಡೆಸುತ್ತಿದೆ.

2 ಕೇಸ್‌ನಲ್ಲಿ ದರ್ಶನ್‌ ಎ1:

ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ 2ನೇ ಆರೋಪಿಯಾಗಿರುವ ದರ್ಶನ್‌ ಅವರನ್ನು ಮೊದಲ ಆರೋಪಿಯನ್ನಾಗಿ ಮಾಡಲು ಕಾಮಾಕ್ಷಿಪಾಳ್ಯ ಪೊಲೀಸರು ಚಿಂತನೆ ನಡೆಸುತ್ತಿರುವ ಬೆನ್ನಲ್ಲೇ ಜೈಲಿನಲ್ಲಿ ಸಿಗರೆಟ್‌ ಸೇರಿ ಜೈಲಿನ ನಿಯಾಮವಳಿ ಉಲ್ಲಂಘನೆ ಮಾಡಿರುವ ಸಂಬಂಧ ದಾಖಲಾದ 2 ಪ್ರಕರಣದಲ್ಲೂ ದರ್ಶನ್‌ನನ್ನು ಮೊದಲ ಆರೋಪಿಯಾಗಿ ಮಾಡಲಾಗಿದೆ.

ಜೈಲಿಗೆ ಕಮಿಷನರ್‌ ದಯಾನಂದ್‌ ಭೇಟಿ

ಮೂರು ಪ್ರತ್ಯೇಕ ಎಫ್ಐಆರ್‌ಗಳ ಸಂಬಂಧ ಮಂಗಳವಾರ ಸಂಜೆ ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಗೆ ಭೇಟಿ ನೀಡಿ, 3 ಪ್ರಕರಣಗಳ ತನಿಖಾಧಿಕಾರಿಗಳು ಹಾಗೂ ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತೀಮಾ ಜತೆ ಚರ್ಚಿಸಿದ್ದಾರೆ. ಪ್ರಕರಣದ ತನಿಖಾ ಹಾದಿ, ಯಾವೆಲ್ಲ ಮಾಹಿತಿ ಸಂಗ್ರಹಿಸಬೇಕು ಸೇರಿ ಸಂಪೂರ್ಣ ತನಿಖೆ ಯಾವ ರೀತಿ ನಡೆಯಬೇಕೆಂದು ಆಯುಕ್ತರು ತನಿಖಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next