Advertisement

ಸೋಮಲಿಂಗಪ್ಪರನ್ನು ಮತ್ತೆ ಗೆಲ್ಲಿಸಿದರೆ ಸಚಿವರನ್ನಾಗಿ ಮಾಡಲಾಗುವುದು: ಶ್ರೀರಾಮುಲು

03:51 PM Dec 11, 2022 | Team Udayavani |

ಕುರುಗೋಡು: 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಸೋಮಲಿಂಗಪ್ಪ ಅವರನ್ನು ಮತ್ತೊಮ್ಮೆ ಆರಿಸಿ ತಂದರೆ, ಬಳ್ಳಾರಿ ಜಿಲ್ಲೆಯಲ್ಲಿ ಮೊದಲಿಗೆ ಸೋಮಲಿಂಗಪ್ಪ ಅವರನ್ನು ಸಚಿವರನ್ನಾಗಿ ಮಾಡಲಾಗುವುದು. ಇದು ನಮ್ಮ ಮೊದಲ ಧ್ಯೇಯವಾಗಿದೆ ಎಂದು ಸಾರಿಗೆ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.

Advertisement

ತಾಲೂಕಿನ ಮುದ್ದಟನೂರು ಗ್ರಾಮದ ಗ್ರಾಮ ಪಂಚಾಯಿತಿಯಲ್ಲಿ ಎನ್‌ಎಲ್‌ಆರ್‌ಎಂ ಹಾಗೂ ಎನ್‌ಆರ್‌ಜಿ ಯೋಜನೆಯಡಿಯ ಸುಮಾರು 47 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಭಾರತ್ ನಿರ್ಮಾಣ ಸೇವಾ ಕೇಂದ್ರ(ಗ್ರಾಪಂ) ಕಟ್ಟಡ ಉದ್ಘಾಟಿಸಿ ಮಾತನಾಡಿ, ಗ್ರಾಪಂಗೆ ದೊಡ್ಡ ಶಕ್ತಿ ಇದೆ. ಮೋದಿಜೀ ಅವರು ಪಟ್ಟಣ ಪ್ರದೇಶದ ಅಭಿವೃದ್ಧಿ ಆದರೇ ಅದು ಭಾರತದ ಅಭಿವೃದ್ಧಿ ಅಲ್ಲ. ಬದಲಾಗಿ ಗ್ರಾಮಗಳ ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿ ಎಂದಿದ್ದಾರೆ.

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾಗುತ್ತಿದೆ. ಆದರೆ, 75 ವರ್ಷದಲ್ಲಿ ಇಂತಹ ದೇಶದ ಪ್ರಧಾನಮಂತ್ರಿಯನ್ನು ನೋಡುವದಕ್ಕೆ ಆಗಿಲ್ಲ. ಕೇವಲ ಪ್ರಧಾನಮಂತ್ರಿಗಳು ಅಂದರೆ, ದೆಹಲಿಯಲ್ಲಿ ಕುಂತು ಆಡಳಿತ ಮಾಡವಂತಹ ಕೆಲಸವಾಗುತ್ತದೆ. ಆದರೆ, ಇವತ್ತಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮನ್ ಕೀ ಬಾತ್ ಮೂಲಕ ಗ್ರಾಪಂ ಅಧ್ಯಕ್ಷರ ಹಾಗೂ ಸದಸ್ಯರ ಜೊತೆಗೆ ಮಾತಾಡುತ್ತಾರೆ ಅಂದರೆ, ಗ್ರಾಪಂಗಳ ಮೇಲೆ ಇಟ್ಟಿರುವಂತಹ ವಿಶ್ವಾಸ ಎಷ್ಟಿದೆ ಎಂಬುದು ಗೊತ್ತಾಗುತ್ತದೆ. ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ ಮೂಲಕ ಗ್ರಾಪಂನಿಂದ ದೇಶದ ಅಭಿವೃದ್ಧಿಗೆ ಮುಂದಾಗಿದ್ದಾರೆ ಎಂದರು.

ಮೋದಿಯವರ ದೇಶದ ಅಭಿವೃದ್ಧಿಯಿಂದ ಸಾಕಷ್ಟು ಟೆಕ್ನಾಲಜಿ ಬೆಳೆಯುತ್ತಿದೆ. ಹೊಸ ಹೊಸ ಟೆಕ್ನಾಲಜಿಯೊಂದಿಗೆ ಗ್ರಾಮೀಣ ಭಾಗದ ಜತೆಗೆ ಪ್ರತಿಯೊಂದು ಸೇವೆಗಳು ದೊರೆಯುತ್ತಿವೆ. ಭಾರತ ದೇಶದ ಉಜ್ವಲ ಭವಿಷ್ಯಕ್ಕಾಗಿ ನಾವೆಲ್ಲರೂ ದುಡಿಯಬೇಕು. ಗುಜರಾತ್‌ನಲ್ಲಿ ಕಾಂಗ್ರೆಸ್ ಭದ್ರಕೋಟೆಯನ್ನು ಛಿದ್ರ ಮಾಡಿ, ಬಿಜೆಪಿ ಬಾವುಟ ಹಾರಿಸಿದ ಕೀರ್ತಿ ಮೋದಿಯವರಿಗೆ ಸಲ್ಲುತ್ತದೆ ಎಂದರು.

ಹಳ್ಳಿ ಹಾಗೂ ಗ್ರಾಮದ ಜನರು ಮನಸ್ಸು ಮಾಡಿದರೆ, ದೇಶ ಕಟ್ಟುವ ಕೆಲಸ ಮಾಡುತ್ತಾರೆ. ಶಾಸಕ ಸೋಮಲಿಂಗಪ್ಪ ಅವರು ದೊಡ್ಡ ಶಕ್ತಿಯಾಗಿ ಬೆಳೆದಿದ್ದಾರೆ. ಒಂದೇ ಜಾತಿಗೆ ಸೀಮಿತರಲ್ಲ. ಜನರು ಸೋಮಲಿಂಗಪ್ಪ ಅವರನ್ನು ಪಡೆದುಕೊಂಡಿರುವುದು ಸೌಭಾಗ್ಯವಾಗಿದೆ. ಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿಪುನಃ ಸೋಮಲಿಂಗಪ್ಪ ಅವರನ್ನು ಆಯ್ಕೆ ಮಾಡಿ ಕಳುಹಿಸಿದರೆ, ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಪಾರ್ಟಿ ಅಧಿಕಾರಕ್ಕೆ ಬಂದ ತಕ್ಷಣ, ಮೊದಲ ಮಂತ್ರಿಯಾಗಿ ಸೋಮಲಿಂಗಪ್ಪ ಅವರನ್ನು ಮಾಡುತ್ತೇನೆ. ನಮ್ಮ ಜಿಲ್ಲೆಯಿಂದ ಮೊದಲನೇ ಮಂತ್ರಿಯಾಗಲಿದ್ದಾರೆ. ಸಿರುಗುಪ್ಪ ಭಾಗದಲ್ಲಿ ಏತನೀರಾವರಿಗಾಗಿ ಸೋಮಲಿಂಗಪ್ಪ ಅವರು ಸಂಕಲ್ಪ ಮಾಡಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗುಜರಾತ್‌ನಂತೆ ಕರ್ನಾಟಕದಲ್ಲಿ ಕಾಂಗ್ರೆಸ್ ಧೂಳಿಪಟವಾಗಲಿದೆ. ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್‌ನಲ್ಲಿ ಕುರ್ಚಿಗಾಗಿ ಕಿತ್ತಾಟ ನಡೆದಿದ್ದು, ಈ ಕಿತ್ತಾಟದಿಂದ ಕಾಂಗ್ರೆಸ್ ಕರ್ನಾಟಕದಲ್ಲಿ ಮೂಲೆ ಗುಂಪಾಗಲಿದೆ ಎಂದರು.

Advertisement

ಶಾಸಕ ಎಂ.ಎಸ್.ಸೋಮಲಿಂಗಪ್ಪ ಅವರು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಮುದ್ದಟನೂರು ಗ್ರಾಪಂ ವ್ಯಾಪ್ತಿಯಲ್ಲಿ ಒಳ್ಳೆಯ ಅಭಿವೃದ್ಧಿ ಕಾರ್ಯಗಳು, ನೀರಾವರಿ ಮತ್ತು ಸಾಕಷ್ಟು ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನಮ್ಮ ಕರ್ತವ್ಯವಾಗಿದೆ. ಕೆಲವೊಂದು ಅಡೆತಡೆಗಳ ನಡುವೆ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ಪ್ರಜ್ವಲಿಸಿವೆ. ನೀರು, ರಸ್ತೆ, ಶಿಕ್ಷಣ ಸೇರಿದಂತೆ ಪಟ್ಟಾ ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳಿಗೆ ಭಾರತ್ ನಿರ್ಮಾಣ ಸೇವಾ ಕೇಂದ್ರದ ಕಟ್ಟಡವು ಸಾಕ್ಷಿಯಾಗಿದೆ. ಇತ್ತೀಚೆಗೆ ನಡೆದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಬಲದಂಡೆ ಭಾಗದ ಕೆಳ ಭಾಗದ ರೈತರಿಗೆ ಸುಮಾರು 500 ಕ್ಯೂಸೆಕ್‌ನಷ್ಟು ಬೆಳೆಗಳಿಗೆ ನೀರು, ಕುಡಿಯುವ ನೀರಿಗಾಗಿ ವ್ಯವಸ್ಥೆ ಮಾಡಲಾಗಿದೆ. ಪ್ರೌಢಶಾಲೆಗೆ ಅಡೆತಡೆ ಬಂದವು. ಆದರೂ, ಸಹ ಸುಮಾರು 4 ಎಕರೆ ಜಾಗದಲ್ಲಿ ಪ್ರೌಢಶಾಲಾ ಕಟ್ಟಡ ನಿರ್ಮಾಣ ಮಾಡಲು ಏರ್ಪಾಟು ಮಾಡಲಾಗಿದೆ. ಮುದ್ದಟನೂರು-ನಾಗರಾಜಕ್ಯಾಂಪ್ ಹಾಗೂ ಚನ್ನಪಟ್ಟಣ, ಗುಂಡಿಗನೂರು ಹಳ್ಳಿಗಳ ರಸ್ತೆಗಳ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆಯಾಗಿದ್ದು, ಅತೀ ಶೀಘ್ರದಲ್ಲೇ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಹಿಂದಿನ ದಿನದಲ್ಲಿ ಬೆಳೆ ನಷ್ಟ ಹಾಗೂ ಬೆಂಬಲ ಬೆಲೆ ಸಿಗದೇ, ಸಂಕಷ್ಟಕ್ಕೆ ಒಳಗಾಗಿದ್ದರು. ಆದರೆ, ಈ ಬಾರಿ ಒಳ್ಳೆಯ ಬೆಳೆ ಜತೆಗೆ ಬೆಂಬಲ ಬೆಲೆಯಿಂದಾಗಿ ರೈತರು ಬದುಕು ಸಮೃದ್ಧಿಯಾಗಿದೆ. ಮುದ್ದಟನೂರು ಭಾಗದಲ್ಲಿ ಸುಮಾರು 5 ಎಕರೆ ಜಾಗದಲ್ಲಿ ಮೆಣಸಿನಕಾಯಿ ಕೋಲ್ಡ್ ಸ್ಟೋರ್ ನಿರ್ಮಿಸಲಾಗುವುದು ಎಂದರು.

ನಂತರ ಗ್ರಾಪಂ ಅಧ್ಯಕ್ಷೆ ವೈ.ವೆಂಕಟಲಕ್ಷ್ಮಿ ರಾಮಕೃಷ್ಣ ಅವರು ಮಾತನಾಡಿ, ಗ್ರಾಪಂ ನ ಅಭಿವೃದ್ಧಿಗಾಗಿ ಪ್ರತಿಯೊಬ್ಬರು ಸಹಕಾರ ನೀಡುತ್ತಾ ಬಂದಿದ್ದಾರೆ. ಅವರ ಸಹಕಾರ, ವಿಶ್ವಾಸದಿಂದಾಗಿ ಗ್ರಾಮಗಳ ಅಭಿವೃದ್ಧಿಗೆ ಅಣಿಯಾಗುತ್ತಿದೆ. ಎನ್‌ಎಲ್‌ಆರ್‌ಎಂ ಹಾಗೂ ಎನ್‌ಆರ್‌ಜಿ ಯೋಜನೆಯಡಿಯ ಸುಮಾರು 47 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಸುಂದರವಾದ ಭಾರತ್ ನಿರ್ಮಾಣ ಸೇವಾ ಕೇಂದ್ರ(ಗ್ರಾಪಂ) ಭವ್ಯ ಕಟ್ಟಡ ನಿರ್ಮಿಸಿದ್ದು, ಇದೊಂದು ಮಾದರಿ ಕಟ್ಟಡವಾಗಿದೆ ಎಂದರು.

ಗಣ್ಯರಿಗೆ ಹಾಗೂ ಗ್ರಾಪಂ ಸರ್ವ ಸದಸ್ಯರಿಗೆ, ಮುಖಂಡರಿಗೆ ಸನ್ಮಾನಿಸಿ ಸತ್ಕರಿಸಲಾಯಿತು. ಉದ್ಘಾಟನಾ ಸಮಾರಂಭದ ಮುಂಚಿತವಾಗಿ ಶೃಂಗರಿಸಿದ ಎತ್ತಿನ ಬಂಡಿಯಲ್ಲಿ ಸಚಿವ ಶ್ರೀರಾಮುಲು, ಸೋಮಲಿಂಗಪ್ಪ ಅವರನ್ನು ಮೆರವಣಿಗೆ ಮೂಲಕ ಕರೆತರಲಾಯಿತು.ಈ ಮೆರವಣಿಗೆಯಲ್ಲಿ ಕಲಾ ತಂಡಗಳ ಪ್ರದರ್ಶನ ನೋಡುಗರ ಕಣ್ಮನ ಸೆಳೆಯಿತು.

ಈ ಸಂದರ್ಭದಲ್ಲಿ ಶಾಸಕ ಸೋಮಶೇಖರರೆಡ್ಡಿ, ವಿಎಸ್‌ಎಸ್ ಸಂಘದ ಅಧ್ಯಕ್ಷ ಟಿ.ಸೂರಿಬಾಬು, ಮಾಜಿ ಗ್ರಾಪಂ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಪಿಡಿಒ ಬಸವರಾಜ ಕೆ, ಗ್ರಾಪಂ ಉಪಾಧ್ಯಕ್ಷ ಎಂ.ಭರತ್, ಸರ್ವ ಸದಸ್ಯರು, ಮುಖಂಡರಾದ ಪಾಲಣ್ಣ, ಪ್ರತಾಪ್‌ಚೌದ್ರಿ ಸೇರಿದಂತೆ ಮುಖಂಡರು, ಜನಪ್ರತಿನಿಧಿಗಳು, ಗ್ರಾಪಂ ಸಿಬಂದಿ ವರ್ಗದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next