Advertisement
ಪತ್ತೂರು: ನಗರಸಭಾ ವ್ಯಾಪ್ತಿಯಲ್ಲಿ ಕಸ, ತಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಉಂಟಾಗಿರುವ ಸಮಸ್ಯೆಗಳ ಕುರಿತು ಉದಯವಾಣಿಯ ‘ಸುದಿನ’ದಲ್ಲಿ ಕೆಲವು ದಿನಗಳಿಂದ ಪ್ರಕಟಿಸಲಾಗುತ್ತಿರುವ ಜಾಗೃತಿಯ ಸಚಿತ್ರ ವರದಿ ಫಲ ನೀಡುತ್ತಿದೆ. ಕಸ ವಿಲೇವಾರಿಗೆ ಸಂಬಂಧಿಸಿದ ಸಮಸ್ಯೆ ಸರಿಪಡಿಸಲು ತತ್ ಕ್ಷಣ ಕ್ರಮ ಕೈಗೊಳ್ಳಬೇಕು. ವ್ಯವಸ್ಥೆ ಸರಿಪಡಿಸಿರುವ ಕುರಿತು ಒಂದು ವಾರದಲ್ಲಿ ವರದಿ ಒಪ್ಪಿಸಬೇಕು ಎಂದು ಪುತ್ತೂರು ಸಹಾಯಕ ಕಮಿಷನರ್ ಎಚ್.ಕೆ. ಕೃಷ್ಣಮೂರ್ತಿ ಅವರು ನಗರಸಭಾ ಆರೋಗ್ಯ ವಿಭಾಗದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಕಸ, ತಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ದೂರಿನ ಹಿನ್ನೆಲೆಯಲ್ಲಿ ನಗರ ಸಭಾ ಅಧಿಕಾರಿಗಳು, ಗುತ್ತಿಗೆದಾರರ ಜತೆ ಅವರು ಮಾತುಕತೆ ನಡೆಸಿದರು. ಡೋರ್ ಟು ಡೋರ್ ಕಲೆಕ್ಷನ್ ಸಹಿತ ಒಟ್ಟು ಕಸ ವಿಲೇವಾರಿಗೆ ಸಂಬಂಧಿಸಿ ಹೊಸ ವ್ಯವಸ್ಥೆಯನ್ನು ಮಾಡಲಾಗಿದೆ. ಇದರಿಂದ ಹೊಂದಾಣಿಕೆಯಾಗಲು ಸಮಸ್ಯೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಕಸ ವಿಲೇವಾರಿಗೆ ಸಂಬಂಧಿಸಿದ ಗುತ್ತಿಗೆದಾರರು ಹಾಗೂ ಕೆಲಸಗಾರರಿಗೆ ಇಂದೇ ಎಚ್ಚರಿಕೆ ನೀಡಬೇಕು. ಒಂದು ಬಾರಿ ಸಾರ್ವಜನಿಕರ ಬಳಿಗೆ ಹೋಗಿ ಸರ್ವೇ ಮಾಡಬೇಕು. ಈ ರೀತಿ ಮಾಡುವುದರಿಂದ ಒಂದಷ್ಟು ದಿನ ಕಷ್ಟವಾದರೂ ಮತ್ತೆ ಎಲ್ಲವೂ ಸರಿಯಾಗುತ್ತದೆ. ಒಂದು ವಾರದಲ್ಲಿ ಕಸ ವಿಲೇವಾರಿ ಸರಿಯಾಗಿದೆ ಎಂದು ಸಾರ್ವಜನಿಕರೇ ಹೇಳುವಂತಾಗಬೇಕು ಎಂದು ಸೂಚನೆ ನೀಡಿದರು. ಬೆಳಗ್ಗೆ 6ರಿಂದ 9.30ರ ಅವಧಿಯಲ್ಲಿ ಮನೆ ಮನೆಗೆ ಕಸ ಸಂಗ್ರಹಕ್ಕೆ ಹೋಗಬೇಕು. ಇಷ್ಟು ಗಂಟೆಗೆ ಕಸ ಸಂಗ್ರಹಕ್ಕೆ ಬರುತ್ತಾರೆ ಎಂಬುದು ಸ್ಥಿರವಾದರೆ ಮನೆಯವರು ಕಾದು ನಿಲ್ಲುತ್ತಾರೆ. ಈ ನಿಟ್ಟಿನಲ್ಲಿ ಅನೌನ್ಸ್‌ಮೆಂಟ್‌ಗೂ ವ್ಯವಸ್ಥೆ ಮಾಡಬಹುದು. ಒಟ್ಟಿನಲ್ಲಿ ಪುತ್ತೂರಿನಲ್ಲಿ ಕಸ, ತಾಜ್ಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ದೂರು ಬರದಂತೆ ಕ್ರಮ ಕೈಗೊಳ್ಳಬೇಕು ಎಂದು ನಗರಸಭಾ ಆರೋಗ್ಯ ನಿರೀಕ್ಷಕರಿಗೆ ಸೂಚನೆ ನೀಡಿದರು. ಪಕ್ಕದವರ ನಿರ್ಲಕ್ಷಿಸಬೇಡಿ
ಡಂಪಿಂಗ್ ಯಾರ್ಡ್‌ನ ಪಕ್ಷದಲ್ಲಿರುವ 100 ಮನೆಗಳಿಗೆ ಕಸ ಸಂಗ್ರಹಕ್ಕೆ ಬರುತ್ತಿಲ್ಲ. ಆದರೆ ಹಣ ಸಂಗ್ರಹಕ್ಕೆ ಬರುತ್ತಾರೆ ಎಂದು ಸ್ಥಳೀಯ ನಿವಾಸಿಗಳು ದೂರಿದರು. ಈ ಕುರಿತು ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದ ಸಹಾಯಕ ಕಮಿಷನರ್, ಡಂಪಿಂಗ್ ಯಾರ್ಡ್ ಪಕ್ಕದಲ್ಲಿನ ಮನೆಗಳು ಎಂದು ಕಸ ಸಂಗ್ರಹಕ್ಕೆ ಹೋಗದೆ ನಿರ್ಲಕ್ಷ್ಯ ಮಾಡುವಂತಿಲ್ಲ. ಈ ಮನೆಗಳಿಂದ ಡೋರ್ ಕಲೆಕ್ಷನ್ ಗೆ ಹೋಗಬೇಕು ಎಂದು ತಿಳಿಸಿದರು. ನಗರಸಭಾ ಪೌರಾಯುಕ್ತೆ ರೂಪಾ ಟಿ. ಶೆಟ್ಟಿ, ಹಿರಿಯ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ, ಶ್ವೇತಾ ಕಿರಣ್, ಎಂಜಿನಿಯರ್ ಅರುಣ್ ಕುಮಾರ್, ಗುತ್ತಿಗೆದಾರರು, ಸ್ಥಳೀಯರಾದ ವಿಠಲ ಹೆಗ್ಡೆ, ಬಾಲಚಂದ್ರ, ದುರ್ಗಾಪ್ರಸಾದ್, ವಿಜಿತ್, ಚಂದ್ರ ಗೌಡ ಉಪಸ್ಥಿತರಿದ್ದರು.
Related Articles
ಕಸ, ತಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ 21 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದೇವೆ. ಹೊಸ ವ್ಯವಸ್ಥೆ ಬರುವ ಮೊದಲು ಕೆಲವು ದಿನಗಳಿಂದ ವಿಲೇವಾರಿ ಸ್ಥಗಿತವಾಗಿತ್ತು. ಆದಾಗ್ಯೂ ಶೇ. 80ರಷ್ಟು ವಿಲೇವಾರಿ ಮಾಡಿದ್ದೇವೆ. ಸಮಸ್ಯೆ ಆಗಿರುವಲ್ಲಿ ಹೆಚ್ಚಿನ ಗಮನ ಹರಿಸುತ್ತೇವೆ.
– ಚಿದಾನಂದ, ಗುತ್ತಿಗೆದಾರರ ಪರ ಸಿಬಂದಿ
Advertisement