ಕಾರವಾರ: ಅರಣ್ಯ ಭೂಮಿ ಹಕ್ಕು ಮಂಜೂರಿ ಪ್ರಕ್ರಿಯೆ ನಾಮನಿರ್ದೇಶನ ಸದಸ್ಯರ ಅನುಪಸ್ಥಿತಿಯಲ್ಲಿ ಮಾಡಲಾಗುತ್ತಿದೆ. ಅಲ್ಲದೇ ಅರಣ್ಯ ಸಾಗುವಳಿ ಮಾಡಿದ ವ್ಯಕ್ತಿಯ ಮೂರು ತಲೆಮಾರಿನ ದಾಖಲೆಗಳನ್ನು ಕೇಳುತ್ತಿರುವುದಕ್ಕೆ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತಲ್ಲದೇ, ಕಾನೂನು ಬಾಹಿರವಾಗಿ ದಾಖಲೆಗಳನ್ನು ಕೇಳುವುದಕ್ಕೆ ಆತಂಕ ವ್ಯಕ್ತಪಡಿಸಿತು. ಈ ಸಂಬಂಧ ಡಿಸಿ ಮುಲ್ಲೈ ಮುಗಿಲನ್ ಅವರಿಗೆ ಮನವಿ ಸಲ್ಲಿಸಲಾಯಿತು.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಅರಣ್ಯ ಅತಿಕ್ರಮಣ ಸಕ್ರಮಾತಿಗೆ ಆಗ್ರಹಿಸಿ ವಿವಿಧ ತಾಲೂಕುಗಳ ಮುಖಂಡರ ನಿಯೋಗ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆ ನೈಜತೆಯನ್ನು ಚರ್ಚಿಸಿತು. ಅರಣ್ಯ ಹಕ್ಕು ಕಾಯ್ದೆಯನ್ನು ಸಮಾಜ ಕಲ್ಯಾಣ ಇಲಾಖೆ ಹಾಗೂ ಅರಣ್ಯಾಧಿಕಾರಿಗಳು ಭಿನ್ನವಾಗಿ, ರೈತ ವಿರೋಧಿಯಾಗಿ ಅರ್ಥೈಸುತ್ತಿರುವುದನ್ನು ವಿವರಿಸಲಾಯಿತು. ಅರಣ್ಯ ಹಕ್ಕು ಕಾಯಿದೆಗೆ ವ್ಯತಿರಿಕ್ತವಾಗಿ ನಾಮನಿರ್ದೇಶಿತ ಸದಸ್ಯರ ಅನುಪಸ್ಥಿತಿಯಲ್ಲಿ ಅರಣ್ಯ ಭೂಮಿ ಮಂಜೂರಾತಿ ನಡೆಯುತ್ತಿದೆ. ಹಾಗೂ ಮೂರು ತಲೆಮಾರಿನ ಪೂರ್ವದಿಂದ ದೃಢೀಕೃತ ಅಂಶ ಮತ್ತು ವಾಸ ಮಾಡುವ ಭೂಮಿ ಕಬ್ಜ ಹೊಂದಿರುವ ವೈಯಕ್ತಿಕ ದಾಖಲೆ ಹಾಜರುಪಡಿಸಲು ಕೇಳಲಾಗುತ್ತಿದೆ. ಇದು ಕಾನೂನಿಗೆ ವ್ಯತಿರಿಕ್ತವಾಗಿದೆ. ಕಾನೂನು ಮತ್ತು ಸರಕಾರದ ಆದೇಶದಲ್ಲಿ ಉಪವಿಭಾಗ ಸಮಿತಿ ಅರಣ್ಯ ಅತಿಕ್ರಮಣದಾರರಿಗೆ ವಿಚಾರಣೆ ನೋಟಿಸ್ ನೀಡುತ್ತಿರುವುದು ಆಕ್ಷೇಪಾರ್ಹ. ತಕ್ಷಣ ಕಾನೂನು ಬಾಹಿರ ಅರಣ್ಯ ಅತಿಕ್ರಮಣದಾರರ ಪುನರ್ ಪರಿಶೀಲನೆ ಅರ್ಜಿ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿದರು.
ಪಾರಂಪರಿಕ ಅರಣ್ಯವಾಸಿಗಳ ಅರ್ಜಿ ಮಂಜೂರಿಗೆ ಸಂಬಂಧಿಸಿ ನಿರ್ದಿಷ್ಟ ದಾಖಲೆಗಳಿಗೆ ಒತ್ತಾಯಿಸತಕ್ಕದ್ದಲ್ಲ ಎಂದು ಕಾನೂನಿನಲ್ಲಿ ಉಲ್ಲೇಖವಿದ್ದಾಗಲೂ ದಾಖಲೆಗಳಿಗೆ ಒತ್ತಾಯಿಸುವುದು ಸರಿಯಿಲ್ಲ. ಅಲ್ಲದೇ, ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರದ ಪರಿಸರವು ಮೂರು ತಲೆಮಾರಿನ ಜನವಸತಿ ಪ್ರದೇಶವೆಂದು ಪುರಾವೆ ಮಾಡಿದರೆ ಸಾಕು ಎಂಬ ಕೇಂದ್ರ ಬುಡಕಟ್ಟು ಮಂತ್ರಾಲಯ ನೀಡಿದ ಆದೇಶವನ್ನು ಜಿಲ್ಲಾಡಳಿತ ನಿರ್ಲಕ್ಷಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿತು. ಮೂರು ತಲೆಮಾರಿನ ಜನವಸತಿ ಪ್ರದೇಶ ಎಂದು ಇರುವ ಅಂಶವನ್ನು ಪರಿಗಣಿಸತಕ್ಕದೆಂದು ಮನವಿ ನೀಡಿದ ನಂತರ ಜಿಲ್ಲಾಧಿಕಾರಿ ಜೊತೆ ನಡೆದ ಚರ್ಚೆಯಲ್ಲಿ ಮನವರಿಕೆ ಮಾಡಲಾಯಿತು.
ಕುಮಟಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ಮಂಜುನಾಥ ಮರಾಠಿ ನಾಗೂರು, ಜಿಲ್ಲಾ ಸಂಚಾಲಕ ರಾಜೇಶ ಮಿತ್ರ ನಾಯ್ಕ ತೆಂಗಿನಕೇರಿ, ಶಾಂತಾ ತಿಮ್ಮಣ್ಣ ಕುಣಬಿ ಹರೂರ, ಇಜಾಜ್ ಎ ಶೇಖ್ ಮಲ್ಲಾಪುರ, ರೋಹಿದಾಸ ವೆಂಗಣಕರ್ ಕಾರವಾರ ಮುಂತಾದವರು ನಿಯೋಗದಲ್ಲಿ ಇದ್ದರು.
ಸದಸ್ಯರಿಲ್ಲದೇ, ಮಂಜೂರಿ ಪ್ರಕ್ರಿಯೆ: ಕಾನೂನಿನ ಸಮಿತಿಯಲ್ಲಿ ಮೂರು ಜನ ನಾಮನಿರ್ದೇಶನ ಸದಸ್ಯರನ್ನು ಒಳಗೊಂಡ ಒಟ್ಟು ಆರು ಸದಸ್ಯರು ಇರಬೇಕೆಂಬ ಅಂಶವನ್ನ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಕೇವಲ ಅಧಿಕಾರಿ ವರ್ಗಗಳ ಸದಸ್ಯರ ಉಪಸ್ಥಿತಿಯಲ್ಲಿ ಅರ್ಜಿಗಳನ್ನು ಪುನರ್ ಪರಿಶೀಲಿಸುತ್ತಿರುವುದಕ್ಕೆ ಅರಣ್ಯ ಹಕ್ಕು ಹೋರಾಟ ಸಮಿತಿ ಆಕ್ಷೇಪ ವ್ಯಕ್ತಪಡಿಸಿತು.
ಸಾರ್ವಜನಿಕ ಹಿತಾಸಕ್ತಿ ಅರ್ಜಿ: ಕಾನೂನಿಗೆ ವ್ಯತಿರಿಕ್ತವಾಗಿ, ಕಾನೂನಿನ ವಿಧಿ-ವಿಧಾನ ಅನುಸರಿಸದೇ ಅರ್ಜಿ ವಿಲೇವಾರಿ ಮಾಡುವ ಕ್ರಮಕ್ಕೆ ಹೋರಾಟಗಾರರ ವೇದಿಕೆ ಸಲ್ಲಿಸಿದ ಆಕ್ಷೇಪಕ್ಕೆ ಮಾನ್ಯತೆ ದೊರಕದಿದ್ದಲ್ಲಿ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗುವುದೆಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.