ಬೀದರ: ಗಡಿಭಾಗದ ಹಳ್ಳಿಗಳಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸರ್ಕಾರಿ ಮಟ್ಟದಲ್ಲಿ ಇನ್ನೂ ಅನೇಕ ಸಮಸ್ಯೆಗಳಿವೆ. ಗಡಿಯಲ್ಲಿರುವ ಶಾಲೆಗಳಲ್ಲಿ ಓದಿರುವ ಮಕ್ಕಳಿಗೆ ಮುಂದೆ ಸರ್ಕಾರಿ ನೌಕರಿಗೆ ಸಂಬಂಧಿಸಿದಂತೆ ಅನೇಕ ತೊಡಕುಗಳಿವೆ. ಹೀಗಾಗಿ ಸರ್ಕಾರ ತಕ್ಷಣವೇ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕಾರ್ಯ ಮಾಡಬೇಕೆಂದು ಸಾಹಿತಿ ಬಸವರಾಜ ಮೂಲಗೆ ತಿಳಿಸಿದರು.
ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕ ಸಾಹಿತ್ಯ ಸಂಘದ ಆಶ್ರಯದಲ್ಲಿ ತಾಲೂಕಿನ ಚಿಲ್ಲರ್ಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಗಡಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗಡಿ ಸಮಸ್ಯೆ ಆರಂಭವಾಗಿರುವುದು 1956ರಿಂದ. ಹೀಗಾಗಿ ಇಂದಿಗೂ ಗಡಿಭಾಗದ ಶಾಲೆಗಳಲ್ಲಿ ಇನ್ನೂ ವಿದ್ಯಾರ್ಥಿನಿಯರಿಗಾಗಿ ಶೌಚಾಲಯಗಳಿಲ್ಲ. ಸರಿಯಾದ ರಸ್ತೆಗಳಿಲ್ಲ. ಕಾಲುವೆ ವ್ಯವಸ್ಥೆಗಳಿಲ್ಲ. ಕುಡಿಯುವ ನೀರಿನ ಸೌಲಭ್ಯಗಳಿಲ್ಲ. ಓದುವ ಮಕ್ಕಳಿಗೆ ಅಚ್ಚುಕಟ್ಟಾದ ಶಾಲಾ ಕಟ್ಟಡಗಳಿಲ್ಲ. ಇಂತಹ ನೂರಾರು ಸಮಸ್ಯೆಗಳಿಗೆ ಸರ್ಕಾರ ಕೂಡಲೇ ಸ್ಪಂದಿಸಿ ಪರಿಹಾರ ನೀಡಬೇಕೆಂದು ತಿಳಿಸಿದರು.
ಸಂಘದ ಅಧ್ಯಕ್ಷ ಡಾ| ಜಗನ್ನಾಥ ಹೆಬ್ಟಾಳೆ ಮಾತನಾಡಿ, ಪ್ರಾಧಿಕಾರ ಗಡಿಭಾಗದ ಸಮಸ್ಯೆಗಳನ್ನು ನಿವಾರಿಸಲು ಕಂಕಣಬದ್ಧವಾಗಿ ನಿಂತಿದೆ. ವಿದ್ಯಾರ್ಥಿಗಳ ಸರ್ವೋತ್ತಮ ಬೆಳವಣಿಗೆಗಾಗಿ ಗಡಿ ಅಭಿವೃದ್ಧಿ ಪ್ರಾಧಿಕಾರ ಹುಟ್ಟಿಕೊಂಡು ಕಾರ್ಯ ನಿರ್ವಹಿಸುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ನಾಡು-ನುಡಿಯ ಸಂಸ್ಕೃತಿಯನ್ನು ನಿರ್ಮಾಣಗೊಳ್ಳುವಲ್ಲಿ ಜೀವನ ನಡೆಸಬೇಕು. ಉತ್ತಮ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು. ಗಡಿಭಾಗದಲ್ಲಿ ಕಟ್ಟಡಗಳ ಜೊತೆಗೆ ಜನರಲ್ಲಿ ಸಾಹಿತ್ಯ-ಸಂಸ್ಕೃತಿಯ ಅಭಿವೃದ್ಧಿಯಾಗಬೇಕೆಂದು ಸಲಹೆ ನೀಡಿದರು.
ಗ್ರಾಪಂ ಅಧ್ಯಕ್ಷ ಜೈರಾಜ್ ಸೋನಿ ಅಧ್ಯಕ್ಷತೆ ವಹಿಸಿ ಗಡಿ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತಾ ಮಾತನಾಡಿದರು. ಸಂಘದ ಉಪಾಧ್ಯಕ್ಷ ಪ್ರೊ| ಎಸ್.ಬಿ. ಬಿರಾದಾರ, ಎಸ್ ಡಿಎಂಸಿ ಅಧ್ಯಕ್ಷ ಪಂಡರಿ, ಸಂಸ್ಕೃತಿಕ ಚಿಂತಕ ಶ್ರೀನಿವಾಸರೆಡ್ಡಿ ಇದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಬಹುಮಾನ ವಿತರಣೆ ಮಾಡಲಾಯಿತು.
ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿ ಡಾ| ರಾಜಕುಮಾರ ಹೆಬ್ಟಾಳೆ ನಿರೂಪಿಸಿದರು. ನಿಜಲಿಂಗಪ್ಪ ತಗಾರೆ ಸ್ವಾಗತಿಸಿದರು. ಮುಖ್ಯಗುರು ಪಂಡರಿನಾಥ ಮೇತ್ರೆ ವಂದಿಸಿದರು.
ರವಿ ತೆಲಂಗಾಣೆ, ಗೀತಾ ಮೂಲಗೆ, ಸವಿತಾ ಸಾಕೊಳೆ, ಮೀನಾಕ್ಷಿ ತಗಾರೆ, ಮಲ್ಲಮ್ಮ ಸಂತಾಜಿ, ಡಾ| ಸಾವಿತ್ರಿಬಾಯಿ ಹೆಬ್ಟಾಳೆ, ಡಾ| ಸುನಿತಾ ಕೂಡ್ಲಿಕರ್, ಡಾ| ಮಹಾನಂದ ಮಡಕಿ, ಜಗದೇವಿ ಬಿಚಕುಂದೆ, ಪುಷ್ಪಾವತಿ ಫುಲಾರೆ, ಶೋಭಾ ಲದ್ದೆ, ಶಿವಶರಣಪ್ಪ ಗಣೇಶಪುರ ಇದ್ದರು. ಜಾನಪದ ಕಲಾವಿದರಾದ ಎಸ್.ಬಿ. ಕುಚಬಾಳ, ದೇವಿದಾಸ ಚಿಮಕೋಡೆ, ಬಕ್ಕಪ್ಪ ದಂಡಿನ್, ವೀಣಾ ಚಿಮಕೋಡೆ, ಜಗದೇವಿ ಬಿಚಕುಂದೆ ಮತ್ತು ಅಂಬಿಕಾ ಸಂಗಡಿಗರಿಂದ ಜಾನಪದ ಗೀತಗಾಯನ ಕಾರ್ಯಕ್ರಮ ನೆರವೇರಿತು.