Advertisement

ಸಮಸ್ಯೆಗಳಿಗೆ ಸಾಧ್ಯವಾದಷ್ಟು ಸ್ಥಳದಲ್ಲೇ ಪರಿಹಾರ

03:37 PM Apr 17, 2022 | Team Udayavani |

ರೋಣ: ಗ್ರಾಮೀಣ ಜನರ ಬೇಡಿಕೆಗಳನ್ನು ಈಡೇರಿಸಲು, ಗ್ರಾಮೀಣ ಭಾಗದ ಸಮಗ್ರ ಅಭಿವೃದ್ಧಿಗೆ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರ ಸಹಕಾರ ಅಗತ್ಯವೆಂದು ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಹೇಳಿದರು.

Advertisement

ರೋಣ ತಾಲೂಕಿನ ಮಲ್ಲಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕರ ಅಹವಾಲು ಅರ್ಜಿಗಳ ಕುರಿತು ಮಾತನಾಡಿದ ಅವರು, ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಜನರ ನಿರೀಕ್ಷೆಗಳು ಅಪಾರವಾಗಿವೆ. ಅವುಗಳನ್ನು ಸರ್ಕಾರದ ಮಾರ್ಗಸೂಚಿಗಳ ಇತಿಮಿತಿಯಲ್ಲಿ ಪರಿಹರಿಸಲಾಗುವುದು. ಸಾರ್ವಜನಿಕರು ನೀಡಿದ ಎಲ್ಲ ಅರ್ಜಿಗಳನ್ನು ಎಷ್ಟು ಸಾಧ್ಯವೋ ಅಷ್ಟು ಸ್ಥಳದಲ್ಲೇ ಪರಿಹಾರಕ್ಕೆ ಪ್ರಯತ್ನಿಸಲಾಗುವುದು. ಹೆಚ್ಚಾಗಿ ಅರ್ಜಿಗಳು ನಿವೇಶನ, ಮನೆ ಹಾಗೂ ರಸ್ತೆ ಕಟ್ಟಡ ನಿರ್ಮಾಣ ಕುರಿತು ಸ್ವೀಕೃತವಾಗಿದ್ದು, ಅವುಗಳನ್ನು ಗ್ರಾಪಂ ಮಟ್ಟದಲ್ಲಿ ಕ್ರಮ ಕೈಗೊಳ್ಳುವ ಮೂಲಕ ಪರಿಹಾರ ನೀಡಬಹುದಾಗಿದೆ. ಗ್ರಾಮದ ರೈತರು ಜಮೀನು ನೀಡಲು ಮುಂದೆ ಬಂದಲ್ಲಿ ಸೂಕ್ತ ದರ ನೀಡಿ, ಅಲ್ಲಿ ನಿವೇಶನ ಮಾಡಿ ಹಂಚಿಕೆ ಮಾಡಲು ತಿಳಿಸಲಾಗಿದೆ ಎಂದರು.

ಗ್ರಾಮದ ರುದ್ರಭೂಮಿಗೆ ನಿಗದಿಪಡಿಸಿ 10 ಲಕ್ಷ ರೂ. ಅನುದಾನದಲ್ಲಿ ಅಭಿವೃದ್ಧಿಪಡಿಸಲು ಚಾಲನೆ ನೀಡಲಾಗಿದೆ. ಸರ್ಕಾರದ ಯೋಜನೆಗಳನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕೆಂದರು.

ಕಂದಾಯ ವಿಷಯಗಳಿಗೆ ಸಂಬಂಧಿಸಿದಂತೆ ಸ್ವೀಕೃತವಾದ ಅರ್ಜಿಗಳಿಗೆ ಪರಿಹಾರ ಕಲ್ಪಿಸುವುದು ಇದರ ಮುಖ್ಯ ಉದ್ದೇಶ. ಆದರೂ, ಇಲ್ಲಿ ಎಲ್ಲ ಅರ್ಜಿಗಳನ್ನು ಸ್ವೀಕರಿಸಿ ಪರಿಹಾರಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದರು.

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಪಿಂಚಣಿ, ಆಧಾರ್‌ ತಿದ್ದುಪಡಿ, ಭೂ ದಾಖಲೆಗಳ, ಪಡಿತರ ಚೀಟಿ ಹಾಗೂ ಕೆರೆಗಳ ಜಮೀನು ಖರೀದಿ ಕುರಿತು ಸಮಸ್ಯೆ ಇತ್ಯರ್ಥಪಡಿಸಲಾಗುವುದು. ಈ ಕಾರ್ಯಕ್ರಮದ ಚೌಕಟ್ಟಿನೊಳಗೆ ಸಾಧ್ಯವಾದಷ್ಟು ಸಮಸ್ಯೆಗಳನ್ನು ಇತ್ಯರ್ಥ ಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಇಂದು ಸ್ವೀಕರಿಸಲಾದ ಎಲ್ಲ ಅರ್ಜಿಗಳನ್ನು ಖುದ್ದಾಗಿ ಪರಿಶೀಲಿಸಿ ಸಮಸ್ಯೆಗಳಿಗೆ ಪರಿಹಾರ ನೀಡಲು ಪ್ರಯತ್ನಿಸಲಾಗಿದೆ. ಬಾಕಿ ಉಳಿದ ಅರ್ಜಿಗಳನ್ನು ಶೀಘ್ರ ಇತ್ಯರ್ಥಪಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

Advertisement

ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮ ಈ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವಾಗಿದೆ. ಈವರೆಗೆ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ಆಯ್ದ 5 ತಾಲೂಕಿನ 5 ಗ್ರಾಮಗಳಲ್ಲಿ ಕಾರ್ಯಕ್ರಮ ಮಾಡಿದ್ದಾರೆ. ಇದು 6ನೇ ಕಾರ್ಯಕ್ರಮ ಎಂದರು.

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಅಂದಾಜು 200 ಅರ್ಜಿಗಳು ಸ್ವೀಕೃತವಾಗಿದ್ದು, ಅವುಗಳಲ್ಲಿ 190 ಅರ್ಜಿಗಳಿಗೆ ಪರಿಹಾರ ನೀಡಿ ವಿಲೇವಾರಿ ಮಾಡಲಾಯಿತು. ಇನ್ನುಳಿದ 10 ಅರ್ಜಿಗಳನ್ನು ಸಂಬಂಧಿಸಿದ ಇಲಾಖೆಗಳಿಗೆ ಸೂಕ್ತ ಕ್ರಮಕ್ಕೆ ಕಳುಹಿಸಲಾಗಿದೆ. ಆರೋಗ್ಯ ಇಲಾಖೆಯಿಂದ ಏರ್ಪಡಿಸಿದ್ದ ಆರೋಗ್ಯ ತಪಾಸಣೆ ಶಿಬಿರದಲ್ಲಿ 200 ಜನರ ಆರೋಗ್ಯ ತಪಾಸಣೆ ಮಾಡಲಾಯಿತು. ಪಶು ಸಂಗೋಪಾನ ಇಲಾಖೆಯಿಂದ 100ಕ್ಕೂ ಹೆಚ್ಚು ಜಾನುವಾರುಗಳನ್ನು ತಪಾಸಣೆಗೆ ಒಳಪಡಿಸಲಾಯಿತು. 1500 ಕುರಿಗಳಿಗೆ ಜಂತು ನಾಶಕ ಔಷಧ ವಿತರಣೆ ಮಾಡಲಾಯಿತು. 900 ಕುರಿ ಆಡುಗಳಿಗೆ ಲಸಿಕೆ ನೀಡಲಾಗಿದೆ ಎಂದರು.

ಸೌಲಭ್ಯ ವಿತರಣೆ: ವಿಕಲಚೇತನರ ಕಲ್ಯಾಣ ಇಲಾಖೆ ವತಿಯಿಂದ ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್‌ ಹಾಗೂ ಶ್ರವಣ ಸಾಧನಾ ಸಲಕರಣೆಗಳನ್ನು ವಿತರಿಸಲಾಯಿತು. ರಾಷ್ಟ್ರ ಮಟ್ಟದ ಅಥ್ಲೆಟಿಕ್‌ನಲ್ಲಿ ಭಾಗವಹಿಸಿದ್ದ ವಿಕಲಚೇನತರನ್ನು ಜಿಲ್ಲಾಧಿಕಾರಿಗಳು ಸನ್ಮಾನಿಸಿದರು. ಆರೋಗ್ಯ ಇಲಾಖೆಯ ಸಂಜೀವಿನಿ ಒಕ್ಕೂಟದಿಂದ ಸ್ವಸಹಾಯ ಸಂಘಗಳ ಮಹಿಳಾ ಸದಸ್ಯರಿಗೆ ಕಿರು ಸಾಲ ಯೋಜನೆಯಡಿ 1.5 ಲಕ್ಷ ರೂ. ಚೆಕ್‌ ವಿತರಣೆ ಮಾಡಲಾಯಿತು. ಕೃಷಿ ಇಲಾಖೆಯಿಂದ ಫಲಾನುಭವಿಗಳಿಗೆ ಟ್ರ್ಯಾಕ್ಟರ್ ಹಾಗೂ ಕೃಷಿ ಉಪಕರಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸುಕನ್ಯಾ ಸಮೃದ್ಧಿ ಯೋಜನೆಯಡಿ ಪಾಸ್‌ಬುಕ್‌, ಕಂದಾಯ ಇಲಾಖೆಯಿಂದ ಮಾಸಾಶನ ಆದೇಶ ಪ್ರತಿ, ಚುನಾವಣಾ ಗುರುತಿನ ಚೀಟಿ, ಪಿಟಿ ಸಿಟ್‌ ಹಾಗೂ 11ಇ ನಕಾಶೆಗಳನ್ನು ವಿತರಿಸಲಾಯಿತು. ತಾ‌ಪಂ ವತಿಯಿಂದ ವಿವಿಧ ಯೋಜನೆಗಳ ಕಾಮಗಾರಿಗಳ ಆದೇಶ ಪ್ರತಿಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಲ್ಲಾಪುರ ಗ್ರಾಪಂ ಅಧ್ಯಕ್ಷೆ ಗಿರಿಜಮ್ಮ ಹಟ್ಟಿ, ಉಪಾಧ್ಯಕ್ಷ ಹನುಮಂತಗೌಡ ಹುಲ್ಲೂರ, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ತಹಶೀಲ್ದಾರ್‌ ಜಿ.ಬಿ. ಜಕ್ಕನಗೌಡರ್‌, ಜಿಪಂ ಉಪ ಕಾರ್ಯದರ್ಶಿ ಕಲ್ಲೇಶ್‌ ಬಿ., ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪ್ರಶಾಂತ ವರಗಪ್ಪನವರ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸವಲಿಂಗಪ್ಪ, ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ ಎ., ಭೂ ದಾಖಲೆಗಳ ಇಲಾಖೆ ಉಪನಿರ್ದೇಶಕ ರವಿಕುಮಾರ, ಜಿಲ್ಲಾಧಿ ಕಾರಿಗಳ ಕಚೇರಿಯ ತಹಶೀಲ್ದಾರ್‌ ಪರಸಪ್ಪ ಕಲಾಲ, ವಾರ್ತಾಧಿಕಾರಿ ವಸಂತ ಮಡ್ಲೂರ, ಪಿಡಿಒ ಲೋಹಿತ್‌ ಎಂ. ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿ ಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next