ಧಾರವಾಡ: ಧಾರವಾಡ ಹಾಲು ಉತ್ಪಾದನಾ ಒಕ್ಕೂಟಕ್ಕಾಗಿ ಕೆಐಎಡಿಬಿ ವಶಪಡಿಸಿಕೊಂಡಿದ್ದ ಭೂಮಿಗೆ ಪರಿಹಾರ ನೀಡುವಲ್ಲಿ ಆಗಿರುವ ವಿಳಂಬಕ್ಕಾಗಿ ನ್ಯಾಯಾಲಯದ ಆದೇಶದಂತೆ ಕೆಐಎಡಿಬಿ ಕಚೇರಿಯನ್ನು ಜಪ್ತಿ ಮಾಡಿದ ಘಟನೆ ಮಂಗಳವಾರ ನಡೆದಿದೆ.
1987ರಲ್ಲಿ ಧಾರವಾಡ ಹಾಲು ಉತ್ಪಾದನಾ ಒಕ್ಕೂಟಕ್ಕಾಗಿ ಹೊಸಯಲ್ಲಾಪುರ ನಿವಾಸಿ ನಾಗವೇಣಿ ಕಾನಕುಬj ಎಂಬವರಿಂದ 4.18 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ ಭೂಮಿಗೆ ನೀಡಿರುವ ಎಕರೆಗೆ 6,500 ರೂ. ಬೆಲೆ ಕಡಿಮೆ ಇದೆ ಎಂದು ಭೂ ಮಾಲೀಕರಾದ ನಾಗವೇಣಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ 2ನೇ ಅಧಿಕ ದಿವಾಣಿ ನ್ಯಾಯಾಲಯದ ನ್ಯಾಯಾಧೀಶರು, ಪ್ರತಿ ಎಕರೆಗೆ 71,874 ರೂ. ನೀಡುವಂತೆ ಆದೇಶ ನೀಡಿದ್ದರು. ಆದರೆ ಕೆಐಎಡಿಬಿ ಅವರು 2ನೇ ಅಧಿಕ ದಿವಾಣಿ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು.
ನಂತರದಲ್ಲಿ ಸುಪ್ರೀಂ ಕೋರ್ಟ್‌ಗೆ ಸಹ ಮನವಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಡಿಕ್ರಿಹೋಲ್ಡರ್ ನಾಗವೇಣಿ ಪರ ಆದೇಶ ನೀಡಿತ್ತು. ಇಷ್ಟಾದರೂ ಸಹ ಕೆಐಎಡಿಬಿ ಹಣ ನೀಡದ ಕಾರಣ ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದರು.
ಆಗ 2ನೇ ಅಧಿಕ ದಿವಾಣಿ ನ್ಯಾಯಾಲಯ, ನಾಗವೇಣಿ ಅವರಿಗೆ 17.63 ಲಕ್ಷ ರೂ. ನೀಡುವಂತೆ ಆದೇಶ ನೀಡಿದೆ. ಆದರೆ, ಈವರೆಗೆ ಭೂಮಿಗೆ ಸೂಕ್ತ ಪರಿಹಾರ ನೀಡದ ಕಾರಣ ಮಂಗಳವಾರ ಕಚೇರಿಯ ಪೀಠೊಪಕರಣಗಳನ್ನು ಜಪ್ತಿ ಮಾಡಲಾಯಿತು.
ಕೆಐಎಡಿಬಿ ಕಚೇರಿಗೆ ಆಗಮಿಸಿದ ಕಕ್ಷಿದಾರರ ಪರ ವಕೀಲರು ಕಚೇರಿಯಲ್ಲಿದ್ದ 4 ಕಂಪ್ಯೂಟರ್, 8 ಕುರ್ಚಿ, 2 ವಿಐಪಿ ಕುರ್ಚಿ, 2 ಪ್ರಿಂಟರ್ ಹಾಗೂ ಒಂದು ಫ್ಯಾನ್ ಕುರ್ಚಿ ಪಡೆದುಕೊಂಡರು. ಕಕ್ಷಿದಾರರ ಪರ ಆಶೀಷ ಮಗದೂಮ್ ವಕಾಲತ್ತು ವಹಿಸಿದ್ದರು. ಕೋರ್ಟಿನ ಸಿಬ್ಬಂದಿಗಳಾದ ಎಫ್.ಸಿ. ಭಾವಿಕಟ್ಟಿ ಹಾಗೂ ಜಿ.ಟಿ.ಗೊಲ್ಲರ ಇದ್ದರು.