Advertisement

ಸೌಖ್ಯ ಸಂಧಾನ

07:12 PM Oct 22, 2019 | Lakshmi GovindaRaju |

ನನ್ನ ವಯಸ್ಸು 26. ವಿವಾಹಿತೆ. ಸಿಸೇರಿಯನ್‌ ಮೂಲಕ ಒಂದು ಹೆಣ್ಣು ಮಗುವಿಗೆ ಜನ್ಮವಿತ್ತಿದ್ದೇನೆ. ಸಿಸೇರಿಯನ್‌ ಹೆರಿಗೆಯಾದರೆ, ಮಗು ಜನಿಸಿದ ಎಷ್ಟು ವಾರಗಳ ನಂತರ ಮತ್ತೆ ಲೈಂಗಿಕ ಕ್ರಿಯೆ ನಡೆಸಬಹುದು? ಇನ್ನೂ ಮೂರ್ನಾಲ್ಕು ವರ್ಷಗಳವರೆಗೆ ಮಕ್ಕಳಾಗದಿರಲು ಗರ್ಭ­ನಿರೋಧಕ ಮಾತ್ರೆ ಸೇವಿಸುವುದು ಅಥವಾ ಕಾಪರ್‌-ಟಿ ಧರಿಸಿಕೊಳ್ಳುವುದು ಇವೆರಡರಲ್ಲಿ ಯಾವುದು ಉತ್ತಮ? ಕಾಪರ್‌-ಟಿ ಧರಿಸಿದರೆ ಲೈಂಗಿಕ ಕ್ರಿಯೆ ನಡೆಸುವಾಗ ಏನಾದರೂ ತೊಂದರೆಯಾಗುವ ಸಾಧ್ಯತೆ ಇದೆಯೆ? ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರದ ಉತ್ತಮ ಗರ್ಭನಿರೋಧಕ ಮಾತ್ರೆ ಯಾವುದು?
ವಿನಯಾ, ಬೆಂಗಳೂರು
ಸಿಸೇರಿಯನ್‌ ಶಸ್ತ್ರಕ್ರಿಯೆಯಾದ ಅನಂತರ ಗಾಯ ವಾಸಿಯಾಗಿ, ರಕ್ತಸ್ರಾವವಾಗುವುದು ನಿಂತು ಮತ್ತೇನೂ ತೊಂದರೆ ಇಲ್ಲದಿದ್ದರೆ 2 ತಿಂಗಳ ಅನಂತರ ಲೈಂಗಿಕಕ್ರಿಯೆ ಪ್ರಾರಂಭಿಸಬಹುದು. ಆದರೆ ಆ ಕೂಡಲೇ ಗರ್ಭಧಾರಣೆ ಆಗದಿರಲು ಗರ್ಭನಿರೋಧಕ ಬಳಕೆ ಮಾಡಬೇಕು.
ವಂಕಿ (ಕಾಪರ್‌-ಟಿ)ಯನ್ನು ಹಾಕಿಸಿದರೆ ಸಾಮಾನ್ಯವಾಗಿ ತೊಂದರೆಯೇನಿಲ್ಲ. ಮೂರು ತಿಂಗಳವರೆಗೆ ಯಾವ ತೊಂದರೆಯೂ ಆಗದಿದ್ದರೆ, 3 ವರ್ಷಗಳವರೆಗೆ ಮುಂದು ವರಿಸಬಹುದು. ಯಾವುದಾದರೂ ತೊಂದರೆ ಕಂಡರೂ ಅದನ್ನು ಸುಲಭವಾಗಿ ಹೊರತೆಗೆಯಬಹುದು. ವಂಕಿ ಯಿಂದಾಗಿ ಲೈಂಗಿಕ ಕ್ರಿಯೆಗೆ ಯಾವುದೇ ತೊಂದರೆ ಆಗುವುದಿಲ್ಲ. 6 ತಿಂಗಳ ನಂತರ ಗರ್ಭನಿರೋಧಕ ಮಾತ್ರೆಗಳನ್ನು ಬಳಸಬಹುದು. ಅದರಿಂದ ಹಾಲಿನ ಉತ್ಪತ್ತಿಗೆ ತೊಂದರೆಯಾ­ಗುವುದಿಲ್ಲ. ಎರಡು ತಿಂಗಳಿನಿಂದ ಬರಿಯ ಪ್ರೊಜೆಸ್ಟಿರೋನ್‌ಯುಕ್ತ ಮಾತ್ರೆಗಳನ್ನು ದಿನವೂ ಸೇವಿಸಬಹುದು.

ನನ್ನ ಹಿರಿಯ ಮಗಳಿಗೆ 37 ವರ್ಷ. ಮದುವೆಯಾಗಿ 17 ವರ್ಷವಾಯಿತು. ಮಕ್ಕಳಿಲ್ಲ. ತುಂಬಾ ಔಷಧಿ, ಟೆಸ್ಟ್‌ ಗಳನ್ನು ಮಾಡಿಸಿದ್ದಾರೆ. ಪ್ರಯೋಜನವಾಗಿಲ್ಲ. ಈಗ ಅವರು ಸಂಬಂಧಿಕರಿಂದಲೇ ಎರಡು ತಿಂಗಳ ಮಗುವನ್ನು ದತ್ತು ಪಡೆದಿದ್ದಾರೆ. ಮಗುವಿಗೆ ತಾಯಿ ಹಾಲಿನೊಂದಿಗೆ ಡಬ್ಬದ ಹಾಲಿನ ಅಭ್ಯಾಸ ಮೊದಲೇ ಮಾಡಿಸಿದ್ದಾರೆ. ಮಗು ಹಾಲು ಕುಡಿಯುತ್ತದೆ. ಜೊತೆಗೆ ರಚ್ಚೆ ಹಿಡಿದು ಅಳುತ್ತದೆ. ನನ್ನ ಮಗಳು-ಅಳಿಯ ವಿದೇಶದಲ್ಲಿ ಇರುವುದರಿಂದ ಅಲ್ಲಿಯ ವೈದ್ಯರ ಸಲಹೆಯಂತೆ ನನ್ನ ಮಗಳಿಗೆ ಎದೆಹಾಲು (breast feed) ಉಣಿಸಲು ತಿಳಿಸಿದ್ದಾರೆ. ನನ್ನ ಮಗಳು ಹಾಗೆಯೇ ಮಾಡಿದ್ದಾಳೆ. ಮಗು ಈಗ ರಚ್ಚೆ ಹಿಡಿಯುವುದು ನಿಲ್ಲಿಸಿದೆ. ಬೆಳವಣಿಗೆ ಸಹ ಚೆನ್ನಾಗಿದೆ. ಮುಖ್ಯವಾಗಿ ನನ್ನ ಮಗಳಿಗೆ ಹೊಂದಿಕೊಂಡಿದೆ. ಆದರೆ ಸಮಸ್ಯೆ ಎಂದರೆ, ನನ್ನ ಮಗಳಿಗೆ ಎದೆಹಾಲು ಉತ್ಪತ್ತಿಯಾಗಿದೆ. ಇದರಿಂದ ಮಗುವಿಗಾಗಲಿ, ತಾಯಿ ಗಾಗಲಿ ತೊಂದರೆ ಆ­ಗುವುದಿಲ್ಲವೇ? ಹೆರಿಗೆ ಇಲ್ಲದೆ ಇದು ಸಾಧ್ಯವೇ ಅಥವಾ ಏನಾದರೂ ಕಾಯಿಲೆಯೇ? ಈ ಹಾಲು ಮಗುವಿಗೆ ಯೋಗ್ಯವೇ? ಗರ್ಭಕೋಶ ತೆಗೆದ ಮೇಲೆ ಲೈಂಗಿಕ ಕ್ರಿಯೆ ನಡೆಸುವುದು ಸಾಧ್ಯವೆ? ನಡೆಸಿದರೆ ತೊಂದರೆ ಏನಾದರೂ ಇದೆಯೆ?
ಜಲಜಾ, ಬೆಂಗಳೂರು
ಮೊಲೆ ತೊಟ್ಟು ಚೀಪುವುದರಿಂದ ಕೆಲವೊಮ್ಮೆ ಪ್ರೊಲಾಕ್ಟಿನ್‌ ಎಂಬ ಹಾರ್ಮೋನಿನ ಪ್ರಭಾವದಿಂದ ಹಾಲಿನಂತಹ ಸ್ರವಿಕೆ ಬರಬಹುದು. ಆದರೆ, ಅದರಲ್ಲಿ ಎದೆಹಾಲಿನಲ್ಲಿ ಇರುವ ಪೋಷಕಾಂಶಗಳು ಇರುವುದಿಲ್ಲ. ಹಾರ್ಮೋನಿನ ಪರೀಕ್ಷೆ ಮಾಡಿ ಅದು ಏರುಪೇರಾಗಿದ್ದರೆ ಅದಕ್ಕೆ ಚಿಕಿತ್ಸೆ ಕೊಡಬಹುದು. ಇದಕ್ಕೆ Galactorrhoea (ಗ್ಯಾಲಕ್ಟೋರಿಯ) ಎನ್ನುತ್ತಾರೆ. ಗರ್ಭಕೋಶವನ್ನು ತೆಗೆದ ನಂತರವೂ ಲೈಂಗಿಕ ಕ್ರಿಯೆ, ಮಿಲನಕ್ರಿಯೆ ನಡೆಸಬಹುದು. ಅದರಿಂದ ಯಾವುದೇ ತೊಂದರೆ ಇಲ್ಲ. ಚಿಕಿತ್ಸೆಯಲ್ಲಿ ಜನನಾಂಗವನ್ನು ತೆಗೆದಿರುವುದಿಲ್ಲ.

Advertisement

ನನ್ನ ವಯಸ್ಸು 29. ಮದುವೆಯಾಗಿ 7 ವರ್ಷವಾಗಿದೆ. ಆದರೆ ಮಕ್ಕಳಾಗಿಲ್ಲ. ನನ್ನ ಗಂಡನ ವಯಸ್ಸು 31. ಅವರಿಗೆ ವೀರ್ಯಾಣುಗಳ ಸಂಖ್ಯೆ ಕಡಿಮೆ ಇದೆ. ಇದರಿಂದ ಮಕ್ಕಳು ಆಗುವುದಿಲ್ಲ ಎಂದು ಡಾಕ್ಟರ್‌ ಹೇಳಿ ದ್ದಾರೆ. ನನಗೆ ಲೈಂಗಿಕ ಕ್ರಿಯೆಯಲ್ಲಿ , ಮಿಲನಕ್ರಿಯೆಯಲ್ಲಿ ಶೀಘ್ರ ಸ್ಖಲನ ಆಗುತ್ತದೆ. ಅದಕ್ಕೆ ನಾವು ಏನು ಮಾಡಬೇಕು? ಯಾವುದಾದರೂ ಮಾತ್ರೆ ಇದೆಯಾ? ಅದನ್ನು ಎಷ್ಟು ದಿನಕ್ಕೆ ಒಮ್ಮೆ ತೆಗೆದುಕೊಳ್ಳಬೇಕು. ಯಾವ ಹೊತ್ತಿಗೆ ತೆಗೆದುಕೊಳ್ಳಬೇಕು ನಮಗೆ ತಿಳಿಸಿ. ನನಗೆ ಮಕ್ಕಳು ಬೇಕು. ನನ್ನ ಸ್ನೇಹಿತ ಮಕ್ಕಳಾಗಲಿಕ್ಕೆ ಸಹಾಯ ಮಾಡುತ್ತೀನಿ ಅಂತ ಹೇಳಿದ್ದಾನೆ. ಅದು ನನಗೆ ಒಪ್ಪಿಗೆ ಆಗುತ್ತಿಲ್ಲ. ಹಾಗೆ ಮಾಡಿದರೆ ಮುಂದೆ ತೊಂದರೆ ಆಗಬಹುದೆ? ಅದರಿಂದ ನನಗೆ ಏಡ್ಸ್‌ ಬರಬಹುದೇ? ತುಂಬಾ ಭಯ ಆಗುತ್ತದೆ. ಏನು ಮಾಡಲಿ ತಿಳಿಸಿ. ನಾನು 5 ಬಾರಿ IVF ಮಾಡಿಸಿಕೊಂಡಿದ್ದೆ. ಇದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಏನು ಮಾಡಿದರೆ ನನಗೆ ಮಕ್ಕಳಾಗುತ್ತದೆ ಹೇಳಿ?
ವಾಣಿ, ಅಂಕೋಲಾ
ನಿಮ್ಮ ಪತಿಯ ಶೀಘ್ರಸ್ಖಲನದ ಸಮಸ್ಯೆಗೆ ಪರಿಹಾರ ಇದೆ. ಸರಿಯಾದ ಲೈಂಗಿಕ ತಜ್ಞರನ್ನು ಭೇಟಿಯಾಗಬೇಕು. ವೀರ್ಯಾಣುಗಳ ಸಂಖ್ಯೆ ಕಡಿಮೆ ಎಂದು ಮಕ್ಕಳಾಗುತ್ತಿಲ್ಲ ಎಂದು ತಿಳಿಸಿದ್ದೀರಿ. ದಾನಿ ವೀರ್ಯ ಕೃತಕ ವೀರ್ಯಧಾರಣೆಯನ್ನು ಪ್ರಯತ್ನಿಸಬಹುದು. ನಿಮ್ಮ ಗೆಳೆಯನ ಸಹಾಯದಿಂದ ಗರ್ಭ ಧರಿಸುವುದು ಖಂಡಿತ ತಪ್ಪು. ಅದರಿಂದ ತೊಂದರೆ ಖಂಡಿತ ಆಗುತ್ತದೆ. ನಿಮ್ಮ ಸಂಸಾರ ಒಡೆಯುತ್ತದೆ. ನಿಮ್ಮ ಗೆಳೆಯನಿಗೆ ಲೈಂಗಿಕ ಕಾಯಿಲೆ ಇದ್ದರೆ ನಿಮಗೂ ಬರುವ ಸಾಧ್ಯತೆ ಇರುತ್ತದೆ. ಆದ್ದರಿಂದ ನಿಮ್ಮ ಗೆಳೆಯನದು ಸಹಾಯ ಅಲ್ಲ, ನಿಮ್ಮ ಪರಿಸ್ಥಿತಿಯ ದುರ್ಬಳಕೆ ಅಷ್ಟೆ.

* ಡಾ. ಪದ್ಮಿನಿ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next