Advertisement

ಜನಪ್ರತಿನಿಧಿ-ಅಧಿಕಾರಿಗಳಿಂದ ಸೈನಿಕರಿಗೆ ಅವಮಾನ ಆರೋಪ

06:29 PM Oct 12, 2022 | Team Udayavani |

ಗದಗ: ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿ ಮಾಜಿ ಸೈನಿಕರು ಸಂಘಟಿತಗೊಂಡು, ಆ ಸಂಘದ ಪ್ರಥಮ ವಾರ್ಷಿಕೋತ್ಸವಕ್ಕೆ ಆಹ್ವಾನಿಸಿದ ಸಚಿವ-ಶಾಸಕರಾದಿಯಾಗಿ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಸೇರಿ ಜಿಲ್ಲಾಮಟ್ಟದ ಯಾವುದೇ ಅಧಿಕಾರಿಗಳೂ ಬಾರದೇ ಅವಮಾನಿಸಿದ್ದಾರೆ ಎಂದು ಅಖೀಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಬಸಲಿಂಗಪ್ಪ ಮುಂಡರಗಿ ಅಸಮಾಧಾನ ಹೊರಹಾಕಿದರು.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನಿಷ್ಟ 17 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ಬಂದ ಮಾಜಿ ಸೈನಿಕರಿಗೆ ಸರ್ಕಾರದಿಂದ ಜಮೀನು ಮಂಜೂರಿ ಸೇರಿ ಹಲವಾರು ಸೌಲಭ್ಯ ನೀಡಬೇಕು. ಆದರೆ, ಈವರೆಗೂ ಯಾವುದೇ ಸೌಲಭ್ಯ ಸಿಗುತ್ತಿಲ್ಲ ಎಂದರು.

ಇಂತಹ ಹಲವು ಸಮಸ್ಯೆಗಳು, ಪರಿಹಾರ ಕುರಿತು ಜನಪ್ರತಿನಿಧಿಗಳು ಮತ್ತು ಅದರಲ್ಲೂ ಮುಖ್ಯವಾಗಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲು ಮಾಜಿ ಸೈನಿಕರು ಹಾಗೂ ಅವರ ಕುಟುಂಸ್ಥರು ಸೇರಿದ್ದರು. ಆದರೆ, ಅವರಾರೂ ಕಾರ್ಯಕ್ರಮಕ್ಕೆ ಬರಲಿಲ್ಲ ಎಂದರು. ಆಹ್ವಾನಿಸಿದ್ದ ಅತಿಥಿಗಳು ತುರ್ತಾಗಿ ಕೆಲಸ ಬಂದರೆ, ಸೌಜನ್ಯಕ್ಕೆ ತಮ್ಮ ಪ್ರತಿನಿಧಿ ಅಥವಾ ಸಂದೇಶ ನೀಡುವ ಕೆಲಸ ಮಾಡಲಿಲ್ಲ. ಇದು ಮಾಜಿ ಸೈನಿಕರಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗದಿಂದ
ಸಿಗುತ್ತಿರುವ ಗೌರವ ಎಂದು ವ್ಯಂಗ್ಯವಾಡಿದರು.

ನಾವು ಅ. 2ರಂದೇ ಕಾರ್ಯಕ್ರಮ ನಿಯೋಜನೆ ಮಾಡಿದ್ದೆವು. ಆದರೆ, ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತವೆ, ಜನಪ್ರತಿನಿಧಿಗಳು ಹಾಗೂ ಜಿಲ್ಲಾಧಿಕಾರಿಗಳು ಸೇರಿ ಅಧಿಕಾರಿ ಸ್ಪಂದಿಸುತ್ತಾರೆ ಎಂಬ ಕಾರಣಕ್ಕೆ ಅ. 7ರಂದು ಹಮ್ಮಿಕೊಂಡೆವು. ಅವರು ನೀಡಿದ ದಿನಾಂಕದಂದೇ ಕಾರ್ಯಕ್ರಮ ಹಮ್ಮಿಕೊಂಡರೂ ಬಾರದಿರುವುದು ನೋವಿನ ಸಂಗತಿ ಎಂದರು.

ಮಾಜಿ ಸೈನಿಕರು ಹಮ್ಮಿಕೊಂಡಿರುವ ಒಂದು ಕಾರ್ಯಕ್ರಮಕ್ಕೆ ಆಗಮಿಸದೇ ಅಗೌರವ ತೋರುವಂತೆ ನಡೆದುಕೊಂಡವರು ಸಿಗಬೇಕಾದ ಸೌಲಭ್ಯ ಒದಗಿಸಿಕೊಡುವಲ್ಲಿ ಎಷ್ಟು ಆಸಕ್ತಿ ತೋರುತ್ತಾರೆ ಎಂಬುದು ನಮಗೆ ಯಕ್ಷ ಪ್ರಶ್ನೆಯಾಗಿದೆ. ಕೂಡಲೇ ಇದಕ್ಕೆ ಸಂಬಂಧಿಸಿದವರು ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದರು.

Advertisement

ಭಗತ್‌ಸಿಂಗ್‌ ಅಭಿಮಾನಿ ಬಳಗದ ಕಾರ್ಯದರ್ಶಿ ಮಂಜುನಾಥ ಮುಳಗುಂದ ಮಾತನಾಡಿ, ಆಹ್ವಾನಿತರು ತಾವು ಬರಲಾಗದಿದ್ದರೆ ತಮ್ಮ ಪ್ರತಿನಿಧಿಯನ್ನಾದರೂ ಕಳುಹಿಸುವ ಮೂಲಕ ಸೌಜನ್ಯ ಪ್ರದರ್ಶಿಸಬೇಕಿತ್ತು. ಈ ಬಗ್ಗೆ ಸಂಬಂಧಿಸಿದವರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾ ಗೌರವಾಧ್ಯಕ್ಷ ವಾಸಪ್ಪ ಶೆಟವಾಜಿ, ಉಪಾಧ್ಯಕ್ಷ ಎನ್‌.ಆರ್‌. ದೇವಾಂಗಮಠ, ನಿಂಗಪ್ಪ ಚೋರಗಸ್ತಿ, ದ್ಯಾಮನಗೌಡ ದಿಡ್ಡಿಮನಿ, ಸಂಗಪ್ಪ ಗೊಂದಿ ಇದ್ದರು.

ಮಾಜಿ ಸೈನಿಕರಿಗೆ ಜಮೀನು ಮಂಜೂರು ಮಾಡಬೇಕೆಂದಿದೆ. ಆದರೆ, 1964ರಿಂದಲೂ ಇದು ಕಾರ್ಯರೂಪಕ್ಕೆ ಬಂದಿಲ್ಲ. ಜನಪ್ರತಿನಿಧಿಗಳು ಯಾವುದೇ ಜಾತಿಯ ಸಭೆ ಅಥವಾ ಸಮಾರಂಭವಾಗಿದ್ದರೆ ಅಲ್ಲಿಗೆ ಕೊನೆ ಘಳಿಗೆಯಲ್ಲಾದರೂ ಹೋಗುತ್ತಾರೆ. ಪ್ರತಿಭಟಿಸಿದರೆ ಅಧಿಕಾರಿಗಳು ಹೋಗುತ್ತಾರೆ. ಆದರೆ, ನಾವು ಶಿಸ್ತಿನ ಸಿಪಾಯಿಗಳು. ನಮ್ಮ ನಿರ್ಲಕ್ಷ್ಯ ಸಲ್ಲದು.
ಬಸಲಿಂಗಪ್ಪ ಮುಂಡರಗಿ,
ಜಿಲ್ಲಾಧ್ಯಕ್ಷ, ಅಖಿಲ ಕರ್ನಾಟಕ ಮಾಜಿ
ಸೈನಿಕರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next